SWR: ಬೆಂಗಳೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ, ವೇಳಾಪಟ್ಟಿ
ಬೆಂಗಳೂರು, ಮಾರ್ಚ್ 25: ಯುಗಾದಿ ಮತ್ತು ರಂಜಾನ್ ಹಬ್ಬಗಳ ಆಚರಣೆಗೆ ದಿನಗಣನೆ ಶುರುವಾಗಿದೆ. ಈ ವಾರಾಂತ್ಯಕ್ಕೆ ಸಾಲು ಸಾಲು ರಜೆಗಳು ಎದುರಾದ ಹಿನ್ನೆಲೆಯಲ್ಲಿ ಬೆಂಗಳೂರಿನಂತಹ ನಗರಗಳಿಂದ ತಮ್ಮ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಈ ವೇಳೆ ಪ್ರಯಾಣಿಕರ ದಟ್ಟಣೆ ಕಂಡು ಬರುತ್ತದೆ. ಈ ಸಂಬಂಧ ನೈಋತ್ಯ ರೈಲ್ವೆ (SWR) ಅಧಿಕಾರಿಗಳು
'ಬೆಂಗಳೂರು ಕೆಎಸ್‌ಆರ್' ರೈಲು ನಿಲ್ದಾಣದಿಂದ 'ಚೆನ್ನೈಗೆ ಸೆಂಟ್ರಲ್'ಗೆ ವಿಶೇಷ ರೈಲು ಕಾರ್ಯಾಚರಣೆ ಮಾಡುತ್ತಿದೆ.

ಹೌದು, ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ರೈಲ್ವೆ ನಿಲ್ದಾಣ ಮತ್ತು ಪುರಚ್ಚಿ ತಲೈವರ್ ಡಾ.ಎಂ.ಜಿ.ಆರ್ ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣಗಳ ಮಧ್ಯೆ (ರೈಲು ಸಂಖ್ಯೆ 07319 & 07320) ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚರಿಸಲಿದೆ. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಲು ಸಮಯ, ದಿನಾಂಕ, ವೇಳಾಪಟ್ಟಿ ತಿಳಿಯಿರಿ.
ವಿಶೇಷ ರೈಲಿನ ವೇಳಾಪಟ್ಟಿ ಹೀಗಿದೆ
* ಬೆಂಗಳೂರು ಕೆಎಸ್‌ಆರ್ - ಡಾ.ಎಂ.ಜಿ.ಆರ್ ಚೆನ್ನೈ ಎಕ್ಸ್‌ಪ್ರೆಸ್ ವಿಶೇಷ ರೈಲು (07319) ಮಾರ್ಚ್ 28ರಂದು ಬೆಳಗ್ಗೆ 8.05 ಗಂಟೆಗೆ ಬೆಂಗಳೂರು ನಿಲ್ದಾಣದಿಂದ ಪ್ರಯಾಣ ಆರಂಭಿಸುತ್ತದೆ. ಅದೇ ದಿನ ಮಧ್ಯಾಹ್ನ ಪುರಚ್ಚಿ ತಲೈವರ್ ಡಾ.ಎಂ.ಜಿ.ಆರ್ ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣ ತಲುಪುತ್ತದೆ.
* ಅದೇ ದಿನ (ಮಾರ್ಚ್ 28) ರಂದು ಡಾ.ಎಂ.ಜಿ.ಆರ್ ಚೆನ್ನೈ-ಬೆಂಗಳೂರು ಕೆಎಸ್‌ಆರ್ ವಿಶೇಷ ಎಕ್ಸ್‌ಪ್ರೆಸ್ ರೈಲು ಮಧ್ಯಾಹ್ನ 3.40ಕ್ಕೆ ಹೊರಟು ಅದೇ ದಿನ ರಾತ್ರಿ 10.50ಕ್ಕೆ ಬೆಂಗಳೂರು ರೈಲು ನಿಲ್ದಾಣಕ್ಕೆ ಆಗಮಿಸಲಿದೆ.

ನಿಲುಗಡೆ ನೀಡುವ ನಿಲ್ದಾಣಗಳ ವಿವರ
* ಒಂದೇ ಟ್ರಿಪ್ ರೈಲಿನ ಎರಡು ಬದಿ ಸಂಚಾರದ ವೇಳೆ ರೈಲು ಯಶವಂತಪುರ, ಕೆ.ಆರ್.ಪುರಂ, ಬಂಗಾರಪೇಟೆ, ಜೋಲಾರ್ ಪಟೈ, ಅಂಬೂರು, ಗುಡಿಯಾಟ್ಟಂ, ಕಟಪಾಡಿ, ಶೋಲಿಂಗೂರ್, ಅರಕ್ಕೋಣಂ, ತಿರುವಳ್ಳೂರು ಮತ್ತು ಪೆರಂಬೂರು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ರೈಲು ಕೋಚ್‌ಗಳ ಮಾಹಿತಿ
* 11 ಸ್ಲೀಪರ್ ಕೋಚ್‌ಗಳು, 1 ಎಸಿ 2-ಟೈರ್ ಬೋಗಿ, 2 ಎಸಿ 3-ಟೈರ್ ಬೋಗಿಗಳು, 4 ಸಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಹಾಗೂ 2 ಎಸ್‌ಎಲ್‌ಡಿಆರ್ ಬೋಗಿಗಳು ಸೇರಿದಂತೆ 20 ಬೋಗಿಗಳು ಇರಲಿವೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ನೀವು ಈ ರೈಲಿನ ಟಿಕೆಟ್ ಅನ್ನು ಎಂದಿನಂತೆ IRCTC ಆಪ್ ಇಲ್ಲವೇ ವೆಬ್‌ಸೈಟ್‌ನಲ್ಲಿ ಬುಕ್ ಮಾಡಬಹುದು. ಹೆಚ್ಚಿನ ಮಹಿತಿಗೆ www.enquiry.indianrail.gov.in ಗೆ ಸಂಪರ್ಕಿಸಬೇಕು. ಇಲ್ಲವೇ 139 ಸಹಾಯವಾಣಿಗೆ ಸಂಪರ್ಕಿಸುವಂತೆ ರೈಲ್ವೆ ಕೋರಿದೆ.
ರೈಲ್ವೆ ಸಮಯ ಬದಲಾವಣೆ
ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಸ್ವಾಮಿ ರೈಲು ಜಂಕ್ಷನ್ ನಿಲ್ದಾಣದಿಂದ ಹೊರಡುವ ನರಸಾಪುರ ಎಕ್ಸ್‌ಪ್ರೆಸ್ ರೈಲಿನ ಸಮಯವನ್ನು ಮರು ಹೊಂದಿಸಲಾಗಿದೆ. 17226 ಸಂಖ್ಯೆಯ ಈ ಎಕ್ಸ್‌ಪ್ರೆಸ್ ರೈಲು ಮೊದಲಿನ ಸಮಯ ಮಧ್ಯಾಹ್ನ 1ಗಂಟೆಗೆ ಬದಲಾಗಿ 1.45 ಗಂಟೆಗೆ ಪ್ರಯಾಣ ಆರಂಭಿಸಿದೆ. ಹಬ್ಬಗಳ ಹಿನ್ನೆಲೆಯಲ್ಲಿ ಕೆಲವು ವಿಶೇಷ ರೈಲುಗಳು ಕಾರ್ಯಾಚರಣೆಯ ಕಾರಣದಿಂದಾಗಿ ಈ ರೈಲಿನ ಸಮಯ ಬದಲಾವಣೆ ಮಾಡಲಾಗಿದೆ. ಪ್ರಯಾಣಿಕರು ಗಮನಿಸಿ ಓಡಾಡುವಂತೆ ರೈಲ್ವೆ ಅಧಿಕಾರಿಗಳು ಮನವಿ ಮಾಡಿದ್ದಾರೆ.












Click it and Unblock the Notifications