ಬೆಂಗಳೂರು ಪ್ರಯಾಣಿಕರೇ ಎಚ್ಚರ.. ಎಚ್ಚರ... ಇಂದು ಈ ಮಾರ್ಗಗಳು ಬಂದ್... ಸಂಚಾರಕ್ಕೂ ಮುನ್ನ ಇದು ತಿಳಿದಿರಲಿ..
ಬೆಂಗಳೂರು ಸೆಪ್ಟೆಂಬರ್ 22: ಬೆಂಗಳೂರಿನ ಹಲವೆಡೆ ಇಂದು ಗಣೇಶ ಮೂರ್ತಿ ವಿಸರ್ಜನೆಗೆ ಸಜ್ಜುಗೊಳಿಸಲಾಗಿದೆ. ಹೀಗಾಗಿ ಇಂದು ನಗರದ ಹಲವು ರಸ್ತೆ ಮಾರ್ಗಗಳನ್ನು ಬಂದ್ ಮಾಡಲಾಗಿದ್ದು ಮದ್ಯ ನಿಷೇಧ ಕೂಡ ಮಾಡಲಾಗಿದೆ. ಮುಖ್ಯ ಬೀದಿ ಹಾಗೂ ಗಲ್ಲಿಗಳಲ್ಲಿ ಇಟ್ಟ ಬೃಹತ್ ಗಣೇಶನ ಮೂರ್ತಿಗಳನ್ನು ಮೆರವಣಿಗೆ ಮೂಲಕ ವಿಸರ್ಜನೆಗೆ ಕೊಂಡೊಯ್ಯಲಾಗುತ್ತದೆ.
ಹೀಗಾಗಿ ನಗರದ ಹಲವೆಡೆ ಇಂದು ಸಂಚಾರಕ್ಕೆ ತೊಂದರೆಯಾಗಲಿದೆ. ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ದೃಷ್ಟಿಯಿಂದ ಹಲವೆಡೆ ಸಂಚಾರಿ ಪೊಲೀಸರು ಮಾರ್ಗಗಳನ್ನು ಬದಲಾಯಿಸಿ ಸಾರ್ವಜನಿಕರಿಗೆ ಕೆಲ ಮಾರ್ಗಗಳಲ್ಲಿ ಸಂಚಾರ ಮಾಡದಿರಲು ಮನವಿ ಮಾಡಿದ್ದಾರೆ. ಹಾಗಾದರೆ ಎಲ್ಲೆಲ್ಲಿ ಮಾರ್ಗ ಬದಲಾವಣೆ ಆಗಲಿವೆ? ಎಲ್ಲೆಲ್ಲಿ ಮದ್ಯ ನಿಷೇಧವಾಗಲಿದೆ? ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.

ಇಂದು (ಸೆಪ್ಟೆಂಬರ್ 22) ಕೆ.ಜಿ ಹಳ್ಳಿ ಮತ್ತು ಪುಲಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಣಪತಿ ಮೂರ್ತಿಗಳ ಮೆರವಣಿಗೆ ನಡೆಯಲಿದೆ. ಹಾಗೂ ಹಲಸೂರು ಕೆರೆಯಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮ ಇರುವುದರಿಂದ ಸುಗಮ ಸಂಚಾರದ ಹಿತದೃಷ್ಟಿಯಿಂದ ಬೆಳಗ್ಗೆ 10ಗಂಟೆಯಿಂದ ರಾತ್ರಿ 10ಗಂಟೆಯವರೆಗೆ ಕೆಲವೆಡೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಅಲ್ಲದೇ ಪೂರ್ವ ವಿಭಾಗದ ಡಿ.ಜೆ ಹಳ್ಳಿ, ಭಾರತನಗರ, ಪುಲಿಕೇಶಿನಗರ ಠಾಣಾ ವ್ಯಾಪ್ತಿಯಲ್ಲಿ ಇಂದು ಮದ್ಯ ನಿಷೇಧಿಸಲಾಗಿದೆ.
ಸಂಚಾರವನ್ನು ನಿರ್ಬಂಧಿಸಿರುವ ರಸ್ತೆಗಳು
ನಾಗವಾರ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ರಸ್ತೆಯವರೆಗೆ ಸೆ.22 ಮತ್ತು ಸೆ.24ರವರೆಗೆ ರಾತ್ರಿ 8ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಸಂಚಾರವನ್ನು ನಿರ್ಬಂಧಿಸಲಾಗಿದೆ. ಹಾಗೂ ನೇತಾಜಿ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ಮೂಲಕ ಟ್ಯಾನಿ ರಸ್ತೆ ಕಡೆಗೆ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಆದರೆ ಎಂಇಜಿ ಕಡೆಯಿಂದ ಕೆನ್ಸಿಂಗ್‌ಟನ್ ಕಡೆಗೆ ಏಕಮುಖ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿದೆ.
ಪರ್ಯಾಯ ಮಾರ್ಗಗಳು
* ಥಣಿಸಂದ್ರ ಕಡೆಯಿಂದ ಶಿವಾಜಿನಗರ ಜಂಕ್ಷನ್ ಕಡೆಗೆ ಬರುವ ವಾಹನಗಳು ನಾಗವಾರ ಜಂಕ್ಷನ್ ನಿಂದ ಎಡತಿರುವು- ಹೆಣ್ಣೂರು ಜಂಕ್ಷನ್-ಬಲ ತಿರುವು- ಸಿದ್ದಪ್ಪ ರೆಡ್ಡಿ ಜಂಕ್ಷನ್-ಅಯ್ಯೋಧೆ ಜಂಕ್ಷನ್-ಲಿಂಗರಾಜಪುರ-ಐಟಿಸಿ ಫ್ಲೈ ಓವರ್ ಮೂಲಕ ರಾವರ್ಟ್ ಸನ್ ಜಂಕ್ಷನ್‌ನಲ್ಲಿ ಬಲ ತಿರುವು- ಹೆನ್ಸ್ ರಸ್ತೆ ಮೂಲಕ ಶಿವಜಿನಗರ ತಲುಪಬಹುದು.
* ಶಿವಾಜಿನಗರ ಕಡೆಯಿಂದ ನಾಗವಾರ ಜಂಕಷನ್ ಕಡೆಗೆ ಬರುವ ವಾಹನಗಳು ಸ್ಪೆನ್ಸರ್ ರಸ್ತೆಯಲ್ಲಿ ಕಡ್ಡಾಯವಾಗಿ ಬಲ ತಿರುವು ಪಡೆದು- ಸೈನ್ಸರ್ ರಸ್ತೆ ಮೂಲಕ ಕೋಲ್ಸ್ ರಸ್ತೆ ತಲುಪಿ ವೀಲರ್ಸ್ ರಸ್ತೆ ಮೂಲಕ ಹೆಣ್ಣೂರು, ಬಾಣಸವಾಡಿ, ಹಲಸೂರು ಕಡೆಗೆ ಸಂಚರಿಸಬಹುದು. ಆರ್.ಟಿ.ನಗರದಿಂದ ಕಾವಲ್ ಬೈರಸಂದ್ರ ಮೂಲಕ ಬರುವ ವಾಹನಗಳು ಪುಷ್ಪಾಂಜಲಿ ಟಾಕೀಸ್ ಬಳಿ ಎಡ ತಿರುವು ಪಡೆದು ವೀರಣ್ಣ ಪಾಳ್ಯ ಜಂಕ್ಷನ್ ಕಡೆಗೆ ಬಲ ತಿರುವು ಪಡೆದು ನಾಗವಾರ ಜಂಕ್ಷನ್ ರಸ್ತೆ ಕಡೆಗೆ ಸಂಚರಿಸಬಹುದು.
* ಹೆನ್ಸ್-ನೇತಾಜಿ ರಸ್ತೆ ಕಡೆಯಿಂದ ಟ್ಯಾನರಿ ರಸ್ತೆ ಮೂಲಕ ನಾಗವಾರ ಕಡೆಗೆ ಬರುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಲಾಗಿದ್ದು-ನೇತಾಜಿ ಜಂಕ್ಷನ್‌ನಿಂದ- ಬಲ ತಿರುವು -ಮಾಸ್ಕ್ ಜಂಕ್ಷನ್-ಲಾಜರ್ ರಸ್ತೆ ಎಂ.ಎಂ.ರಸ್ತೆ ಜಂಕ್ಷನ್-ಎಡ ತಿರುವು-ಪಾಟರಿ ಸರ್ಕಲ್-ಹೆಣ್ಣೂರು ರಸ್ತೆ ಜಂಕ್ಷನ್- ಬಲ ತಿರುವು-ಹೆಚ್‌ಎಂ ರಸ್ತೆ ಡೇವಿಸ್ ರಸ್ತೆ ಜಂಕ್ಷನ್ ಮೂಲಕ ಲಿಂಗರಾಜಪುರಂ ಫ್ಲೈಓವರ್ ಮೂಲಕ ಹೆಣ್ಣೂರು ಕಡೆಗೆ ಸಂಚರಿಸಬಹುದು.
*ಕನ್ಸಿಂಗ್‌ಟನ್ ಕಡೆಯಿಂದ ಎಂಇಜಿ ಮಲಕ-ಹಲಸೂರು ಲೇಕ್ ಕಡೆಗೆ ಹೋಗುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿ ಕನ್ಸಿಂಗ್‌ಟನ್‌ನಿಂದ ಗುರುದ್ವಾರ ಜಂಕ್ಷನ್ ಬಲ ತಿರುವು- ತಿರುವಳ್ಳವರ್ ಪ್ರತಿಮೆ-ಬಲ ತಿರುವು- ಆರ್‌ಬಿಐ ಕ್ವಾಟ್ರಸ್ ಜಂಕ್ಷನ್-ಎಡ ತಿರುವು-ಲಾವಣ್ಯ ಥಿಯೇಟರ್ ಜಂಕ್ಷನ್- ನಾಗಾ ಜಂಕ್ಷನ್- ಬಲ ತಿರುವು ಪಡೆದು ಹಲಸೂರು ಕೆರೆ ಕಡೆಗೆ ಹೋಗಬಹುದು.
ಪಾರ್ಕಿಂಗ್ ನಿರ್ಬಂಧಿಸಿರುವ ಸ್ಥಳಗಳು
ಗಣೇಶ ವಿಸರ್ಜನೆಗೆ ಮೆರವಣಿಗೆಗಳು ನಡೆಯುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 22 ಮತ್ತು ಸೆಪ್ಟೆಂಬರ್ 24ರಂದು ಕೆಲ ಸ್ಥಳಗಳಲ್ಲಿ ವಾಹನಗಳ ಪಾರ್ಕಿಂಗ್‌ಗೆ ನಿರ್ಬಂಧ ಹೇರಲಾಗಿದೆ.
*ಪಾಟರಿ ಸರ್ಕಲ್‌ನಿಂದ ನಾಗವಾರ ಸಿಗ್ನಲ್, ಗೋವಿಂದಪುರ ಜಂಕ್ಞನ್‌ನಿಂದ ಗೋವಿಂದಪುರ ಕಾ&ಸು ಪೊಲೀಸ್ ಠಾಣೆಯವರೆಗೆ
*ಹೆಚ್.ಬಿ.ಆರ್ ಬಡಾವಣೆಯ ಸಿದ್ದಪ್ಪ ರೆಡ್ಡಿ ಜಂಕ್ಷನ್‌ನಿಂದ ನರೇಂದ್ರ ಟೆಂಟ್ ಜಂಕ್ಷನ್ ವರೆಗೆ ಎರಡು ಬದಿಯಲ್ಲಿ ವಾಹನಗಳ ಪಾರ್ಕಿಂಗ್ ಅನ್ನು ನಿರ್ಬಂಧಿಸಲಾಗಿದೆ.
*ಪಾಟರಿ ಸರ್ಕಲ್ ಎಂ.ಎಂ ರಸ್ತೆಯಿಂದ ಲಾಜರ್ ರಸ್ತೆಯವರೆಗೆ
* ಸಿಂಧಿ ಕಾಲೋನಿ ಜಂಕ್ಷನ್‌ನಿಂದ ವಾರ್ ಮೆಮೊರಿಯಲ್ ಜಂಕ್ಷನ್‌ವರೆಗೆ ಎರಡು ಬದಿಯಲ್ಲಿ ವಾಹನಗಳ ಪಾರ್ಕಿಂಗ್ ಅನ್ನು ನಿರ್ಬಂಧಿಸಲಾಗಿದೆ.
*ಇನ್ನು ಹಲಸೂರು ಕೆರೆಯ ಮುಖ್ಯದ್ವಾರ ಮತ್ತು ಸುತ್ತಲೂ ಇರುವ ರಸ್ತೆಗಳನ್ನು ಪಾರ್ಕಿಂಗ್ ಅನ್ನು ನಿರ್ಬಂಧಿಸಲಾಗಿದೆ.












Click it and Unblock the Notifications