ಅನುದಾನಕ್ಕೆ ಆಗ್ರಹ : ವಿಷ ಸೇವಿಸಿದ ನಾಲ್ವರು ಶಿಕ್ಷಕರು

ಅನುದಾನ ರಹಿತ ಶಾಲಾ ಶಿಕ್ಷಕರು ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕಳೆದ ಕೆಲವು ದಿನಗಳಿಂದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು 40 ಶಿಕ್ಷಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಆದರೆ, ಗುರುವಾರದ ತನಕ ಯಾವುದೇ ಜನಪ್ರತಿನಿಧಿಗಳು ಶಿಕ್ಷಕರ ಸಮಸ್ಯೆಗೆ ಸ್ಪಂದಿಸದ ಕಾರಣ ನಾಲ್ವರು ಶಿಕ್ಷಕರು ಗುರುವಾರ ಸಂಜೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಲ್ಲಿ ಒಬ್ಬರು ಶಿಕ್ಷಕರ ಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ವಾಣಿ ವಿಲಾಸ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಶಿಕ್ಷಕರು ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕೆಲವು ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. 60 ದಿನಗಳ ಕಾಲ ಬೆಂಗಳೂರಿನಲ್ಲಿ ಪ್ರತಿಭಟನಾ ಧರಣಿ ನಡೆಸಿದ್ದರು. ಬೆಳಗಾವಿ ಚಳಿಗಾಲದ ಅಧಿವೇಶನದ ಅವಧಿಯಲ್ಲಿಯೂ ಪ್ರತಿಭಟನೆ ನಡೆಸಿದ್ದರು. ಅಧಿವೇಶನ ಮುಗಿದು ಎರಡು ದಿನಗಳಲ್ಲಿ ಬೇಡಿಕೆ ಈಡೇರಿಸುವ ಭರವಸೆಯನ್ನು ಸಿಎಂ ನೀಡಿದ್ದರು.
ಆದರೆ, ಅಧಿವೇಶನ ಅಂತ್ಯಗೊಂಡು ತಿಂಗಳುಗಳು ಕಳೆದರೂ, ಸರ್ಕಾರವಾಗಲೀ, ಅಧಿಕಾರಿಗಳಾಗಲಿ ಅನುದಾನ ಬಿಡುಗಡೆಗೆ ಮಾಡಿರಲಿಲ್ಲ. ಆದ್ದರಿಂದ ಫ್ರೀಡಂ ಪಾರ್ಕ್ ನಲ್ಲಿ ಅನುದಾನ ಬಿಡುಗಡೆ ಮಾಡಿ, ಇಲ್ಲವೇ ದಯಾಮರಣ ನೀಡಿ ಎಂದು ಕೋರಿ ಪ್ರತಿಭಟನೆ ನಡೆಸುತ್ತಿದ್ದರು. ಗುರುವಾರ ಪ್ರತಿಭಟನಾ ನಿರತರಲ್ಲಿ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕಳೆದ 25 ವರ್ಷಗಳಿಂದ ಸರ್ಕಾರ ಅನುದಾನ ನೀಡುತ್ತಿತ್ತು. ಸದ್ಯ ಸಣ್ಣ ಕಾರಣಗಳನ್ನು ಮುಂದಿಟ್ಟುಕೊಂಡು ಅನುದಾನ ಬಿಡುಗಡೆ ಮಾಡದೆ ತಡೆ ಹಿಡಿದಿದೆ. ಇದರಿಂದ ನಮ್ಮ ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಕೇಲವ ಪೊಳ್ಳು ಭರವಸೆಗಳನ್ನು ನೀಡುತ್ತಾ ಕಾಲಹರಣ ಮಾಡುತ್ತಿದೆ ಎಂದು ಪ್ರತಿಭಟನಾನಿರತ ಶಿಕ್ಷಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications