ಅಶೋಕ್ ಖೇಣಿ ವಿರುದ್ಧ ಗುಡುಗಿದ ಗೌಡರು
ಬೆಂಗಳೂರು, ಡಿ. 7 : ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ಜೊತೆಗಿನ ವಿವಾದವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತೊಮ್ಮೆ ಕೆದಕಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂ ಸ್ವಾಧೀನ ಕಾಯ್ದೆಗೆ ವಿರುದ್ಧವಾಗಿ ನೈಸ್ ಸಂಸ್ಥೆ ರೈತರಿಂದ ಭೂಮಿ ವಶಪಡಿಸಿಕೊಂಡಿದೆ, ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಎಚ್.ಡಿ.ದೇವೇಗೌಡ, ಭೂ ಸ್ವಾಧೀನ ಕಾಯ್ದೆಗೆ ವಿರುದ್ಧವಾಗಿ ನೈಸ್ ಸಂಸ್ಥೆಯು ರೈತರಿಂದ ಭೂಮಿ ವಶಪಡಿಸಿಕೊಂಡು, ಟೌನ್ ಶಿಪ್ ನಿರ್ಮಾಣ ಮಾಡಲು ಹೊರಟಿದೆ. ಭೂಮಿಯನ್ನು ವಶಪಡಿಸಿಕೊಂಡು ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಹೊಸದಾಗಿ ಭೂ ಸ್ವಾಧೀನ ಕಾಯ್ದೆಯನ್ನು ಜಾರಿಗೆ ತಂದಿದೆ. ಅದರ ಅನ್ವಯ ಯಾವುದೇ ಸಂಸ್ಥೆ ರೇವಣಿ ಇಡದೆ ಭೂಮಿಯನ್ನು ವಶಪಡಿಸಿಕೊಳ್ಳುವಂತಿಲ್ಲ. ಹೀಗೆ ವಶಪಡಿಸಿಕೊಂಡರೆ ಅದನ್ನು ಸರ್ಕಾರ ಮರಳಿ ಪಡೆಯುವ ಅಧಿಕಾರವಿದೆ. ಅಶೋಕ್ ಖೇಣಿ ಒಂದು ರೂ.ಗಳನ್ನು ರೇವಣಿ ಇಡದೆ ರೈತರ ಭೂಮಿ ವಶಪಡಿಸಿಕೊಂಡು ಟೌನ್ ಶಿಪ್ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರೈತರ ಹಿತ ಕಾಪಾಡುವುದಾಗಿ ಹೇಳುತ್ತಿರುವ ಸಿಎಂ ಸಿದ್ದರಾಮಯ್ಯ, ಕಾನೂನಿಗೆ ವಿರುದ್ಧವಾಗಿ ರೈತರ ಭೂಮಿ ವಶಪಡಿಸಿಕೊಂಡ ನೈಸ್ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ರೈತರಿಂದ ವಶಪಡಿಸಿಕೊಂಡ ಭೂಮಿಯನ್ನು ವಾಪಸ್ ಪಡೆಯಬೇಕು ಎಂದು ದೇವೇಗೌಡ ಹೇಳಿದರು.
ರಾಹುಲ್ ಗಾಂಧಿ ಕ್ರಮ ಕೈಗೊಂಡಿದ್ದಾರೆ : ದೆಹಲಿ ಜಮುನಾ ಎಕ್ಸಪ್ರೆಸ್ ರೈಲು ಯೋಜನೆಗಾಗಿ ರೈತರಿಂದ ಭೂಮಿ ವಶಪಡಿಸಿಕೊಳ್ಳಲಾಗಿತ್ತು. ಆದರೆ, ಅದಕ್ಕೆ ಠೇವಣಿ ಇಟ್ಟಿರಲಿಲ್ಲ. ಆದ್ದರಿಂದ ಅವರು ಭೂ ಸ್ವಾಧೀನ ಕಾಯ್ದೆ ಜಾರಿಗೆ ತಂದರು. ಅದರ ಪ್ರಕಾರ ಠೇವಣಿ ಇರದಿದ್ದರೆ, ಭೂಮಿಯನ್ನು ವಶಪಡಿಸಿಕೊಳ್ಳಬಹುದಾಗಿದೆ. ಅಶೋಕ್ ಖೇಣಿ ಠೇವಣಿ ಇಡದೆ 1996 ಎಕರೆ ಭೂಮಿಯನ್ನು ಟೌನ್ ಶಿಪ್ ನಿರ್ಮಾಣ ಮಾಡಲು ವಶಪಡಿಸಿಕೊಂಡಿದ್ದಾರೆ ಎಂದು ಗೌಡರು ಹೇಳಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂ ಸ್ವಾಧೀನ ಕಾಯ್ದೆಯನ್ನು ಮುಂದಿಟ್ಟುಕೊಂಡು ಎಚ್.ಡಿ.ದೇವೇಗೌಡರು ತಮ್ಮ ರಾಜಕೀಯ ಕಡುವೈರಿ ಅಶೋಕ್ ಖೇಣಿ ವಿರುದ್ಧ ಹೋರಾಟ ಆರಂಭಿಸುವ ಸೂಚನೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ನೈಸ್ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುತ್ತಾರೆಯೇ ಕಾದು ನೋಡಬೇಕು.












Click it and Unblock the Notifications