Namma Metro: ಮತ್ತೆ ಹಳದಿ ಮಾರ್ಗದ ರೈಲಲ್ಲಿ ದೋಷ!: ಹೆಚ್ಚಾಯ್ತು ಮೆಟ್ರೋ ಆವರ್ತನ ಸಮಯ
ಬೆಂಗಳೂರು, ಅಕ್ಟೋಬರ್ 12: ಬೆಂಗಳೂರು ಮೆಟ್ರೋ ಹಳದಿ ಮಾರ್ಗವು ಉದ್ಘಾಟನೆ ಆಗಿ ಎರಡೂವರೆ ತಿಂಗಳು ಆಗಿಲ್ಲ. ಅಷ್ಟರಲ್ಲಾಗಲೇ ಕೆಲ ಬಾರಿ ತಾಂತ್ರಿಕ ಸಮಸ್ಯೆಗಳು ಕಂಡು ಬಂದಿವೆ. ಇದೀಗ ಎರಡನೇ ಬಾರಿ ಈ ಮಾರ್ಗದ ರೈಲಿನಲ್ಲಿ ತಾಂತ್ರಿಕ ದೋಷ ಉಂಟಾದ ಕಾರಣ ಇಂದು ಭಾನುವಾರ (ಅಕ್ಟೋಬರ್ 12) ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಯಿತು. ನಾಲ್ಕನೇ ರೈಲು ಬಂದ ಬಳಿಕ ಇಳಿಕೆ ಆಗಿದ್ದ ರೈಲಿನ ಆವರ್ತನ ಮತ್ತೆ 25ನಿಮಿಷಕ್ಕೆ ಹೆಚ್ಚಾಗಿದೆ.
ಹೌದು, ಇಂದು ರೈಲಿನಲ್ಲಿ ತಾಂತ್ರಿಕ ದೋಷ ಉಂಟಾಗಿರುವ ಕಾರಣದಿಂದ 10:15 ಗಂಟೆಯಿಂದ ಹಳದಿ ಮಾರ್ಗದ (ಆರ್.ವಿ.ರಸ್ತೆ-ಬೊಮ್ಮಸಂದ್ರ) ರೈಲುಗಳು 25 ನಿಮಿಷಗಳ ಅಂತರದಲ್ಲಿ ಸಂಚರಿಸುತ್ತಿವೆ. ಪ್ರಯಾಣಿಕರು ಈ ಕುರಿತು ಗಮನಿಸಿ ಇದರಿಂದ ಆದ ಅನಾನುಕೂಲತೆಗೆ ಸಹಕರಿಸಬೇಕು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಸಾರ್ವಜನಿಕರಲ್ಲಿ ವಿನಂತಿಸಿದೆ.

ಈ ಮೊದಲು ಮೂರು ರೈಲುಗಳು ಹಳದಿ ಮಾರ್ಗದಲ್ಲಿ ಸಂಚರಿಸುತ್ತಿದ್ದಾಗ ರೈಲುಗಳ ಆವರ್ತನ 25 ನಿಮಿಷಕ್ಕೆ ಒಂದರಂತೆ ಇತ್ತು. ಬಳಿಕ ನಾಲ್ಕನೇ ರೈಲು ಸೇವೆ ಆರಂಭಿಸುತ್ತಿದ್ದಂತೆ ರೈಲುಗಳ ಆವರ್ತನ 19 ನಿಮಿಷಕ್ಕೆ ಇಳಿಕೆ ಆಗಿತ್ತು. ಒಟ್ಟು ನಾಲ್ಕು ರೈಲುಗಳು ಮಾತ್ರವೇ ಈ ಮಾರ್ಗದಲ್ಲಿ ಓಡಾಡುತ್ತವೆ. ಒಂದು ರೈಲಿನಲ್ಲಿ ಏನಾದರೂ ತೊಂದರೆ ಆದರೆ, ಅದು ನಿವಾರಣೆ ಆಗುವವರೆಗೆ ಮೂರು ರೈಲುಗಳು ಮಾತ್ರವೇ ಓಡಾಡುತ್ತವೆ. ಹೀಗಾಗಿಯೇ ರೈಲುಗಳ ಆವರ್ತನ 25 ನಿಮಿಷಕ್ಕೆ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.
ರೈಲುಗಳ ಆವರ್ತನ 15 ನಿಮಿಷಕ್ಕೆ ಇಳಿಕೆ ಯಾವಾಗ?
ಐದನೇ ರೈಲು ಶೀಘ್ರವೇ ಕಾರ್ಯಾಚರಣೆ ಇಳಿಯಲಿದೆ. ಈಗಾಗಲೇ ಬೆಂಗಳೂರಿಗೆ ಟಿಟಾಗರ್ ನಿಂದ ಬಂದಿರುವ ರೈಲು ಬೋಗಿ ಜೋಡಿಸಿ, ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಪರೀಕ್ಷೆಗಳು ಪೂರ್ಣಗೊಳ್ಳುತ್ತಿದ್ದಂತೆ ಅಕ್ಟೋಬರ್ ಅಂತ್ಯದ ಹೊತ್ತಿಗೆ ಐದನೇ ರೈಲು ಹಳದಿ ಮಾರ್ಗದಲ್ಲಿ ಸೇವೆಗೆ ನಿಯೋಜನೆಗೊಳ್ಳಲಿದೆ. ಆಗ ಪ್ರತಿ ರೈಲಿನ ಆವರ್ತನ ಸಮಯ 15-16 ನಿಮಿಷಕ್ಕೆ ಇಳಿಯಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications