SWR: KSR ಬೆಂಗಳೂರು ನಿಲ್ದಾಣದಲ್ಲಿ 153 ದಿನ ರೈಲುಗಳ ನಿಲುಗಡೆ ರದ್ದು! ಕಾರಣ, ಬದಲಾವಣೆ ವಿವರ
ಬೆಂಗಳೂರು, ಜುಲೈ 11: ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದ (KSR Bengaluru) ಯಾರ್ಡ್‌ನಲ್ಲಿ ಮೂಲಸೌಕರ್ಯ ಕಾಮಗಾರಿ ನಡೆಯುತ್ತಿದೆ. ಹೀಗಾಗಿ 2025 ರ ಆಗಸ್ಟ್ 15 ರಿಂದ 2026 ರ ಜನವರಿ 15 ರವರೆಗೆ 153 ದಿನಗಳ ಕಾಲ ರೈಲು ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ (SWR) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಯಾಣಿಕರು ಗಮನಿಸಿ ಸಂಚಾರ ಮಾಡಬೇಕಿದೆ. ಯಾವೆಲ್ಲ ರೈಲುಗಳು ನಿಲುಗಡೆ, ಮಾರ್ಗ ಬದಲಾಯಿಸಲಾಗಿದೆ ಎಂಬ ವಿವರ ಇಲ್ಲಿದೆ.
ಈ 153 ದಿನಗಳ ಅವಧಿಯಲ್ಲಿ, ಕೆಎಸ್‌ಆರ್ ಬೆಂಗಳೂರಿಗೆ ಬದಲಾಗಿ, ಕೆಳಗೆ ನಮೂದಿಸಲಾದ ರೈಲುಗಳು ಎಸ್‌ಎಂವಿಟಿ ಬೆಂಗಳೂರು ಮತ್ತು ಯಶವಂತಪುರ ನಿಲ್ದಾಣಗಳಿಂದ ತಮ್ಮ ಪ್ರಯಾಣವನ್ನು ಕೊನೆಗೊಳಿಸಲಿವೆ. ಮತ್ತ ಅಲ್ಲಿಂದಲೇ ಸಂಚಾರ ಪ್ರಾರಂಭಿಸಲಿವೆ. ಈ ರೈಲುಗಳು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲಿವೆ.

* ಆಗಸ್ಟ್ 15 ರಿಂದ ಜನವರಿ 15, 2026 ರವರೆಗೆ ಎರ್ನಾಕುಲಂ ನಿಂದ ಹೊರಡುವ 'ಎರ್ನಾಕುಲಂ-ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 12678) ಕೆಎಸ್‌ಆರ್ ಬೆಂಗಳೂರು ನಿಲ್ದಾಣಕ್ಕೆ ಬದಲಾಗಿ ಎಸ್‌ಎಂವಿಟಿ ಬೆಂಗಳೂರಿನಲ್ಲಿ (ರಾತ್ರಿ 9:00) ತನ್ನ ಪ್ರಯಾಣ ಕೊನೆಗೊಳಿಸಲಿದೆ. ಈ ರೈಲು ಕಾರ್ಮೆಲರಾಮ್, ಬೈಯಪ್ಪನಹಳ್ಳಿ, ಎಸ್‌ಎಂವಿಟಿ ಬೆಂಗಳೂರು ಮಾರ್ಗವಾಗಿ ಸಂಚರಿಸಲಿದೆ. ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣ, ಕೆಎಸ್‌ಆರ್ ಬೆಂಗಳೂರು ನಿಲ್ದಾಣಗಳಲ್ಲಿನ ನಿಲುಗಡೆ ರದ್ದಾಗಿದೆ.
* ಕೆಎಸ್‌ಆರ್ ಬೆಂಗಳೂರು-ಎರ್ನಾಕುಲಂ ಡೈಲಿ ಎಕ್ಸ್‌ಪ್ರೆಸ್ ರೈಲು (12677) ಕೆಎಸ್‌ಆರ್ ಬೆಂಗಳೂರು ನಿಲ್ದಾಣ ಬದಲಾಗಿ ಎಸ್‌ಎಂವಿಟಿ ಬೆಂಗಳೂರಿನಿಂದ (ಬೆಳಗ್ಗೆ 6:10) ಪ್ರಯಾಣ ಪ್ರಾರಂಭಿಸಲಿದೆ. ಈ ರೈಲು ಎಸ್‌ಎಂವಿಟಿ ಬೆಂಗಳೂರು, ಬೈಯಪ್ಪನಹಳ್ಳಿ ಮತ್ತು ಕಾರ್ಮೆಲರಾಮ್ ಮಾರ್ಗವಾಗಿ ಸಂಚರಿಸಲಿದೆ. ಕೆಎಸ್‌ಆರ್ ಬೆಂಗಳೂರು ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳಲ್ಲಿ ನಿಲ್ಲುವುದಿಲ್ಲ.

* ನಾಂದೇಡ್ ನಿಲ್ದಾಣದಿಂದ ಹೊರಡುವ 'ನಾಂದೇಡ್-ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ರೈಲು' (16594) ಕೆಎಸ್‌ಆರ್ ಬೆಂಗಳೂರಿಗೆ ಬದಲಾಗಿ ಯಶವಂತಪುರದಲ್ಲಿ (ಬೆಳಗ್ಗೆ 4:15) ತನ್ನ ಪ್ರಯಾಣ ಕೊನೆಗೊಳಿಸುತ್ತದೆ. ಈ ರೈಲು ಯಲಹಂಕ, ಲೊಟ್ಟೆಗೊಲ್ಲಹಳ್ಳಿ, ಯಶವಂತಪುರ ಮಾರ್ಗವಾಗಿ ಸಂಚರಿಸಲಿದೆ. ಬೆಂಗಳೂರು ಕಂಟೋನ್ಮೆಂಟ್ ಮತ್ತು ಕೆಎಸ್‌ಆರ್ ಬೆಂಗಳೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
* ಆಗಸ್ಟ್ 16 ರಿಂದ ಜನವರಿ 16, 2026 ರವರೆಗೆ ಹೊರಡುವ ರೈಲು (16593) ಕೆಎಸ್‌ಆರ್ ಬೆಂಗಳೂರು-ನಾಂದೇಡ್ ಡೈಲಿ ಎಕ್ಸ್‌ಪ್ರೆಸ್ ಕೆಎಸ್‌ಆರ್ ಬೆಂಗಳೂರಿಗೆ ಬದಲಾಗಿ ಯಶವಂತಪುರದಿಂದ (ರಾತ್ರಿ 11:15) ಪ್ರಯಾಣ ಆರಂಭಿಸುತ್ತದೆ. ಯಶವಂತಪುರ, ಲೊಟ್ಟೆಗೊಲ್ಲಹಳ್ಳಿ ಮತ್ತು ಯಲಹಂಕ ಮಾರ್ಗವಾಗಿ ಸಂಚರಿಸಲಿದೆ. ಕೆಎಸ್‌ಆರ್ ಬೆಂಗಳೂರು ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳಲ್ಲಿ ನಿಲುಗಡೆ ನೀಡುವುದಿಲ್ಲ.
* ಕಣ್ಣೂರಿನಿಂದ ಹೊರಡುವ ಕಣ್ಣೂರು-ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ರೈಲು (16512) ಕೆಎಸ್‌ಆರ್ ಬೆಂಗಳೂರಿಗೆ ಬದಲಾಗಿ ಎಸ್‌ಎಂವಿಟಿ ಬೆಂಗಳೂರಿನಲ್ಲಿ (ಬೆಳಗ್ಗೆ 7:45) ಸಂಚಾರ ಅಂತ್ಯಗೊಳಿಸುತ್ತದೆ. ಈ ರೈಲು ಕುಣಿಗಲ್, ಚಿಕ್ಕಬಾಣಾವರ, ಯಶವಂತಪುರ, ಹೆಬ್ಬಾಳ, ಬಾಣಸವಾಡಿ ಮತ್ತು ಎಸ್‌ಎಂವಿಟಿ ಬೆಂಗಳೂರು ಮಾರ್ಗವಾಗಿ ಸಂಚರಿಸಲಿದೆ. ಕೆಎಸ್‌ಆರ್ ಬೆಂಗಳೂರಿನಲ್ಲಿ ನಿಲುಗಡೆ ಇರುವುದಿಲ್ಲ.
* ಆಗಸ್ಟ್ 16 ರಿಂದ ಜನವರಿ 16, 2026 ರವರೆಗೆ ಹೊರಡುವ ಕೆಎಸ್‌ಆರ್ ಬೆಂಗಳೂರು-ಕಣ್ಣೂರು ಡೈಲಿ ಎಕ್ಸ್‌ಪ್ರೆಸ್ ರೈಲು (16511), ಕೆಎಸ್‌ಆರ್ ಬೆಂಗಳೂರಿಗೆ ಬದಲಾಗಿ ಎಸ್‌ಎಂವಿಟಿ ಬೆಂಗಳೂರಿನಿಂದ (ರಾತ್ರಿ 8:00) ತನ್ನ ಪ್ರಯಾಣ ಪ್ರಾರಂಭಿಸಲಿದೆ. ಈ ರೈಲು ಎಸ್‌ಎಂವಿಟಿ ಬೆಂಗಳೂರು, ಬಾಣಸವಾಡಿ, ಹೆಬ್ಬಾಳ, ಯಶವಂತಪುರ, ಚಿಕ್ಕಬಾಣಾವರ ಮತ್ತು ಕುಣಿಗಲ್ ಮಾರ್ಗವಾಗಿ ಸಂಚರಿಸಲಿದೆ. ಕೆಎಸ್‌ಆರ್ ಬೆಂಗಳೂರಿನಲ್ಲಿ ನಿಲುಗಡೆ ಇರುವುದಿಲ್ಲ ಎಂದು SWR ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications