ಪತ್ನಿಯನ್ನು ಉಸಿರುಗಟ್ಟಿಸಿ ಕೊಂದು ಕರೆಂಟ್ ಶಾಕ್‌ನಿಂದ ಸತ್ತಳು ಎಂದ ಟೆಕ್ಕಿ
ಬೆಂಗಳೂರು, ಮಾರ್ಚ್ 12: ಪತ್ನಿಯನ್ನು ಉಸಿರುಗಟ್ಟಿಸಿ ತಾನೇ ಕೊಲೆ ಮಾಡಿ, ವಿದ್ಯುತ್ ಶಾಕ್‌ನಿಂದ ಸತ್ತಳು ಎಂದು ಸುದ್ದಿ ಹಬ್ಬಿಸಿದ್ದ ಟೆಕ್ಕಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಮಾರತ್‌ಹಳ್ಳಿ ನಿವಾಸಿ ವೆಂಕಟಮ್ಮ(32) ಮೃತ ಗೃಹಿಣಿ, ಈಕೆಯ ಪತಿ ಶ್ರೀನಿವಾಸ್ ರೆಡ್ಡಿ ಯನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಸಹಕರಿಸಿದ ಆರೋಪಿ ಅಕ್ಕ ರಮಣಮ್ಮ ಮತ್ತು ಭಾವಾ ಶ್ರೀನಿವಾಸ್ ತಲೆಮರೆಸಿಕೊಂಡಿದ್ದಾರೆ.
ಆಂಧ್ರಪ್ರದೇಶ ಮೂಲದ ಶ್ರೀನಿವಾಸರಡ್ಡಿ ಮತ್ತು ವೆಂಕಟ್ಮ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದು, ಬೆಂಗಳೂರಿಗೆ ಬಂದು ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ವೆಂಕಟಮ್ಮ ಅವರಿಗೆ ಮಕ್ಕಳಾಗಿರಲಿಲ್ಲ, ಇದು ಪತಿಗೆ ಬೇಸರ ತಂದಿತ್ತು. ಶನಿವಾರ ಮಾ.9ರ ರಾತ್ರಿ ಪತ್ನಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ ಶ್ರೀನಿವಾಸ್, ಜಾಲಹಳ್ಳಿಯಲ್ಲಿ ನೆಲೆಸಿದ್ದ ಅಕ್ಕ, ಭಾವನಿಗೆ ವಿಷಯ ತಿಳಿಸಿದ್ದ. ವೆಂಕಟಮ್ಮ ತವರು ಮನೆಗೆ ಸಾಗಿಸಿದ್ದ, ಸ್ನಾನಗೃಹದಲ್ಲಿ ವಿದ್ಯುತ್ ಪ್ರವಹಿಸಿ ನಿಮ್ಮ ಮಗಳು ಅಸುನೀಗಿದ್ದಾಳೆ ಎಂದು ಅತ್ತೆ, ಮಾವನನ್ನು ನಂಬಿಸಿದ್ದ.
ಅದನ್ನು ನಂಬದ ವೆಂಕಟಮ್ಮ ತಾಯಿ ಎಚ್‌ಎಎಲ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ಪೊಲೀಸರು ಶ್ರೀನಿವಾಸರೆಡ್ಡಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಾನೇ ಕೊಲೆ ಮಾಡಿರುವ ಸತ್ಯ ಬಾಯ್ಬಿಟ್ಟಿದ್ದಾನೆ.












Click it and Unblock the Notifications