ಬೆಂಗಳೂರು ಜಲಮಂಡಳಿಯ ಹೊಸ ತಂತ್ರಜ್ಞಾನ: ಹಣ ಉಳಿತಾಯ, ನಾಗರಿಕ ತೊಂದರೆಗಳಿಗೆ ಮುಕ್ತಿ..BWSSB
ಬೆಂಗಳೂರು, ಡಿಸೆಂಬರ್ 16: ರಾಜಧಾನಿ ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್‌ಲೈನ್ ನಿರ್ವಹಣೆಗೆಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅಳವಡಿಸಿಕೊಂಡ ಅತ್ಯಾಧುನಿಕ 'ರೋಬೋಟಿಕ್ ಇನ್‌ಸ್ಪೆಕ್ಷನ್ ತಂತ್ರಜ್ಞಾನ' ಕ್ರಾಂತಿಕಾರಿ ಬದಲಾವಣೆ ಮಾಡಿದೆ. ಇದರಿಂದ ನಗರದಲ್ಲಿ ಉಂಟಾಗುತ್ತಿದ್ದ ಹಲವಾರು ಸಮಸ್ಯೆಗಳಿಗೆ ಕಡವಾಣ ಬಿದ್ದಂತಾಗಿದೆ.
ಇದೇ ವರ್ಷ 2025ರ ನವೆಂಬರ್ 12ನಲ್ಲಿ ಈ ತಂತ್ರಜ್ಞಾನದ ಬಳಕೆ ಜಾರಿಗೆ ತರಲಾಯಿತು. ನೀರು ಪೂರೈಕೆಯ ನೆಲದಾಳದ ಪೈಪ್‌ಲೈನ್ ನಲ್ಲಿನ ಸಮಸ್ಯೆಗಳನ್ನು ಅತ್ಯಂತ ನಿಖರವಾಗಿ ಗುರುತಿಸಲು ಸಾಧ್ಯವಾಗಿಸಿದೆ. ತಂತ್ರಜ್ಞಾನದ ಸಹಾಯದಿಂದ 38 ಸ್ಥಳಗಳಲ್ಲಿ ರಸ್ತೆ ಅಗೆದು ದುರಸ್ತಿಪಡಿಸುವುದನ್ನು ತಪ್ಪಿಸಿದೆ. ಇದರಿಂದ ಜಲಮಂಡಳಿಗೆ ಖರ್ಚಾಗುತ್ತಿದ್ದ ಲಕ್ಷಾಂತರ ರೂಪಾಯಿ ಹಣ ಉಳಿತಾಯವಾಗಿದೆ.

ಇನ್ನೂ ಈ ತಂತ್ರಜ್ಞಾನದಿಂದ ದೋಷ ಪತ್ತೆ ಬೇಗ ಆಗುವುದು ಮಾತ್ರವಲ್ಲ, ರಸ್ತೆ ಅಗೆತದಿಂದ ನಾಗರಿಕರಿಗೆ ಎದುರಾಗುತ್ತಿದ್ದ ಸಮಸ್ಯೆಗಳು ತಪ್ಪುತ್ತವೆ. ರಸ್ತೆ ಅಗೆತದಿಂದ ಆಗುವ ಸಂಚಾರ ದಟ್ಟಣೆ, ಧೂಳು ಮತ್ತು ಶಬ್ದ ಮಾಲಿನ್ಯದಿಂದ ನಾಗರಿಕರಿಗೆ ಮುಕ್ತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಉಳಿಯುವ ಸಾರ್ವಜನಿಕ ಹಣ ಇತರ ಕಾರ್ಯಗಳಿಗೆ ಬಳಕೆ ಮಾಡಲು ಸಾಧ್ಯವಾಗುತ್ತದೆ.
ನಿಖರ ಕಾರ್ಯಾಚರಣೆ, ಸಮಸ್ಯೆಗಳಿಗೆ ತ್ವರಿತ ಮುಕ್ತಿ
ರೋಬೋಟಿಕ್ ಕ್ಯಾಮೆರಾ ವ್ಯವಸ್ಥೆಗಳ ಮೂಲಕ ಜಲಮಂಡಳಿ ಸಿಬ್ಬಂದಿ ಪೈಪಲೈನ್‌ನಲ್ಲಿನ ದೋಷಗಳನ್ನು ಸ್ಪಷ್ಟವಾಗಿ ವೀಕ್ಷಿಸಲು ಸಾಧ್ಯವಾಗುತ್ತಿದೆ. ತಂತ್ರಜ್ಞಾನ ಅಳವಡಿಕೆಯಾದ ನಂತರ ಒಟ್ಟು 75 ದೂರುಗಳನ್ನು ಸ್ವೀಕರಿಸಲಾಗಿದೆ. ಅದರಲ್ಲಿ 67 ಸ್ಥಳಗಳಲ್ಲಿ ಈಗಾಗಲೇ ದುರಸ್ತಿ ಕಾರ್ಯ ಮುಗಿಸಲಾಗಿದೆ. ಬಾಕಿ ದೂರುಗಳಿಗೆ ಪರಿಹಾರ ಒದಗಿಸಲಾಗುತ್ತಿದೆ.
ಒಳಚರಂಡಿ ಕೊಳವೆಗಳಲ್ಲಿನ ತಡೆಗಳು (Blockages), ರಚನಾತ್ಮಕ ದೋಷಗಳು ಮತ್ತು ಆಂತರಿಕ ಹಾನಿಗಳು ಸೇರಿದಂತೆ 93ಕ್ಕೂ ಹೆಚ್ಚು ದೋಷ ಪತ್ತೆ ಮಾಡಲಾಗಿದೆ. ಹೊಸ ತಂತ್ರಜ್ಞಾನದಿಂದ ಸಮಸ್ಯೆಯ ನಿಖರ ಸ್ಥಳ ಮತ್ತು ಸ್ವರೂಪ ತಿಳಿಯಲು ಅನುಕೂಲವಾಗಿದೆ.
ಸಾರ್ವಜನಿಕ ಸ್ನೇಹಿ ಕ್ರಮ
ಜಲಮಂಡಳಿ ವ್ಯಾಪ್ತಿಯಲ್ಲಿನ ಸಮಸ್ಯೆಗಳಿಗೆ ರೋಬೋಟಿಕ್ಸ್ ಬಳಕೆಯು ತ್ವರಿತ ಪರಿಹಾರ ಒದಗಿಸುತ್ತಿದೆ. ಜೊತೆಗೆ ಮಂಡಳಿಯ ಸೇವೆಗಳನ್ನು ಪುನಃಸ್ಥಾಪಿಸಲು ಸಾಧ್ಯವಾಗಿದೆ. ಜೊತೆಗೆ ಕಾರ್ಮಿಕ ಸುರಕ್ಷತೆಗೆ ಪೂರಕವಾಗಿ ಈ ತಂತ್ರಜ್ಞಾನ ಕೆಲಸ ಮಾಡಲಿದೆ. ಈ ಸಂಬಂಧ ಅಧಿಕಾರಿಗಳು ಜನಸ್ನೇಹಿ ವಿಧಾನಗಳನ್ನು ಅಳವಡಿಸಿಕೊಳ್ಳುವುದಕ್ಕೆ ಆದ್ಯತೆ ನೀಡಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ, ವೆಚ್ಚ ತಗ್ಗಿಸಲು ಮತ್ತು ದೂರುಗಳಿಗೆ ತ್ವರಿತವಾಗಿ ಸ್ಪಂದಿಸಲು ಮುಂಬರುವ ದಿನಗಳಲ್ಲಿ ರೋಬೋಟಿಕ್ ತಪಾಸಣೆಯನ್ನು ನಗರದ ಇತರೆ ವಲಯಗಳಿಗೂ ವಿಸ್ತರಿಸಲು ಜಲಮಂಡಳಿ ನಿರ್ಧಾರ ಮಾಡಿದೆ. ನೀರಿನ ಸರಬರಾಜು, ಕೊಳವೆ, ಒಳಚರಂಡಿ, ಪೈಪ್‌ಲೈನ್ ಮಾರ್ಗದಲ್ಲಿ ದೋಷ ಉಂಟಾದರೆ ತ್ವರಿತವಾಗಿ ಪರಿಹಾರ ಒದಗಿಸಲು ತಂತ್ರಜ್ಞಾನ ನಿರ್ಣಾಯಕ ಪಾತ್ರ ವಹಿಸಿದೆ ಎಂದು BWSSB ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications