ಗಣೇಶ ಹಬ್ಬ: ಜೆಪಿ ನಗರದ ಸತ್ಯ ಗಣಪತಿ ದೇಗುಲದಲ್ಲಿ ಹೂ,ಹಣ್ಣಿನ ಅಲಂಕಾರ
ಬೆಂಗಳೂರು,ಆಗಸ್ಟ್ 29: ಗಣೇಶ ಚತುರ್ಥಿಯ ಪ್ರಯುಕ್ತ ಜೆಪಿ ನಗರದ ಶ್ರೀ ಸತ್ಯ ಗಣಪತಿ ದೇವಸ್ಥಾನದಲ್ಲಿ ವಿಶೇಷವಾಗಿ ಅಲಂಕಾರ ಮಾಡಲಾಗಿದ್ದು, ಭಕ್ತರು ಸೇರಿದಂತೆ ಸಾರ್ವಜನಿಕರನ್ನು ತನ್ನತ್ತ ಸೆಳೆಯುತ್ತಿದೆ.
ಶ್ರೀ ಸತ್ಯ ಗಣಪತಿ ದೇವಸ್ಥಾನದಲ್ಲಿ 10 ಬಗೆಯ ಹಣ್ಣುಗಳು ಮುಸುಕಿನ ಜೋಳ, ಸೊಪ್ಪುಗಳು ಹಾಗೂ ಹೂವುಗಳನ್ನು ಬಳಸಿಕೊಂಡು ವಿಶೇಷ ಆಲಂಕಾರವನ್ನು ಮಾಡಲಾಗಿದೆ ಎಂದು ಶ್ರೀ ಸತ್ಯ ಗಣಪತಿ ಶಿರಡಿ ಸಾಯಿ ಟ್ರಸ್ಟ್‌ನ ಟ್ರಸ್ಟಿ ರಾಮ್ ಮೋಹನ ರಾಜ್ ತಿಳಿಸಿದ್ದಾರೆ.
ಪ್ರತಿ ಬಾರಿಯೂ ವಿಶೇಷ ಆಲಂಕಾರ ಹಾಗೂ ವಿಶೇಷ ಸಾಮಗ್ರಿಗಳನ್ನು ಬಳಸಿಕೊಂಡು ಗಣೇಶ ಮೂರ್ತಿಯನ್ನು ತಯಾರಿಸುವ ಮೂಲಕ ದೇಶದ ಗಮನವನ್ನ ಈ ದೇವಸ್ಥಾನ ಸೆಳೆಯುತ್ತಿತ್ತು. ಈ ಬಾರಿ ಕರೋನಾ ಮಹಾಮಾರಿ ಕಡಿಮೆ ಆಗಿರುವ ನಿಟ್ಟಿನಲ್ಲಿ ವಿಶೇಷ ಆಲಂಕಾರವನ್ನು ಏರ್ಪಡಿಸಲಾಗಿದೆ. ಪ್ರತ್ಯೇಕವಾಗಿ ಮೂರ್ತಿಯನ್ನು ಪ್ರತಿಷ್ಠಾಪಿಸದೇ ದೇವಸ್ಥಾನದಲ್ಲಿ ಇರುವ ಮೂರ್ತಿಗೆ ವಿಶೇಷ ಆಲಂಕಾರ ಮಾಡಲಾಗಿದೆ ಎಂದರು.

10 ಬಗೆಯ ಹಣ್ಣು, ಹೂ, ಸೊಪ್ಪುಗಳಿಂದ ದೇಗುಲ ಸಿಂಗಾರ
ಸಿಬೇಕಾಯಿ, ಕಲ್ಲಂಗಡಿ, ಡ್ರಾಗನ್ ಪ್ರೂಟ್, ದಾಳಿಂಬೆ, ಟೊಮ್ಯಾಟೋ, ಗಜ್ಜರಿ ಹೀಗೆ 10 ವಿವಿಧ ಹಣ್ಣುಗಳನ್ನು, ಮುಸುಕಿನ ಜೋಳ, ತರೇವಾರಿ ಹೂವುಗಳು ಹಾಗೂ ಸೊಪ್ಪುಗಳನ್ನು ಬಳಸಿಕೊಂಡು ಆಲಂಕಾರ ಮಾಡಲಾಗಿದೆ ಎಂದು ರಾಮ್ ಮೋಹನ ರಾಜ್ ತಿಳಿಸಿದರು.
ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ದೃಷ್ಟಿಯಿಂದ 10 ಸಾವಿರ ಮಣ್ಣಿನ ಗಣೇಶ ಮತ್ತು ಗೌರಿ ಮೂರ್ತಿಗಳನ್ನು ವಿತರಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಎಲ್ಲ ದೇವಸ್ಥಾನಗಳಲ್ಲಿ ಅಲಂಕಾರ
ಕೊರೋನಾ ಕಾರಣದಿಂದ ಕಳೆದ ಎರಡು ವರ್ಷದಲ್ಲಿ ವಿಜೃಂಭಣೆಯ ಗಣೇಶೋತ್ಸವ ಆಚರಿಸಲು ಆಗಿರಲಿಲ್ಲ. ಆದರೆ ಈ ಬಾರಿ ಕೊರೊನಾ ಪಿಡುಗಿನ ಆತಂಕ ಇಲ್ಲದಾಗಿದ್ದರಿಂದ ಜನರು ಹಬ್ಬ ಹರಿದಿನಗಳನ್ನು ಮೊದಲಿನ ವರ್ಷಗಳಂತೆ ಅದ್ಧೂರಿಯಾಗಿ ಆಚರಿಸ ಸಜ್ಜಾಗಿದೆ. ದೇವಸ್ಥಾನಗಳು ಇದರಿಂದ ಹೊರತಾಗಿಲ್ಲ.
ಆಗಸ್ಟ್ 31ರಂದು ದೇವಸ್ಥಾನಗಳೂ ಅದರಲ್ಲೂ ಗಣೇಶ ದೇವಸ್ಥಾನಗಳು ಹೂಗಳು, ವಿದ್ಯುತ್ ದೀಪಗಳಿಂದ ಕಂಗೊಳ್ಳಿಸುತ್ತಿರುತ್ತವೆ. ಎಲ್ಲೆಲ್ಲೂ ಗಣೇಶ ನಾಮ, ಭಕ್ತಿ ಗೀತೆ ಸೇರಿದಂತೆ ಸಿನಿಮಾ ಹಾಡುಗಳು ರಾರಾಜಿಸುತ್ತಿರುತ್ತವೆ. ಭಕ್ತರು ಈ ಭಾರಿ ಸಾರ್ವಜನಿಕ ಗಣೇಶ ದರ್ಶನ ಪಡೆಯಲು ಹಾಗೂ ಕಾತರರಾಗಿದ್ದಾರೆ. ಇನ್ನೂ ಜೆಪಿ ಶ್ರೀ ಸತ್ಯ ಗಣಪತಿ ದೇವಸ್ಥಾನದಲ್ಲಿ ಗಣೇಶೋತ್ಸವದಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.












Click it and Unblock the Notifications