Breaking; ಮತದಾರರ ಮಾಹಿತಿ ಕಳವು, 28 ಕ್ಷೇತ್ರಗಳ ತನಿಖೆಗೆ ಒತ್ತಾಯ
ಬೆಂಗಳೂರು, ನವೆಂಬರ್ 27; ಬೆಂಗಳೂರು ನಗರದ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪವಿದೆ. ಈಗಾಗಲೇ ಪೊಲೀಸರು ಮತ್ತು ಚುನಾವಣಾ ಆಯೋಗ ಈ ಕುರಿತು ತನಿಖೆ ಆರಂಭಿಸಿದೆ.
ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಭಾನುವಾರ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಮಾತನಾಡಿದ್ದಾರೆ. "ಬೆಂಗಳೂರಿನ 28 ಕ್ಷೇತ್ರಗಳಲ್ಲೂ ಮತದಾರ ಪಟ್ಟಿ ಪರಿಷ್ಕರಣೆಯ ಅಕ್ರಮ ನಡೆದಿದೆ. ಆದರೆ ಚುನಾವಣಾ ಆಯೋಗ ಕೇವಲ ಮೂರು ವಿಧಾನಸಭಾ ಕ್ಷೇತ್ರಗಳಿಗೆ ತನಿಖೆ ಸೀಮಿತಗೊಳಿಸಿದೆ" ಎಂದು ಹೇಳಿದ್ದಾರೆ.

"ಹಾಗಾದರೆ ಇನ್ನುಳಿದ 25 ಕ್ಷೇತ್ರಗಳಲ್ಲಿ ನಡೆದ ಅಕ್ರಮದ ತನಿಖೆ ಏಕಿಲ್ಲ?. ಚುನಾವಣಾ ಆಯೋಗ ಬೆಂಗಳೂರು ವ್ಯಾಪ್ತಿಯ 28 ಕ್ಷೇತ್ರಗಳ ಅಕ್ರಮದ ತನಿಖೆ ಮಾಡಲಿ" ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
"ವೋಟರ್ ಐಡಿ ಹಗರಣ ಸಂಬಂಧ ಪೊಲೀಸರು ಬಿಬಿಎಂಪಿಯ 4 ಅಧಿಕಾರಿಗಳನ್ನು ಬಂಧಿಸಿದ್ದಾರೆ. ಈ ಅಕ್ರಮದಲ್ಲಿ ಕೇವಲ ನಾಲ್ಕು ಅಧಿಕಾರಿಗಳು ಮಾತ್ರ ಭಾಗಿಯಾಗಿಲ್ಲ. ಸರ್ಕಾರದ ಉನ್ನತ ಅಧಿಕಾರಿಗಳು, ಪ್ರಭಾವಿ ಸಚಿವರು ಕೂಡ ಶಾಮೀಲಾಗಿದ್ದಾರೆ. ಅವರ ವಿರುದ್ಧವೂ ತನಿಖೆಯಾಗಬೇಕಲ್ಲವೆ?. ಅವರ ಬಂಧನವೂ ಆಗಬೇಕಲ್ಲವೆ?. ಕೇವಲ 4 ಅಧಿಕಾರಿಗಳ ಬಂಧನ ಕಣ್ಣೊರೆಸುವ ತನಿಖೆಯೇ?" ಎಂದು ಪ್ರಶ್ನಿಸಿದ್ದಾರೆ.

"ಮುಖ್ಯಮಂತ್ರಿಗಳ ಗಮನಕ್ಕೆ ಬಾರದೆ ವೋಟರ್ ಐಡಿ ಹಗರಣ ನಡೆಯಲು ಸಾಧ್ಯವೇ ಇಲ್ಲ. ಈ ಹಗರಣದಲ್ಲಿ ಬೊಮ್ಮಾಯಿಯವರ ಪಾತ್ರ ಏನು ಎಂಬುದು ಜನರಿಗೆ ತಿಳಿಯಬೇಕು. ಆದರೆ ಈ ಸತ್ಯ ಪೊಲೀಸರ ತನಿಖೆಯಿಂದ ಹೊರಬರಲು ಸಾಧ್ಯವಿಲ್ಲ. ಪೊಲೀಸರು ಬೊಮ್ಮಾಯಿ ವಿರುದ್ಧ ನಿರ್ಭೀತ ಹಾಗೂ ಪ್ರಾಮಾಣಿಕವಾಗಿ ತನಿಖೆ ನಡೆಸಲು ಸಾಧ್ಯವೇ? ಹಾಗಾಗಿ ನ್ಯಾಯಾಂಗ ತನಿಖೆಯಾಗಲಿ" ಎಂದು ಆಗ್ರಹಿಸಿದರು.
ನಾಲ್ವರು ಅಧಿಕಾರಿಗಳ ಬಂಧನ; ಬೆಂಗಳೂರು ನಗರದಲ್ಲಿ ಮತದಾರರ ವೈಯಕ್ತಿಕ ಮಾಹಿತಿ ಕಳವು ಹಾಗೂ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯ ನಾಲ್ವರು ಅಧಿಕಾರಿಗಳನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಶನಿವಾರ ಸಂಜೆ ಬಂಧಿಸಿದ್ದಾರೆ.
ಬಂಧಿತರು ಶಿವಾಜಿನಗರದ ಕಂದಾಯ ಅಧಿಕಾರಿ ಸುಹೇಲ್ ಅಹಮದ್, ಮಹದೇವಪುರದ ಕಂದಾಯ ಅಧಿಕಾರಿ ಕೆ. ಚಂದ್ರಶೇಖರ್, ಚಿಕ್ಕಪೇಟೆ ಉಪ ಕಂದಾಯ ಅಧಿಕಾರಿ ವಿ. ಬಿ. ಭೀಮಾಶಂಕರ್ ಮತ್ತು ರಾಜರಾಜೇಶ್ವರಿ ನಗರದ ಕಂದಾಯ ಅಧಿಕಾರಿ ಮಹೇಶ್.
ಈ ನಾಲ್ವರು ಮತದಾರರ ನೋಂದಣಾಧಿಕಾರಿಗಳಾಗಿ ಕೆಲಸ ಮಾಡಿದ್ದರು. ತಮ್ಮ ವ್ಯಾಪ್ತಿಯ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಆಧಾರ್ ಸಂಖ್ಯೆ ಜೋಡಣೆ ಕೆಲಸಕ್ಕಾಗಿ ಚಿಲುಮೆ ಸಂಸ್ಥೆಯ ಸಿಬ್ಬಂದಿಗೆ ಬಿಎಲ್‌ಒ ಗುರುತಿನ ಚೀಟಿಗಳನ್ನು ಮಾಡಿಕೊಟ್ಟಿದ್ದರು ಎಂಬುದು ಆರೋಪ.












Click it and Unblock the Notifications