₹10 ಲಕ್ಷ ಇದ್ದ ಎಟಿಎಂ ಅನ್ನು ತೋಪಿನಲ್ಲೇ ಬಿಟ್ಟು ಹೋದ ಕಳ್ಳರು! ಯಾಕೆ?
ಕೆಲವೊಂದು ಸಲ ಅದೃಷ್ಟ ಕುಲಾಯಿಸಿದರೂ ಪರಿಸ್ಥಿತಿ ಕೈಹಿಡಿಯೋದಿಲ್ಲ ಎನ್ನುವ ಮಾತಿದೆ. ಇಂತದ್ದೇ ಒಂದು ಘಟನೆ ಬೆಂಗಳೂರಿನ ಬಳಿ ನಡೆದಿದೆ. ಸಾಮಾನ್ಯ ಕಳ್ಳರು ಹಣಕ್ಕಾಗಿ ಕಳ್ಳತನ ಮಾಡುತ್ತಾರೆ. ಆದರೆ ನಿಸ್ಸಾಹಯಕ ಕಳ್ಳರು ಲಕ್ಷ ಲಕ್ಷ ಹಣ ತುಂಬಿದ್ದ ಎಟಿಎಂ ಅನ್ನು ವಿಧಿಯಿಲ್ಲದೆ ತೋಪಿನಲ್ಲಿ ಅನಾಥವಾಗಿ ಬಿಟ್ಟು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು, ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಕೈಗಾರಿಕಾ ಪ್ರದೇಶ ವಡ್ಡರಪಾಳ್ಯದ ಬಳಿ ಎಟಿಎಂ ಮಿಷಿನ್ ಅನ್ನು ಕಳ್ಳರು ಕದ್ದೊಯ್ದಿದ್ದರು. ಎಟಿಎಂ ಮಿಷಿನ್ ಅನ್ನು ಕದ್ದ ಖುಷಿಯಲ್ಲೇ ಇದ್ದವರಿಗೆ ಅದನ್ನು ಹೇಗೆ ತೆರೆಯಬೇಕು ಎನ್ನುವುದೇ ಗೊತ್ತಾಗಿಲ್ಲ. ಏನೆಲ್ಲ ಶತಪ್ರಯತ್ನ ನಡೆಸಿದರೂ ಎಟಿಎಂನಿಂದ ಕಳ್ಳರು ನಯಾಪೈಸೆಯೂ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ವಡ್ಡರಪಾಳ್ಯದ ಬಳಿ ಎಗರಿಸಿದ್ದ ಎಟಿಎಂ ಯಂತ್ರವನ್ನು ಕಳ್ಳರು ಖುಷಿಯಿಂದ ಹೊತ್ತು ತಂದಿದ್ದರು. ಅದರಲ್ಲಿದ್ದ ಹಣವನ್ನು ಎತ್ಕೊಂಡು ಜಮಾಯಿಸೋಣ ಎಂದೂ ಪ್ಲ್ಯಾನ್ ಮಾಡಿಕೊಂಡಿದ್ರು. ಇದಕ್ಕಾಗಿ ಎಟಿಎಂ ಅನ್ನು ಮಂಚನಹಳ್ಳಿ ಬಳಿಯ ತೋಪಿನ ಬಳಿ ಇರಿಸಿ, ಏನೇನೋ ಕಸರತ್ತು ಮಾಡಿದ್ದಾರೆ. ಕೊನೆಗೂ ಆ ಯಂತ್ರ ತೆರೆಯಲು ಅವರಿಂದ ಸಾಧ್ಯವೇ ಆಗಿಲ್ಲ.
ಕೊನೆಗೆ ಆ ಎಟಿಎಂ ಯಂತ್ರವನ್ನು ಮಂಚನಹಳ್ಳಿ ಬಳಿಯ ತೋಪಿನಲ್ಲೇ ಬಿಸಾಡಿ ಹೋಗಿದ್ದಾರೆ ಎಂದು ವರದಿಯಾಗಿದೆ. ನಿನ್ನೆ ಬೆಳಿಗ್ಗೆ ಗೂಡ್ಸ್ ಗಾಡಿಯಲ್ಲಿ ಬಂದಿದ್ದ ಇಬ್ಬರು ವಡ್ಡರಪಾಳ್ಯದ ಬಳಿಯಿದ್ದ ಎಟಿಎಂನಿಂದ ಹಣ ಕದಿಯಲು ಮುಂದಾಗಿದ್ದರು. ಅದು ವಿಫಲವಾದಾಗ ಎಟಿಎಂ ಯಂತ್ರವನ್ನೇ ಕಿತ್ತುಕೊಂಡು ಗೂಡ್ಸ್ ವಾಹನಕ್ಕೆ ತುಂಬಿಸಿದ್ದರು. ಇದು ಅಲ್ಲಿದ್ದ ಸಿಸಿಟಿವಿ ಕ್ಯಾಮರಾಗಳಲ್ಲಿ ರೆಕಾರ್ಡ್ ಕೂಡ ಆಗಿದೆ.

ಕದ್ದ ಎಟಿಎಂನೊಂದಿಗೆ ನೇರವಾಗಿ ಮಂಚನಹಳ್ಳಿ ಬಳಿಯ ತೋಪಿಗೆ ತೆರಳಿ ಅಲ್ಲಿ ಇಳಿಸಿದ್ದರು. ಅಬ್ಬಬ್ಬಾ ಅಂದ್ರೆ ಒಂದಿಷ್ಟು ಕಬ್ಬಿಣದ ಬೀರು ತರಾ ಇರಬಹುದು. ಬ್ಲೇಡ್‌ನಿಂದ ಕತ್ತರಿಸಿದರೆ ಒಳಗಿರೋ ದುಡ್ಡೆಲ್ಲ ನಮ್ದೇ ಅನ್ಕೊಂಡು ಆಕ್ಸಲ್ ಬ್ಲೇಡ್‌ನಿಂದ ಎಟಿಎಂ ಕೊಯ್ಯಲು ಮುಂದಾಗಿದ್ದಾರೆ. ಏನೇ ಆದರೂ ಯಂತ್ರವನ್ನು ತೆರೆಯಲು ಸಾಧ್ಯವೇ ಆಗಲಿಲ್ಲ. ಕೊನೆಗೆ ವಿಧಿಯಿಲ್ಲದೆ, ಎಟಿಎಂ ಅನ್ನು ಅಲ್ಲಿಯೇ ಬಿಸಾಕಿ ಹೋಗಿದ್ದಾರೆ.
ಬೆಳಿಗ್ಗೆ ನಸುಕಿನ ಜಾವದವರೆಗೆ ಆಪರೇಷನ್ ಎಟಿಎಂ ನಡೆದಿದ್ದು, ಬೆಳಗಾಗುತ್ತಿದ್ದಂತೆ ಜನಸಂಚಾರ ಆರಂಭವಾಗಿದ್ದರಿಂದ ಹೆದರಿ ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ. ಬಳಿಕ ಅಲ್ಲಿನವರು ನೀಡಿದ ಮಾಹಿತಿ ಆಧರಿಸಿ ಅತ್ತಿಬೆಲೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಈ ಎಟಿಎಂ ಕೆನರಾ ಬ್ಯಾಂಕ್‌ಗೆ ಸೇರಿದ್ದು ಎನ್ನಲಾಗಿದ್ದು, ಇದರೊಳಗೆ ಬರೋಬ್ಬರಿ 10 ಲಕ್ಷ ರೂಪಾಯಿ ಹಣವಿತ್ತು ಎಂದು ವರದಿಯಾಗಿದೆ. ಸದ್ಯ ಹಣ ಸುರಕ್ಷಿತವಾಗಿದೆ. ಕೈಗೆ ಬಂದ ತುಂತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ಕಳ್ಳರ ಪಾಡು.












Click it and Unblock the Notifications