SWR: ನವೆಂಬರ್ 25ಕ್ಕೆ ಮೂರು ರೈಲುಗಳ ಮಾರ್ಗ ಬದಲಾವಣೆ, ನಿಲುಗಡೆ ರದ್ದು
ಬೆಂಗಳೂರು, ನವೆಂಬರ್ 24: ಬೆಳಂದೂರು ರಸ್ತೆ-ಕಾರ್ಮೆಲಾರಂ ಸ್ಟೇಷನ್‌ಗಳ ನಡುವೆ ಎರಡನೇ ರೈಲು ಮಾರ್ಗ (Second Railway Line) ಕಾರ್ಯಾರಂಭ ಹಾಗೂ ಸಂಬಂಧಿತ ಕಾಮಗಾರಿಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ರೈಲು ಸಂಚಾರಕ್ಕೆ ತಾತ್ಕಾಲಿಕ ಬದಲಾವಣೆಗಳು ಅನಿವಾರ್ಯವಗಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 25 ರಂದು 03 ರೈಲುಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಲಿವೆ ಎಂದು ನೈಋತ್ಯ ರೈಲ್ವೆ (SWR) ಮಾಹಿತಿ ನೀಡಿದೆ.
ನಗರ-ಹೊಸೂರು ಸೆಕ್ಟರ್‌ನಲ್ಲಿ ನಡೆಯುತ್ತಿರುವ ಈ ಮಹತ್ವದ ಕಾಮಗಾರಿ ಭವಿಷ್ಯದಲ್ಲಿ ರೈಲು ಸಂಚಾರದ ದಟ್ಟಣೆಯನ್ನು ಕಡಿಮೆ ಮಾಡಿ, ವೇಗ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನೆರವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಸದ್ಯ ನವೆಂಬರ್ 25ರಂದು ಯಾವೆಲ್ಲ ರೈಲುಗಳ ಮಾರ್ಗ ಬದಲಾವಣೆ ಆಗಿದೆ ಎಂಬ ಪಟ್ಟಿ ಇಲ್ಲಿದೆ.

ಈ ರೈಲುಗಳ ಮಾರ್ಗ ಬದಲಾವಣೆ, ಪಟ್ಟಿ
* ಸೇಲಂ-ಯಶವಂತಪುರ ಎಕ್ಸ್‌ಪ್ರೆಸ್ ರೈಲು (16212) ಇದೇ ನವೆಂಬರ್ 25 ರಂದು ಸಂಚಾರ ಮಾಡಬೇಕಿದೆ. ಈ ರೈಲು ನಿಗದಿತ ಮಾರ್ಗದ ಬದಲಾಗಿ, ಪರ್ಯಾಯ ಮಾರ್ಗಗಳಾದ ಸೇಲಂ, ತಿರುಪತ್ತುರ್, ಕೃಷ್ಣರಾಜಪುರಂ, SMVT ಬೆಂಗಳೂರು ಮೂಲಕ ಬಾಣಸವಾಡಿ ನಿಲ್ದಾಣಕ್ಕೆ ಬಂದು ಸೇರುತ್ತದೆ. ಈ ರೈಲಿನ ಓಮಲೂರು ನಿಲ್ದಾಣ ಮತ್ತು ಬೆಳಂದೂರು ರಸ್ತೆ ನಿಲ್ದಾಣದಲ್ಲಿನ ನಿಲುಗಡೆ ರದ್ದುಗೊಳಿಸಲಾಗಿದೆ.
* SMVT ಬೆಂಗಳೂರು-ಕಾರೈಕಲ್ ಎಕ್ಸ್‌ಪ್ರೆಸ್ ರೈಲು (16529) ನವೆಂಬರ್ 25 ರಂದು ಪರ್ಯಾಯ ಮಾರ್ಗಗಳಾದ ಬೈಯ್ಯಪ್ಪನಹಳ್ಳಿ, ಕೃಷ್ಣರಾಜಪುರಂ, ತಿರುಪತ್ತುರ್, ಸೇಲಂ ಮಾರ್ಗವಾಗಿ ಸಾಗಿ ಬರಲಿದೆ. ಓಮಲೂರು ನಿಲ್ದಾಣ ಮತ್ತು ಬೆಳಂದೂರು ರಸ್ತೆ ನಿಲ್ದಾಣದಲ್ಲಿ ಈ ರೈಲು ಸಹ ನಿಲ್ಲುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
* ಯಶವಂತಪುರ-ಸೇಲಂ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲು (16211) ನವೆಂಬರ್ 25ರಂದು ನಿಗದಿತ ಮಾರ್ಗದಲ್ಲಿ ಸಂಚಾರ ಮಾಡದೇ ಬದಲಾದ ಪರ್ಯಾಯ ಮಾರ್ಗಗಳಾದ ಬಾಣಸವಾಡಿ, SMVT ಬೆಂಗಳೂರು, ಕೃಷ್ಣರಾಜಪುರಂ, ತಿರುಪತ್ತುರ್ ಮೂಲಕ ಸೇಲಂ ತಲುಪುತ್ತದೆ. ಕಾಮಗಾರಿ ಪ್ರಯುಕ್ತ ಬೆಳಂದೂರು ರಸ್ತೆ, ಓಮಲೂರು ನಿಲ್ದಾಣದಲ್ಲಿನ ನಿಲುಗಡೆ ರದ್ದುಗೊಳಿಸಲಾಗಿದೆ.
ಬೆಳಂದೂರು ರಸ್ತೆ-ಕಾರ್ಮೆಲಾರಂ ನಡುವೆ ಎರಡನೇ ಮಾರ್ಗ ಕಾಮಗಾರಿ ಅಂತಿಮ ಹಂತದಲ್ಲಿದೆ. ಅದಕ್ಕಾಗಿ ಟ್ರ್ಯಾಕ್ ಸಂಪರ್ಕ, ಸಿಗ್ನಲ್ ಸಮನ್ವಯ ಮತ್ತು ಸುರಕ್ಷತಾ ಪರಿಶೀಲನೆ ನಡೆಸಬೇಕಿದೆ. ಹೀಗಾಗಿ ಕಾಮಗಾರಿ, ಇತರ ಕಾರ್ಯ ನಡೆಯುತ್ತಿದೆ. ಒಮ್ಮೆ ಈ ಮಾರ್ಗವು ಸಿದ್ಧವಾದರೆ, ರೈಲು ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಬೆಂಗಳೂರು-ಹೊಸೂರು ಮಾರ್ಗದ ಟ್ರೈನ್ ಅವಧಿ ಕಡಿಮೆಯಾಗಲಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications