ಧರ್ಮದ ಬಗ್ಗೆ ಭಾಷಣ ಮಾಡುವವರು ಧರ್ಮವಂತರಾಗಿ ಬದುಕುತ್ತಿಲ್ಲ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ
ಬೆಂಗಳೂರು ಸೆಪ್ಟೆಂಬರ್ 1: ಬಟ್ಟೆ ಬಿಚ್ಚಿ ದೇವಾಲಯಕ್ಕೆ ಬನ್ನಿ ಎನ್ನುವುದು ಅಮಾನವೀಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ದೇವರನ್ನು ಮುಂದಿಟ್ಟುಕೊಂಡು ಜಾತಿ, ಧರ್ಮದ ನಡುವೆ ಸಂಘರ್ಷ ಸೃಷ್ಟಿಸುವುದು ದೇವರಿಗೆ ಮಾಡಿದ ಅವಮಾನ ಮತ್ತು ಮನುಷ್ಯನ ವಿಕೃತಿ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಶ್ರೀ ನುಲಿಯ ಚಂದಯ್ಯ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ಕುಳುವ ಸಮುದಾಯವನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ತೆಗೆಯಲು ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆಯ ಮಾತುಗಳನ್ನು ಆಡಿದರು.

'ದೇವರ ದೃಷ್ಟಿಯಲ್ಲಿ ಎಲ್ಲರೂ ಒಂದೇ. ಬಟ್ಟೆ ಬಿಚ್ಚಿ ದೇವಾಲಯಕ್ಕೆ ಬನ್ನಿ ಎನ್ನುವುದು ದೇವರ ದೃಷ್ಟಿಯಲ್ಲೂ ಅಮಾನವೀಯ. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಜಾತಿ, ಧರ್ಮಗಳ ನಡುವೆ ಸಂಘರ್ಷ ಸೃಷ್ಟಿಸುವ ಶಕ್ತಿಗಳು ನಾರಾಯಣಗುರುಗಳ ಅವಧಿಯಲ್ಲೂ ಇದ್ದವು. ಈಗಲೂ ಇವೆ. ನಾರಾಯಣಗುರುಗಳು ಸಂಘರ್ಷಕ್ಕೆ ಅವಕಾಶ ನೀಡದೆ ಸಮಾಜದಲ್ಲಿ ವ್ಯಾಪಕ ಬದಲಾವಣೆ ತಂದರು. ಸಮಾಜ ಸುಧಾರಣೆಯ ಕ್ರಾಂತಿಕಾರಕ ಧಾರ್ಮಿಕ ಚಳವಳಿ ಪರಿಣಾಮವಾಗಿ ಕೇರಳದಲ್ಲಿ 60 ದೇವಸ್ಥಾನಗಳನ್ನು ನಿರ್ಮಿಸಿದರು. ಉಳಿದ ದೇವಸ್ಥಾನಗಳಿಗೆ ಪ್ರವೇಶ ಇಲ್ಲದ ಶೂದ್ರ ಮತ್ತು ದಲಿತ ಸಮುದಾಯವನ್ನು ತಾವೇ ಕಟ್ಟಿಸಿದ ದೇವಸ್ಥಾನಗಳ ಒಳಗೆ ಕರೆತಂದರು' ಎಂದು ಸ್ಮರಿಸಿದರು.
'ನಾರಾಯಣಗುರುಗಳು ಒಂದು ಜಾತಿ, ಧರ್ಮಕ್ಕೆ ಸೇರಿದವರಲ್ಲ. ಅವರು ಜಾತಿ-ಧರ್ಮದ ತಾರತಮ್ಯಗಳನ್ನು ಮೀರಿದ ವಿಶ್ವಮಾನವ. ಹಾಗಾಗಿ, ಅವರ ಜಯಂತಿಯನ್ನು ಸರ್ಕಾರವೇ ಆಚರಿಸಬೇಕು ಎಂದು ಆದೇಶ ಮಾಡಿದೆ' ಎಂದರು.
ಇದೇ ವೇಳೆ ಅವರು, ಕುಳುವ ಸಮಾಜದ ಹಲವರಲ್ಲಿ ತಮ್ಮನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಹೊರಗೆ ಇಡಬಹುದು ಎನ್ನುವ ಆತಂಕ ಹಲವರಲ್ಲಿದೆ. ಆದರೆ, ನಾನು ಹೇಳ್ತಾ ಇದ್ದೇನೆ. ಆ ಆತಂಕ ಬೇಡ ಎಂದರು.

ಶಿಕ್ಷಣ ಹೆಚ್ಚಾದಷ್ಟೂ ಜಾತಿ ವ್ಯವಸ್ಥೆ ನಶಿಸಬೇಕಿತ್ತು. ಆದರೆ ಹಾಗೇ ಉಳಿದುಕೊಂಡಿದೆ. ಬಸವಾದಿ ಶರಣರು 12 ನೇ ಶತಮಾನದಲ್ಲೇ ಜಾತಿ ವ್ಯವಸ್ಥೆ ಮತ್ತು ತಾರತಮ್ಯದ ವಿರುದ್ಧ ಕ್ರಾಂತಿ ಮಾಡಿದ್ದರು. ನುಲಿಯ ಚಂದಯ್ಯ ಬಸವಾದಿ ಶರಣರಲ್ಲಿ ಪ್ರಮುಖರು. ಶರಣರಲ್ಲೇ ಅಗ್ರಗಣ್ಯರು. ಹೀಗಾಗಿ ಬಸವಣ್ಣನವರಿಗೆ ನುಲಿಯ ಚಂದಯ್ಯರ ಬಗ್ಗೆ ಬಹಳ ಅಭಿಮಾನ ಪ್ರೀತಿ ಇತ್ತು ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ಸನಾದಿ ಅಪ್ಪಣ್ಣ ಕೂಡ ಕುಳುವ ಸಮಾಜದವರು. ಡಾ.ರಾಜ್ ಕುಮಾರ್ ಅವರ ಅಭಿನಯದ ಸನಾದಿ ಅಪ್ಪಣ್ಣ ಸಿನಿಮಾವನ್ನು ನಾನು ಹಲವು ಬಾರಿ ನೋಡಿದ್ದೇನೆ. ನನಗೆ ರಾಜ್ ಕುಮಾರ್ ಅವರ ಸಿನಿಮಾವನ್ನು ಬರಿ ಒಂದು ಸಾರಿ ನೋಡಿದರೆ ಸಮಾಧಾನ ಆಗುತ್ತಿರಲಿಲ್ಲ. ಅದಕ್ಕೇ ಪದೇ ಪದೇ ನೋಡುತ್ತಿದ್ದೆ ಎಂದರು.
ಸಮಾಜದಲ್ಲಿ ಸ್ವಾರ್ಥಿಗಳಿಂದ ಜಾತಿ ವ್ಯವಸ್ಥೆ ರೂಪುಗೊಂಡಿತು. ಯಾವ್ಯಾವ ಕಸುಬನ್ನು ಯಾರು ಮಾಡುತ್ತಿದ್ದಾರೋ ಅದದೇ ಕಸುಬನ್ನೇ ಮಾಡಿಕೊಂಡಿರಲಿ. ಅವರ್ಯಾರೂ ಪ್ರಗತಿ ಕಾಣಬಾರದು ಎನ್ನುವ ಸ್ವಾರ್ಥ ಜಾತಿ ವ್ಯವಸ್ಥೆಗೆ ಕಾರಣ ಎಂದರು.
ಧರ್ಮವನ್ನು ಅರ್ಥ ಮಾಡಿಕೊಳ್ಳಲು ದೊಡ್ಡ ಗ್ರಂಥಗಳನ್ನು ಓದುವ ಅಗತ್ಯವಿಲ್ಲ. ಮನುಷ್ಯ ಮನುಷ್ಯನನ್ನು ಪ್ರೀತಿಸುವುದೇ ಧರ್ಮ. ಜಾತಿ-ಧರ್ಮದ ಹೆಸರಲ್ಲಿ ಮನುಷ್ಯರನ್ನು ದ್ವೇಷಿಸುವುದೇ ಅಧರ್ಮ. ಧರ್ಮದ ಬಗ್ಗೆ ಭಾಷಣ ಮಾಡುವುದು ಸುಲಭ. ಆದರೆ ಧರ್ಮವಂತರಾಗಿ ಬದುಕುವುದು ಕಷ್ಟ. ಧರ್ಮದ ಬಗ್ಗೆ ಭಾಷಣ ಮಾಡುವವರು ಧರ್ಮವಂತರಾಗಿ ಬದುಕುತ್ತಿದ್ದಾರಾ ಎಂದು ಸಿಎಂ ಪ್ರಶ್ನಿಸಿದರು.
ಸಾಣೇಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ವಹಿಸಿದ್ದರು. ಕೊರಮ ಕೊರಚ ಕೊರವ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಶಿವಾನಂದ ಎಂ ಭಜಂತ್ರಿ, ಸಮುದಾಯದ ಮುಖಂಡರುಗಳಾದ AKMS ನ ಪಲ್ಲವಿ, ಬಿ.ಎಸ್.ಆನಂದಕುಮಾರ್ ಏಕಲವ್ಯ, ಆದರ್ಶ್ ಯಲ್ಲಪ್ಪ, ಎಂ.ವೆಂಕಟೇಶ್, ಜಿ.ಚಂದ್ರಣ್ಣ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿದ್ದರು.
ನುಲಿಯ ಚಂದಯ್ಯ ಭವನಕ್ಕೆ ನಿವೇಶನ ಮತ್ತು ಅನುದಾನ
ನುಲಿಯ ಚಂದಯ್ಯ ಭವನ ನಿರ್ಮಾಣಕ್ಕೆ ಅಗತ್ಯ ನಿವೇಶನ ಮತ್ತು ಅನುದಾನ ನೀಡಬೇಕು ಎನ್ನುವ ಸಮುದಾಯದ ಬೇಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿದರು. ಬೇಡಿಕೆ ಈಡೇರಿಕೆಯ ಭರವಸೆಯನ್ನು ವೇದಿಕೆಯಲ್ಲೇ ನೀಡಿದರು.












Click it and Unblock the Notifications