ಸಂಗೊಳ್ಳಿ ರಾಯಣ್ಣ ಉದ್ಯಾನ ಮಲ್ಲೇಶ್ವರಂನ ಹೆಮ್ಮೆಯ ಪ್ರತೀಕ

ಬೆಂಗಳೂರು, ಜ.20: ಕಳೆದ ಎರಡು ದಶಕಗಳಿಂದ ಬೆಂಗಳೂರು ನಗರ ಅಭಿವೃದ್ಧಿ ಆಗುತ್ತಿದ್ದಂತೆಯೇ ನಗರದಲ್ಲಿ ಒಂದು ಸಂಚಲನವೇ ಉಂಟಾಗಿದೆ. ಸಾವಿರಾರು ಉದ್ಯೋಗಗಳ ಸೃಷ್ಠಿಯ ಜೊತೆಗೆ ಹಲವಾರು ಬಗೆಯ ಬೆಳವಣಿಗೆಗಳಿಗೆ ಬೆಂಗಳೂರು ಸಾಕ್ಷಿಯಾಯಿತು. ಆದರೆ, ನಗರ ಬೆಳೆದಂತೆಲ್ಲಾ ಉದ್ಯಾನ ನಗರದಲ್ಲಿ ಹಸಿರು ಮಾಯವಾಯಿತು. ಅದೆಷ್ಟೋ ಹಸಿರು ಮರಗಳು ನಾಶವಾದವು. ಆದರೂ ನಗರದಲ್ಲಿ ಮತ್ತೆ ಹಸಿರಿನ ಗತವೈಭವವನ್ನು ತರಲು ಸಾಕಷ್ಟು ಪ್ರಯತ್ನಗಳು ನಡೆದಿವೆ.

ಕಟ್ಟಡ ನಿರ್ಮಾಣ ಸಂಸ್ಥೆಯಾದ ಬ್ರಿಗೇಡ್ ಗ್ರೂಪ್ ತನ್ನ ಎಲ್ಲಾ ಯೋಜನೆಗಳ ಜೊತೆಗೆ ಹಸಿರು ಉದ್ಯಾನ ನಿರ್ಮಾಣಕ್ಕೆ ಒತ್ತು ನೀಡುತ್ತಿದೆ. ಇದರ ಮೈಲುಗಲ್ಲುಗಳಲ್ಲಿ ಒಂದು ಮಲ್ಲೇಶ್ವರಂ 17ನೇ ಅಡ್ಡರಸ್ತೆಯಲ್ಲಿ ನಿರ್ಮಾಣವಾಗಿರುವ ನಳನಳಿಸುವ ಸಂಗೊಳ್ಳಿ ರಾಯಣ್ಣ ಉದ್ಯಾನವನ. ಈ ಹಿಂದೆ ಇದು ಉದ್ಯಾನವಾಗಿದ್ದರೂ ಜನಸಾಮಾನ್ಯರು ಬಳಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಬ್ರಿಗೇಡ್ ಗ್ರೂಪ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜೊತೆ ಚರ್ಚಿಸಿ ಉದ್ಯಾನವನ್ನು 2 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಲಾಗಿದೆ.

Malleswaram Sangolli Rayanna Park

ಇದೀಗ ಈ ಪಾರ್ಕ್ ಹಚ್ಚ ಹಸಿರಾಗಿ ಕಂಗೊಳಿಸುತ್ತಿದೆ. ಇಲ್ಲಿ ವಾಕಿಂಗ್ ಮಾಡುವವರಿಗೆ ಪ್ರತ್ಯೇಕ ಕಾಲುದಾರಿಯ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಗೆ ಪ್ರತಿದಿನ ಭೇಟಿ ನೀಡುತ್ತಿರುವ ಸಾವಿರಾರು ಮಂದಿ ನಾಗರಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಹೆಸರಿನ ಈ ಉದ್ಯಾನ 50 ಸಾವಿರ ಚದರಡಿ ವಿಸ್ತೀರ್ಣ ಹೊಂದಿದೆ.

ಉದ್ಯಾನವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿರುವ ಬ್ರಿಗೇಡ್ ಗ್ರೂಪ್ ಅದರ ನಿರ್ವಹಣೆಯನ್ನೂ ಮಾಡುತ್ತಿದೆ. ಸುಮಾರು ಆರು ತಿಂಗಳ ಕಾಲ ಪುನರ್ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಕಳೆದ ವರ್ಷದ ಜನವರಿ 13 ರಂದು ಅದರ ಉದ್ಘಾಟನೆಯನ್ನು ಮಾಡಲಾಗಿತ್ತು.

Malleswaram Sangolli Rayanna Park

ಉದ್ಯಾನದ ನಾಲ್ಕು ದ್ವಾರಗಳಿಗೆ ಸಂಗೊಳ್ಳಿ ರಾಯಣ್ಣ, ವಿಶ್ವೇಶ್ವರಯ್ಯ, ಸುಭಾಷ್ ಚಂದ್ರ ಬೋಸ್ ಮತ್ತು ಮಹಾತ್ಮ ಗಾಂಧೀಜಿ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಇಲ್ಲಿ ಭದ್ರತೆಯನ್ನು ಒದಗಿಸಲಾಗಿದ್ದು, ಬೆಳಗ್ಗೆ 5.30 ರಿಂದ 10.30 ಮತ್ತು ಸಂಜೆ 4.30 ರಿಂದ ರಾತ್ರಿ 8.30 ರವರೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗುತ್ತಿದೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಬ್ರಿಗೇಡ್ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ಜೈಶಂಕರ್, ಗ್ರಾಹಕರಿಗೆ ವಿಶ್ವ ಮಟ್ಟದ ಮನೆಗಳನ್ನು ನಿರ್ಮಿಸಿಕೊಡುವುದು ನಮ್ಮ ಮೊದಲ ಆದ್ಯತೆ. ಈ ಮೂಲಕ ಅವರ ಜೀವನ ಮಟ್ಟ ಸುಧಾರಣೆಗೆ ಒತ್ತು ಕೊಡಲಾಗುತ್ತದೆ. ಇದರ ಜತೆಗೆ, ಉದ್ಯಾನಗಳ ಪುನರ್ ಅಭಿವೃದ್ಧಿಗೂ ಆದ್ಯತೆ ನೀಡಿದ್ದೇವೆ. ಮಲ್ಲೇಶ್ವರಂನಲ್ಲಿ ಸಂಗೊಳ್ಳಿ ರಾಯಣ್ಣ ಉದ್ಯಾನ ನಿರ್ಮಾಣ ಮಾಡುವ ಮೂಲಕ ಇಲ್ಲಿನ ಜನರ ಜೀವನ ಮಟ್ಟ ಸುಧಾರಣೆಗೆ ಕೊಡುಗೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

Malleswaram Sangolli Rayanna Park

ಜಲಪಾತದ ಸ್ವಾಗತ
ಉದ್ಯಾನವನ್ನು ಪ್ರವೇಶಿಸುತ್ತಿದ್ದಂತೆಯೇ ಧುಮ್ಮಿಕ್ಕಿ ಬೀಳುವ ಜಲಧಾರೆ ನಿಮ್ಮನ್ನು ಸ್ವಾಗತಿಸುತ್ತವೆ. ಸುಮಾರು 30 ಮೀಟರ್ ಎತ್ತರದಿಂದ ಬೀಳುವ ಈ ಜಲಪಾತವನ್ನು ನೋಡಲು ಎರಡು ಕಣ್ಣುಗಳು ಸಾಲದು. ಇಲ್ಲಿ ಧುಮ್ಮಿಕ್ಕಿ ಹರಿಯುವ ನೀರು ವ್ಯರ್ಥವಾಗುವುದೇ ಇಲ್ಲ. ಈ ನೀರನ್ನು ಪುನರ್ಬಳಕೆ ಮಾಡಲಾಗುತ್ತದೆ. ಇದರ ಜತೆಗೆ ಚಿತ್ತಾಕರ್ಷಕವಾದ ದ್ವಾರಗಳು ನಿಮಗೆ ಮುದ ನೀಡುತ್ತವೆ. ವಾಕಿಂಗ್ ಮಾಡುವವರಿಗೆ ಹಿತ ನೀಡಲೆಂದೇ ಮೃದುವಾದ ಇಟ್ಟಿಗೆಗಳ ಹಾಸನ್ನು ಹಾಕಲಾಗಿದೆ.

ವಾಕಿಂಗ್ ಮಾಡುವವರ ಕಿವಿಗೆ ಇಂಪಾಗುವಂತೆ ಸಂಗೀತವನ್ನೂ ಹಾಕಲಾಗುತ್ತದೆ. ಕೃತಕವಾದ ಅಣಬೆ ಆಕಾರದ ಲ್ಯಾಂಡ್ ಸ್ಕೇಪ್ ಗಳೊಳಗೆ ಸ್ಪಷ್ಟವಾಗಿ ಸಂಗೀತದ ಧ್ವನಿ ಕೇಳಿಸುವಂತಹ ಸ್ಪೀಕರ್ ಗಳನ್ನು ಅಳವಡಿಸಲಾಗಿದೆ.

ಭದ್ರತೆ ದೃಷ್ಟಿಯಿಂದ ಸಾರ್ವಜನಿಕರ ಪ್ರವೇಶಕ್ಕೆ ಮತ್ತು ನಿರ್ಗಮನಕ್ಕೆ ಒಂದು ದ್ವಾರವನ್ನು ತೆರೆಯಲಾಗುತ್ತದೆ. ಇದಲ್ಲದೇ ತುರ್ತು ನಿರ್ಗಮನ ದ್ವಾರವೂ ಇದೆ. ಇಲ್ಲಿ ಕುಳಿತುಕೊಳ್ಳುವ ಕುರ್ಚಿ, ಬೆಂಚುಗಳ ಕೆಳಗೆ ವರ್ಣರಂಜಿತ ದೀಪಗಳನ್ನು ಅಳವಡಿಸಲಾಗಿದೆ.

Malleswaram Sangolli Rayanna Park

ಹಿರಿಯರಿಗೆ ವ್ಯಾಯಾಮ, ಕಿರಿಯರಿಗೆ ಆಟದ ಸ್ಥಳ
ಉದ್ಯಾನವನ್ನು ಪ್ರವೇಶಿಸುತ್ತಿದ್ದಂತೆ ಬಲಭಾಗದಲ್ಲಿ ಮಕ್ಕಳಿಗೆಂದು ಆಟದ ಮೈದಾನವಿದೆ. ಅಲ್ಲಿಯೇ ಹಿರಿಯ ನಾಗರಿಕರು ವ್ಯಾಯಾಮ ಮಾಡಬಹುದಾಗಿದೆ. ಇಲ್ಲಿ ಎರಡು ಬಗೆಯ ವ್ಯಾಯಾಮದ ಪರಿಕರಗಳಿವೆ. 1. ಕೈನಿಂದ ಪೆಡಲ್ ತಿರುಗಿಸುವ ಸಾಧನ. ಇದು ಹಿರಿಯ ನಾಗರಿಕರ ಕೈಗಳಿಗೆ ಶಕ್ತಿ ತುಂಬಲು ಸಹಾಯ ಮಾಡುತ್ತದೆ. 2. ಮತ್ತೊಂದು ನಾನ್ ಎಲೆಕ್ಟ್ರಿಕ್ ಕ್ರಾಸ್ ಟ್ರೇನರ್ ಇದೆ.

ಸ್ವಚ್ಛವಾದ ಶೌಚಾಲಯಗಳು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ಸಂಜೆ ನೀವು ಇಲ್ಲಿಗೆ ಬಂದರೆ ನಿಮ್ಮ ತೂಕವನ್ನೂ ತಿಳಿದುಕೊಳ್ಳಬಹುದು. ಪ್ರವೇಶ ದ್ವಾರದಲ್ಲೇ ಡಿಜಿಟಲ್ ತೂಕ ಪರೀಕ್ಷಾ ಯಂತ್ರ ಇಡಲಾಗುತ್ತದೆ.

ಹಿರಿಯ ನಾಗರಿಕರಿಗೆ ಪ್ರತ್ಯೇಕ ತಾಣವಷ್ಟೇ ಅಲ್ಲ. ನಗುವ ಮೂಲಕ ಆರೋಗ್ಯ ವೃದ್ಧಿ ಮಾಡಿಕೊಳ್ಳಲೆಂದು ನಗೆಕೂಟವೂ ಇದೆ. ಬೇಸಿಗೆ ರಜೆಯಲ್ಲಿ ಇಲ್ಲಿ ಹತ್ತು ಹಲವಾರು ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತವೆ.

Malleswaram Sangolli Rayanna Park

ಔಷಧ ಸಸಿಗಳ ಆಗರ
ನಗರದಲ್ಲಿ ದಿನದಿಂದ ದಿನಕ್ಕೆ ಉಷ್ಣಾಂಶ ಏರುತ್ತಲೇ ಇದೆ. ಆದರೆ, ಈ ಪಾರ್ಕನ್ನು ನೀವು ಪ್ರವೇಶಿಸುತ್ತಿದ್ದಂತೆ ಅಲ್ಲಿನ ವಾತಾವರಣ ಆಹ್ಲಾದಕರವಾಗಿರುತ್ತದೆ. ದೊಡ್ಡ ದೊಡ್ಡ ಹಚ್ಚ ಹಸಿರಿನ ಮರಗಳು ತಂಗಾಳಿಯನ್ನು ಒದಗಿಸುತ್ತವೆ. ಇಲ್ಲಿನ ಯಾವುದೇ ಮರಗಳನ್ನು ಕಡಿಯುವುದಿಲ್ಲ. ಕಾಲಕಾಲಕ್ಕೆ ಟೊಂಗೆಗಳನ್ನು ಕತ್ತರಿಸಲಾಗುತ್ತದೆ. ಇದರ ಜತೆಗೆ ಬೇವು, ಪೀಪುಲ್, ಇಂಡಿಯನ್ ಬೀಚ್, ಕ್ಯಾಮೆಲ್ ಫ್ರೂಟ್ ಟ್ರೀ, ಪ್ರೈಡ್ ಆಫ್ ಇಂಡಿಯಾ, ಬ್ರೀಡ್ ಫ್ರೂಟ್, ಚೈನೀಸ್ ಚೆರ್ರಿ, ಇಂಡಿಯನ್ ಗೂಸ್ ಬೆರ್ರಿ ಸೇರಿದಂತೆ ಹತ್ತು ಹಲವಾರು ಔಷಧೀಯ ಸಸಿಗಳು ಇಲ್ಲಿವೆ.

ಕಣ್ಣಿಗೆ ಮುದ ನೀಡುವಂತೆ ಲ್ಯಾಂಡ್ ಸ್ಕೇಪ್ ಮಾಡಲಾಗಿದ್ದು, ಅವಕಾಶ ಇದ್ದ ಕಡೆಯಲ್ಲೆಲ್ಲಾ ಹಸಿರು ಕಾಯ್ದುಕೊಳ್ಳಲಾಗಿದೆ. ಹೀಗಾಗಿ ಪಾರ್ಕಿನ ಒಳಗೆ ಉಷ್ಣಾಂಶ ಸ್ವಲ್ಪ ಕಡಿಮೆ ಇರುತ್ತದೆ. ತಂಪನೆಯ ವಾತಾವರಣ ಇಲ್ಲಿ ಇರುತ್ತದೆ.

ಮಾಸ್ಟ್ ಟ್ರೀ, ಗುಲ್ ಮೊಹರ್, ಟ್ರೀ ಜಾಸ್ಮಿನ್, ಆಫ್ರಿಕನ್ ಟೈಲಿಪ್, ಪಿಂಕ್ ಪೊಯ್, ಗೋಲ್ಡನ್ ಬೆಲ್ ಸೇರಿದಂತೆ ಹಲವಾರು ಅಲಂಕಾರಿಕ ಗಿಡ-ಮರಗಳು ನಿಮ್ಮನ್ನುಇಲ್ಲಿ ಆಕರ್ಷಿಸುತ್ತವೆ. ಈ ಮೂಲಕ ಈ ಉದ್ಯಾನ ತರಹೇವಾರಿ ಗಿಡಮರಗಳ ಸಸ್ಯಕಾಶಿ ಎನಿಸಿದೆ.

Malleswaram Sangolli Rayanna Park

ಉದ್ಯಾನದ ಮಧ್ಯ ಭಾಗದಲ್ಲಿ ವರ್ತುಲಾಕಾರದ ಹಸಿರಿನ ಪುಟ್ಟದಾದ ಮತ್ತೊಂದು ಉದ್ಯಾನ ಕಾಣಬಹುದಾಗಿದೆ. ಇಲ್ಲಿ ಹಿಬಕಸ್, ಒಲಿಯಾಂಡರ್ಸ್, ಮಾರಿಗೋಲ್ಡ್, ಫಿಯೋನೆಕ್ಸ್ ನಂತಹ ಸಸಿಗಳು ಕಾಣಸಿಗುತ್ತವೆ.

ಉದ್ಯಾನದ ವಿಸ್ತರಣೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸಾಕಷ್ಟು ಸ್ಥಳಾವಕಾಶ ಸಿಕ್ಕಂತಾಗಿದೆ. ವಾಕಿಂಗ್ ಮತ್ತು ಜಾಗಿಂಗ್ ಟ್ರ್ಯಾಕ್ ಅಲ್ಲದೇ, ವಿಶ್ರಾಂತಿ ಪಡೆಯಲೆಂದು ಅಲ್ಲಲ್ಲಿ ಎರಡೂ ಬದಿಯಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಕಾಂಕ್ರೀಟ್ ಬೆಂಚ್‍ಗಳು ಮತ್ತು ವರ್ತುಲಾಕಾರದ ಆಸನಗಳಿವೆ.

ಮಳೆ ನೀರು ಕೊಯ್ಲಿಗೆ ಆದ್ಯತೆ
ಮಳೆ ಕೊರತೆ, ನೀರಿನ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಇಡೀ ಉದ್ಯಾನದಲ್ಲಿ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಲಾಗಿದೆ. ಇದಕ್ಕಾಗಿ 4 ದೊಡ್ಡ ಪಿಟ್ ಗಳನ್ನು ತೋಡಲಾಗಿದ್ದು, ಮಳೆ ಬಂದ ಸಂದರ್ಭದಲ್ಲಿ ಚರಂಡಿ ಮೂಲಕ ನೀರು ಈ ಪಿಟ್ ಗಳನ್ನು ಸೇರಿಕೊಳ್ಳಲಿದೆ. ಸರಾಗವಾಗಿ ನೀರು ಹರಿಯುವಂತಾಗಲು ವ್ಯವಸ್ಥೆ ಕಲ್ಪಿಸಲಾಗಿದೆ. ಈ ನೀರು ನೇರವಾಗಿ ಸಂಪನ್ನು ಸೇರಿ ಅಲ್ಲಿಯೂ ನೀರು ಸಂಗ್ರಹಗೊಳ್ಳುತ್ತೆ. ಇದೇ ನೀರನ್ನು ಉದ್ಯಾನವನದ ಗಿಡಮರಗಳಿಗೆ ಬಳಸುತ್ತಾರೆ.

ನಾಡಪ್ರಭು ಕೆಂಪೇಗೌಡ ಆಟದ ಮೈದಾನ
ಇಲ್ಲಿನ ಆಟದ ಮೈದಾನಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರಿಡಲಾಗಿದೆ. ಉದ್ಯಾನವನಕ್ಕೆ ಹೊಂದಿಕೊಂಡಿದೆಯಾದರೂ ಮೈದಾನ ಮತ್ತು ಉದ್ಯಾನದ ನಡುವೆ ರಸ್ತೆ ಇದೆ. ರಸ್ತೆಯ ಮತ್ತೊಂದು ಬದಿಯಲ್ಲಿ ಈ ಮೈದಾನವಿದೆ. ಈ ಮೈದಾನವನ್ನು ಬ್ರಿಗೇಡ್ ಗ್ರೂಪ್ 3 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಿದೆ. ಬೆಳಗ್ಗೆ 5.30 ರಿಂದ 10.30 ರವರೆಗೆ ಈ ಮೈದಾನಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ. 200 ಮೀಟರ್ ಉದ್ದದ ಸ್ಕೇಟಿಂಗ್, ಬಾಸ್ಕೆಟ್ ಬಾಲ್ ಮತ್ತು ವಾಲಿಬಾಲ್ ಕೋರ್ಟ್, ಲಾಂಗ್ ಜೆಂಪ್ ಗೆಂದು ಜಾಗ, ಕ್ರಿಕೆಟ್ ಪ್ರಾಕ್ಟೀಸ್ ಮಾಡಲೆಂದು 2 ನೆಟ್ ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.

ಇವಿಷ್ಟೇ ಅಲ್ಲ. ಯೋಗ ಮತ್ತು ಕರಾಟೆಗೆಂದು ಪ್ರತ್ಯೇಕ ಜಾಗವೂ ಇಲ್ಲಿದೆ. ಮಕ್ಕಳು ಆಟವಾಡಿಕೊಳ್ಳಲೆಂದು ಪ್ರತ್ಯೇಕ ಜಾಗ, ಇಲ್ಲಿ ನಡೆಯುವ ಕ್ರೀಡೆಗಳ ವೀಕ್ಷಣೆಗೆಂದು ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ. ಬಿಬಿಎಂಪಿ ಶಾಲೆಗಳ ಮತ್ತು ಇತರೆ ಶಾಲಾ ಕ್ರೀಡಾಕೂಟಗಳಿಗೂ ಇಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ. (ಒನ್ಇಂಡಿಯಾ ಕನ್ನಡ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+