ಸಹೋದ್ಯೋಗಿಯನ್ನು ಕೊಂದು ಮೂಟೆ ಕಟ್ಟಿಟ್ಟು ಪರಾರಿ!
ಬೆಂಗಳೂರು, ಆ.6 : ಪರೋಟ ತಯಾರು ಮಾಡುತ್ತಿದ್ದ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನನ್ನು ಸಹೋದ್ಯೋಗಿಗಳೂ ಕೊಲೆ ಮಾಡಿ, ಮೂಟೆ ಕಟ್ಟಿಟ್ಟು ಪರಾರಿಯಾಗಿರುವ ಘಟನೆ ಕಮಲಾ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಭಾನುವಾರ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದ್ದು, ಸಹೋದ್ಯೋಗಿಗಳು ಪರಾರಿಯಾಗಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ತಮಿಳುನಾಡಿನ ಜೋಲಾರಪೇಟೆ ಮೂಲದ ಅಜ್ಜು (26) ಎಂದು ಗುರುತಿಸಲಾಗಿದೆ. ಕಮಲಾನಗರದ ಸಮೀಪದಲ್ಲಿನ ಶಂಕರ್ ನಾಗ್ ಬಸ್ ನಿಲ್ದಾಣದ ಬಳಿ ಬಾಡಿಗೆ ಮನೆ ಮಾಡಿಕೊಂಡಿದ್ದ ಕುಪ್ಪಣ್ಣ ಅವರು ಅಜ್ಜು, ಬಾಬು ಹಾಗೂ ಶ್ರೀನಿವಾಸ್ ಎಂಬುವವರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದರು.

ಪರೋಟವನ್ನು ತಯಾರಿಸಿ ನಗರದ ವಿವಿಧ ಹೋಟೆಲ್ ಗಳಿಗೆ ಸರಬರಾಜು ಮಾಡುವ ಕಾರ್ಯದಲ್ಲಿ ಎಲ್ಲರೂ ತೊಡಗಿಸಿಕೊಂಡಿದ್ದರು. ಭಾನುವಾರ ಅಜ್ಜು ಕೆಲಸಕ್ಕೆ ಬಂದಿರಲಿಲ್ಲ. ಬಾಬು ಹಾಗೂ ಶ್ರೀನಿವಾಸ್ ಮಾತ್ರ ಕೆಲಸ ಮಾಡುತ್ತಿದ್ದರು. ಅಜ್ಜು ಬಗ್ಗೆ ವಿಚಾರಿಸಿದ್ದಕ್ಕೆ ಹೊರಗೆ ಹೋಗಿದ್ದಾರೆ ಎಂದು ಅವರು ಹೇಳಿದ್ದರು.
ಭಾನುವಾರ ಮಧ್ಯಾಹ್ನ ಕುಪ್ಪಣ್ಣ ಅವರು ಅಜ್ಜು ಮೊಬೈಲ್ ಗೆ ಕರೆ ಮಾಡಿದಾಗಲೂ ಬಾಬು ಅವರು ಊರಿಗೆ ಹೋಗಿದ್ದಾರೆ ಎಂದು ಉತ್ತರ ನೀಡಿದ್ದರು. ಸೋಮವಾರ ಸಂಜೆ ಮನೆ ಬಳಿ ಬಂದ ಕುಪ್ಪಣ್ಣ ಅವರು ಮನೆಗೆ ಹೊರಗಿನಿಂದ ಬೀಗ ಹಾಕಿದ್ದನ್ನು ಗಮನಿಸಿದ್ದಾರೆ. ತಮ್ಮ ಬಳಿ ಇದ್ದ ಮತ್ತೊಂದು ಬೀಗದ ಕೈ ಬಳಸಿ ಮನೆಯೊಳಗೆ ಪ್ರವೇಶಿಸಿದಾಗ ಕೊಲೆಯಾಗಿರುವ ಸಂಗತಿ ಬಯಲಾಗಿದೆ.
ಮೂಟೆ ಕಟ್ಟಿಟ್ಟರು : ಅಜ್ಜುವನ್ನು ಕೊಲೆ ಮಾಡಿರುವ ಬಾಬು ಮತ್ತು ಶ್ರೀನಿವಾಸ್ ಅಜ್ಜುವಿನ ಹೆಣವನ್ನು ಮೂಟೆ ಕಟ್ಟಿದ್ದರು. ಮೂಟೆಯ ಮೇಲೆ ಪೌಡರ್, ಮೈದಾಹಿಟ್ಟು ಹಾಕಿ ವಾಸನೆ ಬರದಂತೆ ಪೇಪರ್ ಮುಚ್ಚಿದ್ದರು. ಮೂಟೆ ಬಳಿ ತೆರಳಿದ ಕುಪ್ಪಣ್ಣ ಅವರಿಗೆ ಕೆಟ್ಟ ವಾಸನೆ ಬಂದಾಗ ಅದನ್ನು ತೆರೆದು ನೋಡಿದ್ದಾರೆ. ಆಗ ಅಜ್ಜು ಮೃತದೇಹ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಆಗಮಿಸಿಗದ ಬಸವೇಶ್ವರ ನಗರ ಪೊಲೀಸರು ಹಾಗೂ ಶ್ವಾನದಳ ಸಿಬ್ಬಂದಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಶ್ಚಿಮ ವಿಭಾಗ ಡಿಸಿಪಿ ಲಾಭೂರಾಮ್ ಸ್ಥಳಕ್ಕೆ ಭೇಟಿ ನೀಡಿದ್ದರು. ಬಾಬು ಹಾಗೂ ಶ್ರೀನಿವಾಸ್ ಎಂಬುವರು ತಲೆಮರೆಸಿಕೊಂಡಿದ್ದಾರೆ ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications