Caste Survey: ಬಿಬಿಎಂಪಿ ಮೂವರು ಅಧಿಕಾರಿಗಳ ಅಮಾನತು
ಬೆಂಗಳೂರು, ಜುಲೈ 03: ಬಿಬಿಎಂಪಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಗಳ ದತ್ತಾಂಶಗಳನ್ನು ಶೇಖರಿಸಲು ಯಶಸ್ವಿಯಾಗಿ ಸಮೀಕ್ಷೆ ಕಾರ್ಯ ನಡೆಸಲಾಗುತ್ತಿದೆ. 05-05-2025 ರಿಂದ ಪರಿಶಿಷ್ಟ ಜಾತಿಯ ಕುಟುಂಬಗಳನ್ನು ಸರ್ವೆ ಮಾಡುತ್ತಿದ್ದು, ಈ ಪರಿಶಿಷ್ಟ ಜಾತಿಗೆ ಜಾತಿ ಜನಗಣತಿ ನಡೆಸುವಾಗ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಂದಾಯ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ರಮೇಶ್, ಪೆದ್ದರಾಜು ಮತ್ತು ಸಿ ಸೆಂಥಿಲ್ ಕುಮಾರ್ ಎಂಬ ಮೂವರು ಅಮಾನತಗೊಂಡು ಅಧಿಕಾರಿಗಳಾಗಿದ್ದಾರೆ. ನಗರದ ಹೆಚ್.ಬಿ.ಆರ್ ಲೇಔಟ್ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ಪರಿವೀಕ್ಷಕರಾದ ರಮೇಶ್, ಕಂದಾಯ ವಸೂಲಿಗಾರರಾದ ಪೆದ್ದುರಾಜು ಹಾಗೂ ಕೆಂಗೇರಿ ಉಪ ವಿಭಾಗ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ವಸೂಲಿಗಾರರಾದ ಸಿ. ಸಂದಿಲ್ ಕುಮಾರ್ ರವರನ್ನು ಕರ್ತವ್ಯಲೋಪದ ಮೇರೆಗೆ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ ಎಂದು ಪೂರ್ವ ವಲಯದ ಆಯುಕ್ತರು ತಿಳಿಸಿದ್ದಾರೆ.

ಹೌದು, ಪರಿಶಿಷ್ಟ ಜಾತಿ ಒಳ ಮೀಸಲಾತಿ ಕುರಿತಂತೆ ನ್ಯಾ.ಡಾ.ಹೆಚ್.ಎನ್.ನಾಗಮೋಹನ್ ದಾಸ್ ರವರ ಏಕ ಸದಸ್ಯ ವಿಚಾರಣಾ ಆಯೋಗ ರಚಿಸಲಾಗಿದೆ. ಅದರನ್ವಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಗಳ ದತ್ತಾಂಶಗಳ ಸಮೀಕ್ಷೆ ಕೈಗೊಳ್ಳಲಾಗಿದೆ. ಪೂರ್ವ ವಲಯದ 6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸದರಿ ಸರ್ವೆ ಕಾರ್ಯವು ಪ್ರಗತಿಯಲ್ಲಿದೆ. ಸಮೀಕ್ಷೆ ಕಾರ್ಯದ ಖಚಿತತೆಗಾಗಿ ಪ್ರತಿ ಮನೆಗೆ ಸ್ಟಿಕರ್ ಅಂಟಿಸುವ ಕಾರ್ಯದ ಸಂಬಂಧ ಪೂರ್ವಭಾವಿಯಾಗಿ ದಿನಾಂಕ: 16-06-2025 ರಿಂದಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು, ಪ್ರತಿ ವಾರ್ಡ್‌ಗೆ ಕನಿಷ್ಟ 10 ಜನ ಗಣತಿದಾರರನ್ನು ನೇಮಕ ಮಾಡಲಾಗಿದೆ. ಜೂನ್ 23, 2025 ರಿಂದ ಮನೆ ಮನೆಗೆ ಸ್ಟಿಕರ್ ಅಂಟಿಸುವ ಕಾರ್ಯಕ್ಕೆ ಸೂಚಿಸಲಾಗಿದೆ.
ಬಿಬಿಎಂಪಿ ಮುಖ್ಯ ಆಯುಕ್ತರು ದಿನಾಂಕ 22-06-2025 ರಂದು ಸಮೀಕ್ಷೆ ಕಾರ್ಯದ ಖಚಿತತೆಗಾಗಿ ಉಲ್ಲೇಖ(3) ರನ್ವಯ ದಿನಾಂಕ 23-06-2025 ರಿಂದ ಪ್ರತಿ ಮನೆ ಸ್ಟಿಕರ್ ಅಂಟಿಸಿ, ಸಮೀಕ್ಷೆಯಿಂದ ಹೊರಗುಳಿದ ಮನೆಗಳನ್ನು ಕಡ್ಡಾಯವಾಗಿ ಸಮೀಕ್ಷೆ ಮಾಡಿ ಸ್ಟಿಕರ್ ಅಂಟಿಸುವಂತೆ ಸಹ ಆದೇಶಿಸಿದ್ದಾರೆ. ಕಂದಾಯ ವಿಭಾಗದ ವಿಶೇಷ ಆಯುಕ್ತ ಸಹ ಸಭೆಯಲ್ಲಿ ಸಮೀಕ್ಷೆ, ಮನೆ ಮನೆಗೆ ಸ್ಟಿಕರ್ ಅಂಟಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹೇಳಿದ್ದರು. ಹಿರಿಯ ಅಧಿಕಾರಿಗಳ ಆದೇಶ ಪಾಲಿಸದೇ ಉಲ್ಲಂಘಿಸಿದ್ದಕ್ಕಾಗಿ ಮೂರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಗುರುವಾರ ಬಿಬಿಎಂಪಿ ಮಾಹಿತಿ ನೀಡಿದೆ.












Click it and Unblock the Notifications