ಮೇಕೆದಾಟು ಯೋಜನೆ: ಡಿಎಂಕೆ ನಿರ್ಧಾರದ ಬಗ್ಗೆ ಎಎಪಿ, ಬಿಜೆಪಿ ನಾಯಕರ ಪ್ರತಿಕ್ರಿಯೆ
ಬೆಂಗಳೂರು, ಮಾರ್ಚ್ 21: ಬೆಂಗಳೂರು ಸೇರಿ ಕೆಲವು ಜಿಲ್ಲೆಗಳ ಜೀವನಾಡಿ ಉದ್ದೇಶಿತ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬಿಡುವುದಿಲ್ಲ ಎಂದಿರುವ ತಮಿಳುನಾಡು ನಡೆಯನ್ನು ಎಎಪಿ, ಬಿಜೆಪಿ ನಾಯಕರು ಸೇರಿದಂತೆ ಹಲವರು ಖಂಡಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಬಿಜೆಪಿ ವಿರುದ್ಧ ಕಟ್ಟಿರುವ 'ಇಂಡಿಯಾ' ಮೈತ್ರಿಕೂಟ ಗೆದ್ದರೆ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲು ಕರ್ನಾಟಕ ರಾಜ್ಯ ಉದ್ದೇಶಿಸಿರವ ಮೇಕೆದಾಟು ಆಣೆಕಟ್ಟು ಕಟ್ಟಲು ಬಿಡುವುದಿಲ್ಲ ಎಂದು ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ. ಮೇಕೆದಾಟು ಯೋಜನೆಗೆ ಅಡ್ಡಿಪಡಿಸುವ ಅಂಶವನ್ನು ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ.

ತಮಿಳುನಾಡಿನ ಈ ನಡೆ ಖಂಡಿಸಿರುವ ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು, 'ಇಂಡಿಯಾ' ಮೈತ್ರಿಕೂಟದ ಭಾಗವಾಗಿರುವ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ತಡೆಯೊಡ್ಡುವುದಾಗಿ ಹೇಳಿರುವುದು ಬೇಸರದ ಸಂಗತಿ. ಸಿಎಂ ಎಂ.ಕೆ. ಸ್ಟಾಲಿನ್ ಅವರ ನಡೆ ಖಂಡನಾರ್ಹ ಎಂದು ಗುರುವಾರ ತಿಳಿಸಿದರು.
ಕರ್ನಾಟಕದ ಉದ್ದೇಶ ಏನು?
ಮೇಕೆದಾಟು ಯೋಜನೆಯು ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ನಿರ್ಮಾಣ ಮಾಡಲಾಗುತ್ತಿದೆ. ಮೇಕೆದಾಟು ಪರಿಸರದಲ್ಲಿ ಜಲಾಶಯ ನಿರ್ಮಾಣ ಮಾಡಿ, ಮಳೆಗಾಲದ ಸಂದರ್ಭದಲ್ಲಿ ಸಮುದ್ರ ಪಾಲಾಗುವ 65-66 ಟಿಎಂಸಿ ಹೆಚ್ಚುವರಿ ನೀರನ್ನು ಸಂಗ್ರಹಿಸಬೇಕು ಎಂಬುದು ನಮ್ಮ ರಾಜ್ಯದ ಉದ್ದೇಶವಾಗಿದೆ.
ಕರ್ನಾಟಕಕ್ಕೆ ಅಗತ್ಯವಿರುವ ವಿದ್ಯುತ್ ಉತ್ಪಾದನೆಗೂ ಈ ಯೋಜನೆಯಿಂದ ಅನುಕೂಲವಾಗಲಿದೆ. ಇಂತಹ ಜನಪರ ಯೋಜನೆಗೆ ರಾಜಕೀಯ ಉದ್ದೇಶದಿಂದ ಡಿಎಂಕೆ ಅಡ್ಡಗಾಲು ಹಾಕುತ್ತಿದೆ. ಈ ವಿಚಾರವಾಗಿ ಸ್ಟಾಲಿನ್ ಅವರ ನಡೆ ಸರಿಯಲ್ಲ ಎಂದು ದೂರಿದರು.
ಕರ್ನಾಟಕದ ವಿರುದ್ಧ ದ್ವೇಷ ರಾಜಕಾರಣ
ಒಂದೆಡೆ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕದ ವಿರುದ್ಧ ದ್ವೇಷ ರಾಜಕಾರಣ ನಡೆಸುತ್ತಿದೆ. ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಕಾನೂನು ಸಮ್ಮತಿ ಸಿಕ್ಕರೂ, ಕೇಂದ್ರ ಪರಿಸರ ಇಲಾಖೆ ಒಪ್ಪಿಗೆ ನೀಡದೆ ಸತಾಯಿಸುತ್ತಿದೆ. ಇಂತಹ ಸಂದರ್ಭದಲ್ಲಿ ಡಿಎಂಕೆ ಮಿತ್ರ ಪಕ್ಷವಾಗಿದ್ದುಕೊಂಡು ನಮ್ಮ ಆಶಯಕ್ಕೆ ತೊಡಕುಂಟು ಮಾಡುತ್ತಿರುವುದು ದುರಾದೃಷ್ಟಕರ.

ಸ್ಟಾಲಿನ್ ಅವರಿಂದ ಇದನ್ನು ನಿರೀಕ್ಷಿಸಿರಲಿಲ್ಲ. ಮೇಕೆದಾಟು ಯೋಜನೆ ನಮ್ಮ ರಾಜ್ಯದ ಹಕ್ಕು. ಸಾಮಾನ್ಯ ಸಂದರ್ಭಗಳಲ್ಲಿ ಕರ್ನಾಟಕವು ತಮಿಳುನಾಡಿಗೆ ಎಷ್ಟು ಟಿಎಂಸಿ ನೀರು ಬಿಡಬೇಕು ಎಂಬುವುದನ್ನು ಕಾವೇರಿ ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ. ಸಂಕಷ್ಟದ ವರ್ಷದಲ್ಲಿ ಸಂಗ್ರಹವಾದ ನೀರನ್ನು ನಾವು ಬಳಸಬಹುದಾಗಿದೆ. ಪ್ರವಾಹ ಮತ್ತು ಸಂಕಷ್ಟದ ವರ್ಷಗಳಲ್ಲಿ ನೀರು ಬಳಕೆಗೆ ಇದು ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಗೊಂದಲವಾಗದಂತೆ ಕ್ರಮ ಕೈಗೊಳ್ಳಿ
ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವು ಇಂಡಿಯಾ ಒಕ್ಕೂಟದ ಮಿತ್ರ ಪಕ್ಷವಾಗಿರುವ ಡಿಎಂಕೆ ಪಕ್ಷಕ್ಕೆ ಈ ಬಗ್ಗೆ ಮನವರಿಕೆ ಮಾಡಿಕೊಡಬೇಕಾಗಿದೆ ಹಾಗೂ ಯಾವುದೇ ಉಭಯ ರಾಜ್ಯಗಳ ನಡುವೆ ಗೊಂದಲಗಳಿಗೆ ಅವಕಾಶ ನೀಡದಂತೆ ಶೀಘ್ರ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆಗಿರುವ ತೊಡಕು ನಿವಾರಣೆಯಾಗಲಿದೆ. ಉಭಯ ರಾಜ್ಯಗಳಿಗೂ ಅನುಕೂಲಕರವಾಗಿರುವ ಮೇಕೆದಾಟು ಯೋಜನೆಯನ್ನು ಆರಂಭಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ 'ಇಂಡಿಯಾ' ಮೈತ್ರಿಕೂಟವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕಿದೆ ಎಂದು ಮುಖ್ಯಮಂತ್ರಿ ಚಂದ್ರು ಕರೆ ನೀಡಿದರು.
ರಾಜ್ಯ ಬಿಜೆಪಿ ಪ್ರತಿಕ್ರಿಯ
ರಾಜ್ಯ ವಿಪಕ್ಷನಾಯಕ ಆರ್.ಅಶೋಕ್ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಡಿಎಂಕೆ ನಡೆ ಖಂಡಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಮೇಕೆದಾಟು ಯೋಜನೆ ಕುರಿತು ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ನಿಲುವನ್ನು ತಿಳಿಸಬೇಕು. ಮೈತ್ರಿ ಮುಖ್ಯವೋ ಅಥವಾ ರಾಜ್ಯದ ಹಿತ ಮುಖ್ಯವೋ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೋವಿಡ್ ಸಮಯದಲ್ಲಿ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದ್ದರು. ತಮಿಳುನಾಡಿನ ಸಿಎಂ ಎಂ.ಕೆ.ಸ್ಟಾಲಿನ್ ತಮ್ಮ ಪ್ರಣಾಳಿಕೆಯಲ್ಲಿ ಮೇಕೆದಾಟು ಯೋಜನೆ ಜಾರಿಯಾಗಲು ಬಿಡಲ್ಲ ಎಂದು ಘೋಷಿಸಿದ್ದಾರೆ. ಅಂದು ಡಿ.ಕೆ.ಶಿವಕುಮಾರ್ ಮೇಕೆದಾಟುವಿನಲ್ಲಿ ಸ್ನಾನ ಮಾಡಿದ್ದರು. ಆದರೀಗ ಸ್ನಾನಕ್ಕಲ್ಲ, ಮುಖ ತೊಳೆಯಲು ಕೂಡ ನೀರಿಲ್ಲ ಎಂದು ಬೆಂಗಳೂರು ಸ್ಥಿತಿಗೆ ಸರ್ಕಾರ ಕಾರಣ ಎಂದು ದೂರಿದರು.












Click it and Unblock the Notifications