Bengaluru Traffic: ಬೆಂಗಳೂರಿನ ಈ ರಸ್ತೆಗಳಲ್ಲಿ ವಾಹನ ಪಾರ್ಕಿಂಗ್‌ಗೆ ನಿರ್ಬಂಧ
ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟ್ವೆಂಟಿ-20 ಪಂದ್ಯಕ್ಕೂ ಮುನ್ನ ಬೆಂಗಳೂರು ಟ್ರಾಫಿಕ್ ಪೊಲೀಸರು (ಬಿಟಿಪಿ) ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ (ಸಿಬಿಡಿ) ನಲ್ಲಿ ವಾಹನ ನಿಲುಗಡೆಗೆ ನಿರ್ಬಂಧ ವಿಧಿಸಿದ್ದಾರೆ.
ಕ್ವೀನ್ಸ್ ರಸ್ತೆ, ಎಂಜಿ ರಸ್ತೆ, ರಾಜಭವನ ರಸ್ತೆ, ಸೆಂಟ್ರಲ್ ಸ್ಟ್ರೀಟ್, ಕಬ್ಬನ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರ್ಬಾ ರಸ್ತೆ, ಡಾ ಬಿಆರ್ ಅಂಬೇಡ್ಕರ್ ರಸ್ತೆ, ಲ್ಯಾವೆಲ್ಲೆ ರಸ್ತೆ, ವಿಟ್ಲ ಮಲ್ಯ ರಸ್ತೆ, ನೃಪತುಂಗ ರಸ್ತೆಯಲ್ಲಿ ವಾಹನ ನಿಲುಗಡೆಗೆ ನಿರ್ಬಂಧ ಹೇರಲಾಗಿದೆ. ಬುಧವಾರ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 11.30 ರವರೆಗೆ ಎಲ್ಲಾ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಜನರು ಪರ್ಯಾಯವಾಗಿ ಕಿಂಗ್ಸ್ ರಸ್ತೆ, ಯುಬಿ ಸಿಟಿ ಪಾರ್ಕಿಂಗ್ ಸ್ಥಳ ಮತ್ತು ಶಿವಾಜಿನಗರದ ಬಿಎಂಟಿಸಿ ಡಿಪೋದ ಮೊದಲ ಮಹಡಿಯಲ್ಲಿ ವಾಹನ ನಿಲುಗಡೆ ಮಾಡಬಹುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕ್ರಿಕೆಟ್ ವೀಕ್ಷಣೆಗೆ ಬರುವವರನ್ನು ಹೊರತು ಪಡಿಸಿ ಉಳಿದ ಪ್ರಯಾಣಿಕರು ಕ್ರೀಡಾಂಗಣದ ಸುತ್ತ ಮುತ್ತಲಿನ ರಸ್ತೆಗಳಲ್ಲಿ ಸಂಚಾರ ತಪ್ಪಿಸುವಂತೆ ಪೊಲೀಸರು ವಿನಂತಿಸಿದ್ದಾರೆ.
ಟ್ರಾಫಿಕ್ ಕಿರಿ ಕಿರಿ ತಪ್ಪಿಸಲು ಮೆಟ್ರೋ ಬಳಸಿ
ಟ್ರಾಫಿಕ್, ಪಾರ್ಕಿಂಗ್ ಕಿರಿ ಕಿರಿ ತಪ್ಪಿಸಲು ಪಂದ್ಯವನ್ನು ನೋಡಲು ಬರುವವರು ನಮ್ಮ ಮೆಟ್ರೋ ಸೇವೆಯವನ್ನು ಬಳಸಿಕೊಳ್ಳಬಹುದು. ಪಂದ್ಯದ ದಿನ ಬಿಎಂಆರ್ ಸಿಎಲ್ ನೇರಳೆ ಹಾಗೂ ಹಸಿರು ಮಾರ್ಗದಲ್ಲಿನ ನಾಲ್ಕು ಟರ್ಮಿನಲ್ ಮೆಟ್ರೋ ನಿಲ್ದಾಣಗಳಿಂದ ರೈಲು ಸೇವೆಗಳನ್ನು ರಾತ್ರಿ 11.45 ಗಂಟೆಯವರೆಗೆ ವಿಸ್ತರಣೆ ಮಾಡಿದೆ.
ಕ್ರಿಕೆಟ್ ನೋಡುವವರ ಅನುಕೂಲಕ್ಕಾಗಿ ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳನ್ನು ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆಯಿಂದ ಮಾರಾಟ ಮಾಡಲಾಗುತ್ತದೆ. ಈ ಟಿಕೆಟ್‌ಗಳು ರಾತ್ರಿ 8 ಗಂಟೆಯಿಂದ ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಯಾವುದೇ ಇತರ ಮೆಟ್ರೋ ನಿಲ್ದಾಣಕ್ಕೆ ಒಂದು ಪ್ರಯಾಣಕ್ಕೆ ಸೀಮಿತವಾಗಿರುತ್ತವೆ. ಈ ಪೇಪರ್ ಟಿಕೆಟ್‌ಗೆ ₹50 ನಿಗದಿ ಮಾಡಲಾಗಿದೆ.
ಪಂದ್ಯದ ದಿನದಂದು ಕ್ಯೂಆರ್ ಕೋಡ್ ಟಿಕೆಟ್‌ಗಳನ್ನು ಖರೀದಿಸಿದರೆ ಇಡೀ ದಿನಕ್ಕೆ ಮಾನ್ಯವಾಗಿರುತ್ತದೆ. ವಾಟ್ಸಾಪ್, ನಮ್ಮ ಮೆಟ್ರೋ ಆಫ್, ಪೇಟಿಎಂ ಮತ್ತು ಕ್ಯೂಆರ್‌ಕೋಡ್ ಬಳುಸುವಂತೆ ಬಿಎಂಆರ್ ಸಿಎಲ್ ಪ್ರಯಾಣಿಕರಿಗೆ ಮನವಿ ಮಾಡಿದೆ.












Click it and Unblock the Notifications