ಸಂಚಾರ ಸಲಹೆ; 2 ದಿನ ಬೆಂಗಳೂರು ಮೆಜೆಸ್ಟಿಕ್ ಮಾರ್ಗ ಬಳಕೆ ಕಡಿಮೆ ಮಾಡಿ
ಬೆಂಗಳೂರು, ಸೆಪ್ಟೆಂಬರ್ 15; ವಾರಾಂತ್ಯದ ಸರಣಿ ರಜೆ ಮತ್ತು ಗಣೇಶ ಚತುರ್ಥಿ ರಜೆ ಹಿನ್ನಲೆಯಲ್ಲಿ ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗುವ ನಿರೀಕ್ಷೆ ಇದೆ. ಆದ್ದರಿಂದ ಕೆಲವು ಪ್ರದೇಶಗಳಲ್ಲಿ ಸಂಚಾರ ನಡೆಸದಂತೆ ಸಂಚಾರಿ ಪೊಲೀಸರು ಸಲಹೆ ನೀಡಿದ್ದಾರೆ.
ಸೆಪ್ಟೆಂಬರ್ 16 ಶನಿವಾರ, ಸೆಪ್ಟೆಂಬರ್ 17 ಭಾನುವಾರ ರಜೆ ಇದೆ. ಸೆಪ್ಟೆಂಬರ್ 18ರ ಸೋಮವಾರ ಗಣೇಶ ಚತುರ್ಥಿ 2023ರ ರಜೆ ಇದೆ. ಈ ಹಿನ್ನಲೆಯಲ್ಲಿ ಬೆಂಗಳೂರು ನಗರದಿಂದ ಹೊರ ಊರುಗಳಿಗೆ ಸಂಚಾರ ನಡೆಸುವ ಜನರ ಸಂಖ್ಯೆ ಅಧಿಕವಾಗಿರುತ್ತದೆ.

ಹೊರ ಊರುಗಳಿಗೆ ತೆರಳಲು ಜನರು ಸರ್ಕಾರಿ ಬಸ್, ರೈಲು, ಖಾಸಗಿ ಬಸ್ ಹತ್ತಲು ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶಕ್ಕೆ ಆಗಮಿಸುತ್ತಾರೆ. ಆದ್ದರಿಂದ ಈ ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಈ ಕುರಿತು ಪೊಲೀಸರು ಜನರಿಗೆ ಸಲಹೆ ನೀಡಿದ್ದಾರೆ.
ಪೊಲೀಸರ ಫೇಸ್‌ಬುಕ್ ಪೋಸ್ಟ್; ಬೆಂಗಳೂರು ಸಂಚಾರಿ ಪೊಲೀಸರು ಈ ಕುರಿತು ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ. ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆಯ ಸರಹದ್ದಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಗೌರಿ ಮತ್ತು ಗಣೇಶ ಹಬ್ಬದ ಪ್ರಯುಕ್ತವಾಗಿ ಸುಮಾರು 1000ಕ್ಕೂ ಹೆಚ್ಚು ಕೆಎಸ್ಆರ್‌ಟಿಸಿ ಬಸ್‌ಗಳನ್ನು ಬಿಡಲಾಗಿದೆ.
ಈ ಹಿನ್ನೆಲೆಯಲ್ಲಿ ದಿನಾಂಕ 15/09/2023 & 16/09/2023ರಂದು ಹೆಚ್ಚಿನ ಸಂಖ್ಯೆಯಲ್ಲಿ ಹಬ್ಬಕ್ಕೆ ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳುವುದರಿಂದ ಮೆಜೆಸ್ಟಿಕ್ ಸುತ್ತ ಮುತ್ತ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಆದಷ್ಟು ಬದಲಿ ರಸ್ತೆ ಮಾರ್ಗದ ಮೂಲಕ ಸುರಕ್ಷಿತವಾಗಿ ತೆರಳುವಂತೆ ಈ ಮೂಲಕ ತಿಳಿಸಿದೆ ಎಂದು ಹೇಳಿದ್ದಾರೆ.
ಮೆಜೆಸ್ಟಿಕ್‌ಗೆ ಸರ್ಕಾರಿ ಮತ್ತು ಖಾಸಗಿ ಬಸ್ ಹತ್ತಲು ಜನರು ಆಗಮಿಸುತ್ತಾರೆ. ರೈಲು ನಿಲ್ದಾಣ ಸಹ ಅಲ್ಲಿಯೇ ಇದೆ. ಅಲ್ಲದೇ ಪ್ರತಿನಿತ್ಯ ಸಂಚಾರ ನಡೆಸುವ ಜನರು, ಪ್ರಯಾಣಿಕರನ್ನು ಬಸ್, ರೈಲಿಗೆ ಬಿಡಲು ಬರುವ ಜನರಿಂದ ಸಂಚಾರ ದಟ್ಟಣೆ ಉಂಟಾಗುವುದು ಖಚಿತ. ಆದ್ದರಿಂದ ಸಂಜೆಯ ಬಳಿಕ ಮೆಜೆಸ್ಟಿಕ್ ಸುತ್ತಮುತ್ತಲೂ ಸಂಚಾರ ನಡೆಸದಿರುವುದು ಉತ್ತಮ.
ಕೆಎಸ್‌ಆರ್‌ಟಿಸಿ ಗೌರಿ-ಗಣೇಶ ಹಬ್ಬದ ಹಿನ್ನಲೆಯಲ್ಲಿ ಸೆಪ್ಟೆಂಬರ್ 15, 16 ಮತ್ತು 17ರಂದು 1200 ಹೆಚ್ಚುವರಿ ಬಸ್ ಸಂಚಾರ ನಡೆಸಲಿದೆ. ವಿಶೇಷ ಬಸ್‌ಗಳು ಜಯನಗರ, ಪೀಣ್ಯ, ಸ್ಯಾಟಲೈಟ್ ಬಸ್ ನಿಲ್ದಾಣ, ವಿಜಯನಗರ ಬಸ್ ನಿಲ್ದಾಣ ಹೀಗೆ ವಿವಿಧ ಬಸ್ ನಿಲ್ದಾಣಗಳಿಂದಲೂ ಹೊರಡಲಿವೆ. ಆದರೆ ಪ್ರತಿನಿತ್ಯ ಸಂಚಾರ ನಡೆಸುವ ಬಸ್, ಕೆಲವು ಹೊರ ರಾಜ್ಯದ ಬಸ್‌ಗಳು ಮೆಜೆಸ್ಟಿಕ್‌ಗೆ ಬರಲಿವೆ.
ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್ ಮತ್ತು ತಿರುಪತಿಗೆ ಹೋಗುವ ಬಸ್‌ಗಳು ಸಂಚಾರ ನಡೆಸಲಿವೆ.
ಅಲ್ಲದೇ ಭಾರತೀಯ ರೈಲ್ವೆ ಸಹ ಗಣೇಶ ಚತುರ್ಥಿ ಹಿನ್ನಲೆಯಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಹೆಚ್ಚುವರಿ ರೈಲುಗಳನ್ನು ಓಡಿಸುತ್ತಿದೆ. ಪ್ರತಿನಿತ್ಯ ಸಂಚಾರ ನಡೆಸುವ ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಕೆ ಮಾಡುತ್ತಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಹೊರಡುವ ರೈಲು ಏರುವವರು ಮೆಜೆಸ್ಟಿಕ್‌ಗೆ ಆಗಮಿಸುತ್ತಾರೆ.
ಇದಲ್ಲದೇ ಖಾಸಗಿ ಬಸ್‌ಗಳು ಸಹ ಮೆಜೆಸ್ಟಿಕ್, ಆನಂದ ರಾವ್ ಬಸ್ ನಿಲ್ದಾಣದಿಂದ ಹೊರಡಲಿವೆ. ಆದ್ದರಿಂದ ಮೆಜೆಸ್ಟಿಕ್ ಕಡೆಗೆ ಸಾವಿರಾರು ಜನರು ಆಗಮಿಸಲಿದ್ದು, ಸಂಚಾರ ದಟ್ಟಣೆ ಉಂಟಾಗಲಿದೆ. ಆದ್ದರಿಂದ ಪರ್ಯಾಯ ಮಾರ್ಗದಲ್ಲಿ ಸಂಚಾರ ನಡೆಸಿ ಎಂದು ಸಲಹೆ ನೀಡಲಾಗಿದೆ.












Click it and Unblock the Notifications