Video: ಸಿಲಿಕಾನ್ ಸಿಟಿಯಲ್ಲಿ ಬೈಕ್ ನಲ್ಲಿ ಬಂದ ಮೊಬೈಲ್ ಕಳ್ಳರು!
ಬೆಂಗಳೂರು, ನವೆಂಬರ್.01: ಸಿಲಿಕಾನ್ ಸಿಟಿಯಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲವೇ ಎಂಬ ಪ್ರಶ್ನೆ ಆಗಾಗ ಹುಟ್ಟಿಕೊಳ್ಳುತ್ತದೆ. ಅದೇ ಪ್ರಶ್ನೆಯನ್ನು ಮತ್ತೊಮ್ಮೆ ಕೇಳಿಕೊಳ್ಳಬೇಕಾದಂತಹ ಘಟನೆಯೊಂದು ಶನಿವಾರ ಬೆಂಗಳೂರಿನ ಕಲ್ಯಾಣ ನಗರದಲ್ಲಿ ನಡೆದಿದೆ.
ಬೆಂಗಳೂರಿನ ಕಲ್ಯಾಣ ನಗರದಲ್ಲಿ ಸರಿ ಸುಮಾರು ರಾತ್ರಿ 8.25ರ ಸುಮಾರಿಗೆ ಬಸ್ ನಿಲ್ದಾಣದ ಬಳಿ ಮಹಿಳೆಯೊಬ್ಬರು ಬಸ್ ಗಾಗಿ ಕಾದು ನಿಂತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳು ಮಹಿಳೆಯ ಕೈಯಲ್ಲಿದ್ದ ಪರ್ಸ್ ಮತ್ತು ಮೊಬೈಲ್ ನ್ನು ಕಿತ್ತುಕೊಂಡು ಕ್ಷಣಮಾತ್ರದಲ್ಲೇ ಪರಾರಿ ಆಗಿದ್ದಾರೆ.

ದುಷ್ಕರ್ಮಿಗಳನ್ನು ಮತ್ತೊಬ್ಬ ದ್ವಿಚಕ್ರ ವಾಹನ ಸವಾರನು ಹಿಂಬಾಲಿಸಿದರೂ ಆತನಿಗೆ ಬೆದರಿಕೆ ಹಾಕಿದ ಖದೀಮರು ಕಣ್ಣು ಮುಚ್ಚಿ ಕಣ್ಣು ಬಿಡುವುದರಲ್ಲೇ ಕಣ್ಮರೆಯಾಗುತ್ತಾರೆ. ಈ ಸಂಪೂರ್ಣ ದೃಶ್ಯವನ್ನು ಕಾರು ಚಾಲಕರೊಬ್ಬರು ತಮ್ಮ ಕಾರಿನ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ದುಷ್ಕರ್ಮಿಗಳನ್ನು ಬೆನ್ನಟ್ಟಿದ ಕಾರು ಚಾಲಕ:
"ಕಲ್ಯಾಣ ನಗರ ಬಸ್ ನಿಲ್ದಾಣದಲ್ಲಿ ದುಷ್ಕರ್ಮಿಗಳು ಮಹಿಳೆಯ ಮೊಬೈಲ್ ಮತ್ತು ಪರ್ಸ್ ಕಿತ್ತುಕೊಂಡು ಪರಾರಿ ಆಗಿದ್ದನ್ನು ಕಂಡು ನಾನೂ ಕೂಡಾ ಅವರನ್ನು ಹಿಂಬಾಲಿಸಿಕೊಂಡು ಹೋದೆನು. ಆದರೆ ಮುಖ್ಯರಸ್ತೆಯಿಂದ ಸ್ವಲ್ಪ ದೂರದಲ್ಲಿದ್ದ ಫ್ಲೈಓವರ್ ಪಕ್ಕದ ರಸ್ತೆಯಲ್ಲಿ ಅವರು ವೇಗವಾಗಿ ಸಂಚರಿಸಿದ್ದು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರೆ. ದ್ವಿಚಕ್ರ ವಾಹನ ಸವಾರರ ಕೃತ್ಯಕ್ಕೆ ಸಂಬಂಧಿಸಿದ ದೃಶ್ಯವನ್ನು ಕಾರಿನಲ್ಲಿದ್ದ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದ್ದು, ಇದನ್ನು ಆಧರಿಸಿ ಆರೋಪಿಗಳನ್ನು ಬಂಧಿಸುವಂತೆ ಮನವಿ ಮಾಡಿಕೊಳ್ಳುತ್ತೇನೆ" ಎಂದು ಕಾರು ಚಾಲಕರು ಹೇಳಿದ್ದಾರೆ.












Click it and Unblock the Notifications