Rain Problem: ಬೆಂಗಳೂರಿನಲ್ಲಿ ಮಳೆ ಬಂದರೆ ಪ್ರಮುಖ 5 ಪ್ರದೇಶಗಳು ಜಲಾವೃತ
ರಾಜ್ಯದಲ್ಲಿ ಮಳೆ ಆರಂಭವಾಗಿದೆ. ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಶುರುವಾಗಿದೆ. ಇನ್ನು ಹಲವು ಕಡೆಗಳಲ್ಲಿ ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ. ರಾಜ್ಯದ ಹಲವು ಪ್ರದೇಶಗಳು ಜಲಾವೃತವಾಗಿವೆ. ಬೆಂಗಳೂರಿನ ಜನರಿಗೂ ಮಳೆ ಬಂದರೆ ಕಿರಿಕಿರಿ ಕಟ್ಟಿಕಟ್ಟ ಬುತ್ತಿ.
ಬೆಂಗಳೂರು ಜನರಿಗೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಇನ್ನು ಟ್ರಾಫಿಕ್ ಸಮಸ್ಯೆಯ ಜೊತೆಗೆ ಇಲ್ಲಿನ ಜನರಿಗೆ ಮಳೆ ಬಂದರೆ ಹಲವು ಪ್ರದೇಶಗಳಲ್ಲಿ ನೀರು ನುಗ್ಗುತ್ತಿರುವುದು ಸಹ ಸಮಸ್ಯೆಯನ್ನು ಹೆಚ್ಚಿಸಿದೆ. ಇದರಿಂದ ಹಲವು ರೋಗಗಳಿಗ ಜನ ಬಲಿಯಾಗುತ್ತಾರೆ. ಹೀಗಾಗಿ ಜೋರಾಗಿ ಮಳೆ ಆರಂಭಕ್ಕೂ ಮುನ್ನವೇ ಬಿಬಿಎಂಪಿ ಈ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಿಕೊಳ್ಳಬೇಕಿದೆ.

ಮಾರತ್ತಹಳ್ಳಿ - ಬೆಳ್ಳಂದೂರು ವಿಸ್ತರಣೆ
ಬೆಂಗಳೂರು ಹೊರ ವಲಯದಲ್ಲಿ ಹೆಚ್ಚಾಗಿ ಬೆಳೆಯುತ್ತಿದೆ. ಮಾರತ್ತಹಳ್ಳಿ ಹಾಗೂ ಬೆಳ್ಳಂದೂರು ಪ್ರದೇಶದಲ್ಲಿ ಮಳೆ ಬಂದರೆ ಜನ ಕಿರಿಕಿರಿ ಅನುಭವಿಸುತ್ತಾರೆ. ಈ ಪ್ರದೇಶಗಳಲ್ಲಿ ಕೊಂಚ ಮಳೆ ಆದರೂ ಸಮಸ್ಯೆ ಕಟ್ಟಿಟ್ಟ ಬುತ್ತಿ. ಈ ಭಾಗದಲ್ಲಿರುವ ಕಾಡುಬೀಸನಹಳ್ಳಿ ಅಂಡರ್‌ಪಾಸ್‌ನಲ್ಲಿ ಸಾಧಾರಣ ತುಂತುರು ಮಳೆಯಾದರೂ ನೀರು ಬರುತ್ತದೆ. 2022 ರಲ್ಲಿ, ಭಾರೀ ಮಳೆಯಾದಾಗ ಈ ಪ್ರದೇಶ ತೀವ್ರ ತೊಂದರೆ ಅನುಭವಿಸಿತ್ತು.
ಬೆಳತ್ತೂರು-ಕಾಡುಗೋಡಿ ಮಾರ್ಗ
ಮಳೆಯಿಂದಾಗಿ ತೊಂದರೆಯನ್ನು ಅನುಭವಿಸುತ್ತಿರುವ ಪ್ರದೇಶಗಳಲ್ಲಿ ಬೆಂಗಳೂರಿನ ಬೆಳತ್ತೂರು-ಕಾಡುಗೋಡಿ ಮಾರ್ಗ ಸಹ ಒಂದಾಗಿದೆ. ಇಲ್ಲಿ ಮೂಲಸೌಕರ್ಯ, ರಸ್ತೆ ಸಮಸ್ಯೆ ಜನರನ್ನು ಕಾಡುತ್ತಿದೆ. ಬೆಂಗಳೂರಿನಲ್ಲಿ ಜೋರಾಗಿ ಮಳೆ ಬಂದರೆ, ಈ ಭಾಗಗಳಲ್ಲಿ ನೀರು ತುಂಬಿ ಕೊಳ್ಳುವುದು ಸಾಮಾನ್ಯ. ಬೆಂಗಳೂರಿನಲ್ಲಿ ಮಳೆ ಬಂದಾಗ ಇಲ್ಲಿನ ದೃಶ್ಯಗಳು ಸಾಮಾಜಿಕ ತಾಣದಲ್ಲಿ ಸಾಕಾಷ್ಟು ಸದ್ದು ಮಾಡುತ್ತವೆ.

ಕೋರಮಂಗಲ
ಬೆಂಗಳೂರಿನಲ್ಲಿ ಮಳೆ ಬಂದರೆ ಹೆಚ್ಚಾಗಿ ತೊಂದರೆ ಅನುಭವಿಸುವ ಪ್ರದೇಶಗಳಲ್ಲಿ ಕೋರಮಂಗಲ ಸಹ ಒಂದು. ಈ ಪ್ರದೇಶದಲ್ಲಿ ಹೆಚ್ಚಾಗಿ ಐಟಿ ಸಂಸ್ಥೆಗಳು ಹಾಗೂ ಐಟಿ ಉದ್ಯೋಗಿಗಳು ಇದ್ದಾರೆ. ಇನ್ನು ವೀಕೆಂಡ್ ಮೋಜು ಮಸ್ತಿಗೆ ಈ ಸ್ಪಾಟ್ ಹೇಳಿ ಮಾಡಿಸಿದ ತಾಣ. ಮಳೆ ಬಂತು ಎಂದರೆ ಈ ಪ್ರದೇಶಗಳತ್ತ ಜನರು ಮುಖ ಸಹ ಮಾಡಿ ಮಲಗುವುದಿಲ್ಲ. ಯಾವಾಗಲು ಜನಬೀಡಿನಿಂದ ಕೂಡಿರುವ ಕೋರಮಂಗಲದ 5ನೇ ಬ್ಲಾಕ್ ಮಳೆ ಬಂತೆದರೆ ಜಲಾವೃತವಾಗುತ್ತದೆ. ಈ ಸಮಸ್ಯೆ ಜನಪ್ರತಿನಿಧಿಗಳ ನಿದ್ದೆಗೆಡಿಸಿದ್ದು ಸುಳ್ಳಲ್ಲ.
ಯಮಲೂರು
ಮಳೆ ಬಂತೆದರೆ ಬೆಂಗಳೂರು ಯಮಲೂರು ಪ್ರದೇಶವೂ ಸಹ ಕಿರಿಕಿರಿ ಅನುಭವಿಸುತ್ತೆ. ಈ ಪ್ರದೇಶದಲ್ಲಿ ದುಬಾರಿ ಮನೆಗಳು ಇವೆ. ಆದರೆ ಈ ಪ್ರದೇಶದಲ್ಲಿ ಒಳ ಚರಂಡಿ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುತ್ತಿದೆ. 2022ರಲ್ಲಿ ಮಳೆ ಆದಾಗ ಈ ಪ್ರದೇಶ ಸಹ ಅತಿ ಹೆಚ್ಚು ಹಾನಿಗೆ ಒಳಗಾಗಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಅಧಿಕಾರಿಗಳು ಕಂಡು ಹಿಡಿಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಕೊಡಿಗೇಹಳ್ಳಿ-ಹೆಬ್ಬಾಳ-ನಾಗವಾರ ವಿಸ್ತರಣೆ
ಬೆಂಗಳೂರಿನ ನಗರದಿಂದ ಹೊರ ಹೋಗಲು ಜನರು ತೊಂದರೆ ಪಡುತ್ತಾರೆ. ಇಕಟ್ಟಾದ ರಸ್ತೆಗಳು, ಹೆಚ್ಚಿನ ವಾಹನ ದಟ್ಟಣೆ, ಅಲ್ಲಲ್ಲಿ ರಸ್ತೆ ಕೆಟ್ಟಿರುವುದು ಬೆಂಗಳೂರಿಗೆ ಬರುವ ಹಾಗೂ ಹೋರ ಹೋಗುವ ಜನರಿಗೆ ಕಿರಿಕಿರಿ ಮಾಡುತ್ತದೆ. ಮಳೆಯಾದರೆ ಸಾಕು ವಿಮಾನ ನಿಲ್ದಾಣದ ಪ್ರಯಾಣಿಕರು ಸಹ ದಟ್ಟಣೆಯಲ್ಲಿ ಸಿಲುಕಿ ನೀರು ತೆರವುಗೊಳ್ಳುವವರೆಗೆ ಕಾಯುತ್ತಾರೆ. ಈ ಭಾಗದಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿ ಅವ್ಯವಸ್ಥೆಯನ್ನು ಹೆಚ್ಚಿಸಿದೆ.












Click it and Unblock the Notifications