ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿ ಟ್ರಾಫಿಕ್ ಜಾಮ್: ಸರ್ಕಾರದ ವಿರುದ್ಧ ಬಿಜೆಪಿ ಆರೋಪ
ಬೆಂಗಳೂರು, ಸೆಪ್ಟೆಂಬರ್ 28: ಬುಧವಾರ ಸಂಜೆಯಿಂದ ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿ ಏರ್ಪಟ್ಟ ವಾಹನ ದಟ್ಟಣೆಯು ದೇಶದ ಗಮನ ಸೆಳೆದು ಇಂಟರ್‌ನೆಟ್‌ನಲ್ಲಿ ವೈರಲ್ ಆದ ಬೆನ್ನಲ್ಲೇ ಇತ್ತ ರಾಜಕೀಯಆರೋಪ ಪ್ರತ್ಯರೋಪಗಳಿಗೂ ಸಾಕ್ಷಿಯಾಯಿತು.
ಕರ್ನಾಟಕದ ಕಾಂಗ್ರೆಸ್ ಸರ್ಕಾರವು ನೇರಳೆ ಮಾರ್ಗದ ಕೆಆರ್ ಪುರ-ಬೈಯಪ್ಪನಹಳ್ಳಿ ಮಾರ್ಗವನ್ನು ಉದ್ಘಾಟಿಸಲು ವಿಳಂಬ ಮಾಡಿದ ಪರಿಣಾಮ ನಗರದ ಹೊರವರ್ತುಲ ರಸ್ತೆಯಲ್ಲಿ ಬುಧವಾರ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಬಿಜೆಪಿಯ ಲೋಕಸಭಾ ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪಿಸಿ ಮೋಹನ್ ಆರೋಪಿಸಿದ್ದಾರೆ.

ಈ ಸಂಬಂಧ ಎಕ್ಸ್‌ನಲ್ಲಿ ಬರೆದಿರುವ ಅವರು, ಬೆಂಗಳೂರು ಮೆಟ್ರೊ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್) ಸುರಕ್ಷತಾ ಅನುಮೋದನೆ ನೀಡಿದ ನಂತರವೂ ಮೆಟ್ರೋ ಮಾರ್ಗವನ್ನು ಏಕೆ ಸಾರ್ವಜನಿಕ ಬಳಕೆಗೆ ಉದ್ಘಾಟನೆ ಮಾಡಿಲ್ಲ ಎಂದು ಬೆಂಗಳೂರಿನ ಬಿಜೆಪಿ ಸಂಸದರು ಪ್ರಶ್ನಿಸಿದರು. ನೇರಳೆ ಮಾರ್ಗದಲ್ಲಿ ಬೈಯಪ್ಪನಹಳ್ಳಿ-ಕೆಆರ್ ಪುರಂ ಮಾರ್ಗವನ್ನು ತೆರೆಯಲು ರಾಜ್ಯ ಸರ್ಕಾರ ಕ್ರಮ ಕೈಗೊಂಡರೆ ಹೊರ ವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಬಹುದು ಎಂದು ಪಿಸಿ ಮೋಹನ್ ತಿಳಿಸಿದರು.
ಎಕ್ಸ್‌ನಲ್ಲಿ ಸಂಸದ ತೇಜಸ್ವಿ ಸೂರ್ಯ, ವಿಳಂಬ ಮಾಡದೆ ಕೆಆರ್ ಪುರ- ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗವನ್ನು ತೆರೆಯುವಂತೆ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಒತ್ತಾಯಿಸಿದರು. ಸಂಸದರಿಗೆ ತಿರುಗೇಟು ನೀಡಿರುವ ಕರ್ನಾಟಕ ಎಎಪಿ ಮುಖಂಡ ಅಶೋಕ್ ಮೃತ್ಯುಂಜಯ ಬೆಂಗಳೂರಿನಲ್ಲಿ ಉಪನಗರ ರೈಲ್ವೇ ಆರಂಭಿಸಲು ಬಿಜೆಪಿ ಏನೂ ಮಾಡಿಲ್ಲ. ಬೆಂಗಳೂರು ಟ್ರಾಫಿಕ್ ಕಡಿಮೆ ಮಾಡಲು ಬಿಜೆಪಿ ಯಾವುದೇ ಕೊಡುಗೆ ನೀಡಿಲ್ಲ. ಬಿಜೆಪಿಯವರು ತಮ್ಮ ವೈಫಲ್ಯಗಳಿಗೆ ಈಗಿನ ಸರಕಾರವನ್ನು ದೂಷಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಅಶೋಕ್ ಮೃತ್ಯುಂಜಯ ಅವರಿಗೆ ಪ್ರತಿಕ್ರಿಯಿಸಿರುವ ಸಂಸದ ಪಿಸಿ ಮೋಹನ್ ಅವರು ಸಾರಿಗೆ ಯೋಜನೆಗಳಿಗೆ ವಿವಿಧ ಮಧ್ಯಸ್ಥಗಾರರ ಸಹಯೋಗದ ಅಗತ್ಯವಿದೆ ಎಂದರು. ವರದಿಗಳ ಪ್ರಕಾರ, ಕೆಆರ್ ಪುರಂ-ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗವನ್ನು ಅಕ್ಟೋಬರ್ 2 ರೊಳಗೆ ತೆರೆಯಲಾಗುತ್ತದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಬಿಎಂಆರ್‌ಸಿಎಲ್‌ನಿಂದ ಅಧಿಕೃತ ಮಾಹಿತಿ ಇಲ್ಲ.
ನಗರ ಸಂಚಾರ ಪೊಲೀಸರು ಬುಧವಾರ ಹೊರವರ್ತುಲ ರಸ್ತೆ, ಮಾರತ್ತಹಳ್ಳಿ, ಸರ್ಜಾಪುರ ರಸ್ತೆಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಆಗಿರುವ ಹಿನ್ನೆಲೆಯಲ್ಲಿ ಜನರು ತಮ್ಮ ಕೆಲಸದ ಸ್ಥಳಗಳಿಂದ ಹೊರ ಬರಬೇಡಿ ಎಂದು ಮನವಿ ಮಾಡಿದ್ದರು. ಬುಧವಾರ ಒಆರ್‌ಆರ್‌ನಲ್ಲಿ ಜನರು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರು. ಕೆಲವರು ನಗರದ ಟ್ರಾಫಿಕ್ ಸಮಸ್ಯೆಯನ್ನು ನಿಭಾಯಿಸಲು ಸರ್ಕಾರವನ್ನು ದೂಷಿಸಿದರು.












Click it and Unblock the Notifications