Hosur Airport: ಬೆಂಗಳೂರಿಗೆ ಹತ್ತಿರದಲ್ಲೇ ಹೊಸ ಏರ್‌ಪೋರ್ಟ್‌ಗೆ ಜಾಗ ಫಿಕ್ಸ್, ತಮಿಳುನಾಡಿನ ಪ್ಲ್ಯಾನ್ ಏನು?
ತಮಿಳುನಾಡು ಸರ್ಕಾರವು ಬೆಂಗಳೂರಿನ ಹತ್ತಿರದಲ್ಲೇ ಹೊಸ ವಿಮಾನ ನಿಲ್ದಾಣ ನಿರ್ಮಿಸಬೇಕು ಎಂದು ಪಣ ತೊಟ್ಟಿರುವುದು ಗೊತ್ತೇ ಇದೆ. ಹೊಸೂರು ಭಾಗದಲ್ಲಿ ಈ ಹೊಸ ಏರ್‌ಪೋರ್ಟ್ ತಲೆ ಎತ್ತಲಿದೆ ಎಂದು ಘೋಷಣೆಯೂ ಮಾಡಿದೆ. ಆದರೆ ಜಾಗ ಫೈನಲ್ ಆಗಿರಲಿಲ್ಲ. ಇದೀಗ ವಿಮಾನ ನಿಲ್ದಾಣಕ್ಕೆ ಕೊನೆಗೂ ಜಾಗ ಫಿಕ್ಸ್ ಆಗಿದೆ. ಕೃಷ್ಣಗಿರಿ ಜಿಲ್ಲೆಯ ವಾಯುಪ್ರದೇಶವನ್ನು ನಿರ್ಣಯಿಸಲು ಅಡಚಣೆ ಮಿತಿ ಮೇಲ್ಮೈ (ಒಎಲ್‌ಎಸ್) ಸಮೀಕ್ಷೆಯ ವಿವರವಾದ ಅಧ್ಯಯನದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಯೋಜನೆಯನ್ನು ಘೋಷಿಸಿದ ಒಂದು ವರ್ಷದ ನಂತರ, ತಮಿಳುನಾಡು ಸರ್ಕಾರವು ಹೊಸೂರಿಗೆ ವಿಶೇಷ ವಿಮಾನ ನಿಲ್ದಾಣಕ್ಕಾಗಿ ಕೃಷ್ಣಗಿರಿಯ ಬೆರಿಗೈ-ಬಾಗಲೂರು ಬಳಿ ಒಂದು ಸ್ಥಳ ಅಂತಿಮಗೊಳಿಸಿದೆ ಎಂದು ವರದಿಯಾಗಿದೆ.
ಹೊಸೂರು ವಿಮಾನ ನಿಲ್ದಾಣವು ಬೆರಿಗೈ-ಬಾಗಲೂರು ಬಳಿ ನಿರ್ಮಾಣವಾಗಲಿದೆ ಎಂದು ಮೂಲಗಳು ತಿಳಿಸಿವೆ. ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ನಿಖರವಾದ ಭೂಪ್ರದೇಶವನ್ನು ಗುರುತಿಸುವ ಪ್ರಕ್ರಿಯೆ ಮುಂದುವರಿದಿದ್ದು, ಬಹುತೇಕ ಇದೇ ಜಾಗದಲ್ಲಿ ನಿರ್ಮಾಣವಾಗಲಿದೆ. ಬೆರಿಗೈ ಪ್ರದೇಶ ಹೊಸೂರಿನಿಂದ 25 ಕಿ.ಮೀ ದೂರದಲ್ಲಿದೆ. ಬಾಗಲೂರು ಸುಮಾರು 12 ಕಿ.ಮೀ ದೂರದಲ್ಲಿದೆ. ಈ ಆಯ್ಕೆಯಾದ ಸ್ಥಳವು ಅತ್ತಿಬೆಲೆಯಿಂದ 19 ಕಿ.ಮೀ ದೂರದಲ್ಲಿದೆ. ಸುಮಾರು 500 ದೊಡ್ಡ ಕೈಗಾರಿಕೆಗಳು ಹಾಗೂ 3,000ಕ್ಕೂ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ನೆಲೆಯಾಗಿರುವ ಹೊಸೂರು ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಿಸುತ್ತೇವೆ ಎಂದು ತಮಿಳುನಾಡು ಸರ್ಕಾರ ಘೋಷಿಸಿತ್ತು.

ತನೇಜಾ ಏರೋಸ್ಪೇಸ್ ಮತ್ತು ಏವಿಯೇಷನ್ ಲಿಮಿಟೆಡ್ (ಟಿಎಎಎಲ್) ನಿರ್ವಹಿಸುವ ಖಾಸಗಿ ವಿಮಾನ ನಿಲ್ದಾಣ ಇರುವ ಬೆಳಗೊಂಡಪಳ್ಳಿಗಿಂತ ಓಎಲ್ಎಸ್ ಸಮೀಕ್ಷೆಯು ಬೆರಿಗೈ-ಬಾಗಲೂರು ಪ್ರದೇಶವನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಬೆರಿಗೈ-ಬಾಗಲೂರು ಮತ್ತು ಬೆಳಗೊಂಡಪಲ್ಲಿ ನಡುವಿನ ಸಣ್ಣ ವ್ಯತ್ಯಾಸಗಳು ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಪ್ರಸ್ತುತ ಮೂರು ಸ್ಥಳಗಳನ್ನು ಆಯ್ಕೆ ಮಾಡಲಾಗಿದ್ದು, ಬೆರಿಗೈ-ಬಾಗಲೂರು ಪ್ರದೇಶವೇ ಫೈನಲ್ ಆಗಲಿದೆ.
ಬೆಂಗಳೂರು ರಿಂಗ್ ರೋಡ್‌ಗೂ ಹತ್ತಿರ
ಈಗ ಆಯ್ಕೆ ಮಾಡಿರುವ ಸ್ಥಳವು ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಗೂ (ಎಸ್‌ಟಿಆರ್‌ಆರ್) ಹತ್ತಿರದಲ್ಲಿದೆ. ಇದು ಪ್ರಸ್ತುತ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ (ಎನ್‌ಎಚ್‌ಎಐ) ನಿರ್ಮಾಣದ ಹಂತದಲ್ಲಿದೆ. ಈ ರಸ್ತೆ ಹೊಸೂರನ್ನು ಬೆಂಗಳೂರು ಮತ್ತು ಇತರ ನಗರಗಳಿಗೆ ಸಂಪರ್ಕ ಕಲ್ಪಿಸಲಿದೆ. ಇನ್ನು ವಿಮಾನ ನಿಲ್ದಾಣ ಯೋಜನೆಯನ್ನು ಮುಂದುವರಿಯಲು ತಮಿಳುನಾಡು ಸರ್ಕಾರವು ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್‌ನಿಂದ (ಬಿಐಎಎಲ್) ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯಬೇಕಾಗಿದೆ. 2033ರವರೆಗೆ ಕೆಂಪೇಗೌಡ ಏರ್‌ಪೋರ್ಟ್‌ಗೆ 150 ಕಿ.ಮೀ ಒಳಗೆ ಬೇರೆ ವಿಮಾನ ನಿಲ್ದಾಣ ಕಟ್ಟುವಂತಿಲ್ಲ ಎಂಬ ಒಪ್ಪಂದ ವಿಮಾನ ನಿಲ್ದಾಣ ನಿರ್ವಾಹಕರು ಮತ್ತು ಕೇಂದ್ರ ಸರ್ಕಾರದ ನಡುವೆ ನಡೆದಿದೆ.

ಆದರೂ ತಮಿಳುನಾಡು ಸರ್ಕಾರ ಈ ವಿಮಾನ ನಿಲ್ದಾಣ ನಿರ್ಮಾಣದ ಕೆಲಸಗಳು ಭರದಿಂದ ಸಾಗಿದೆ. ಹೊಸೂರಿನಲ್ಲಿ ಬರಲಿರುವ ಈ ಹೊಸ ವಿಮಾನ ನಿಲ್ದಾಣದಿಂದ ದಕ್ಷಿಣ ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಭಾರಿ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ. ಇತ್ತ ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ನಿರ್ಮಿಸಬೇಕು ಎಂದು ಕರ್ನಾಟಕ ಸರ್ಕಾರ ಉದ್ದೇಶಿಸಿದ್ದು, ಇದರ ನಡುವೆ ತಮಿಳುನಾಡು ಮಹತ್ವದ ಹೆಜ್ಜೆ ಇಟ್ಟಿದೆ.












Click it and Unblock the Notifications