ಘನ ತ್ಯಾಜ್ಯ ನಿಯಮ ಉಲ್ಲಂಘನೆ: ಶಿಕ್ಷೆ, ದಂಡ ಹೆಚ್ಚಳಕ್ಕೆ ಸೂಚನೆ
ಬೆಂಗಳೂರು, ಸೆಪ್ಟೆಂಬರ್ 12; ಬೆಂಗಳೂರು ನಗರದಲ್ಲಿ ಘನ ತ್ಯಾಜ್ಯ ವಿಲೇವಾರಿಯಲ್ಲಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಎಚ್ಚರಿಕೆ. ನಿಯಮ ಉಲ್ಲಂಘಿಸುತ್ತಿರುವವರ ವಿರುದ್ಧ ವಿಧಿಸುತ್ತಿರುವ ದಂಡದ ಪ್ರಮಾಣ ತೀರಾ ಕಡಿಮೆಯಿದ್ದು, ಅದರ ಪ್ರಮಾಣ ಹೆಚ್ಚಳ ಮಾಡುವುದರ ಜತೆಗೆ, ಐಪಿಸಿಯ ಸೆಕ್ಷನ್‌ಗಳ ಅಡಿಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಲಿವೆ. ಹೌದು ಈ ಸಂಬಂಧ ಸರ್ಕಾರ, ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ ನೀಡಿದ್ದು, ಪ್ರಕರಣ ದಾಖಲಿಸುವ ಸಂಬಂಧ ಶಿಕ್ಷೆ ವಿಧಿಸುವಂತೆ ಮಾಡಬೇಕಾಗಿದೆ ಎಂದು ಹೇಳಿದೆ.
ನಗರದಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿ ವಿಚಾರಣೆಯನ್ನು ಅಕ್ಟೋಬರ್ 11ಕ್ಕೆ ಮುಂದೂಡಿದೆ.

ಪ್ರಕರಣ ಸಂಬಂಧ ಈವರೆಗೂ ನೀಡಿರುವ ನಿರ್ದೇಶನಗಳನ್ನು ಕೈಗೊಂಡಿರುವುದಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಕುರಿತಂತೆ ಮುಂದಿನ ವಿಚಾರಣೆ ವೇಳೆ ಪ್ರಮಾಣಪತ್ರದ ಸಲ್ಲಿಕೆ ಮಾಡಬೇಕು ಎಂದು ಬಿಬಿಎಂಪಿ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿಗೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಕಳೆದ 2012ರಿಂದ ಹಲವು ನಿರ್ದೇಶನಗಳನ್ನು ನೀಡುತ್ತಿದ್ದರೂ, ನಿಯಮಗಳ ಉಲ್ಲಂಘನೆ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ದಂಡ ಹೆಚ್ಚಳ ಶಿಕ್ಷೆ ಜಾರಿಯಾಗುವಂತೆ ಮಾಡಬೇಕಾಗಿದೆ ಎಂದು ಪೀಠ ತಿಳಿಸಿತು.
ಅಲ್ಲದೆ, ದಂಡವನ್ನು ವಿಧಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂಬುದಾಗಿ ಅರ್ಥವಲ್ಲ. ನಿಯಮಗಳನ್ನು ಉಲ್ಲಂಘನೆ ಮಾಡುವವರನ್ನು ನಿಯಂತ್ರಣ ಮಾಡುವ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ದಂಡವನ್ನು ಹೆಚ್ಚಳ ಮಾಡಬೇಕಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.
11.66 ಕೋಟಿ ದಂಡ ವಸೂಲು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಕ್ರಮಕ್ಕೆ ತೀವ್ರ ಬೇಸರ ವ್ಯಕ್ತ ಪಡಿಸಿದ ನ್ಯಾಯಪೀಠ 2019 ರಿಂದ 2023ರ ವರೆಗಿನ ಅವಧಿಯಲ್ಲಿ ಘನ ತ್ಯಾಜ್ಯ ನಿಯಮ ಉಲ್ಲಂಘನೆ ಮಾಡಿದ ಒಟ್ಟು 3.84 ಮಂದಿಗೆ 11.66 ಕೋಟಿ ರೂ. ಗಳ ದಂಡ ವಿಧಿಸಿದೆ ಎಂದು ಹೇಳಿದೆ.
ಅಲ್ಲದೆ, ನಿಯಮಗಳನ್ನು ಉಲ್ಲಂಘೆನೆ ಮಾಡುತ್ತಿರುವವವರ ವಿರುದ್ಧ ಬಿಬಿಎಂಪಿ ವಿಧಿಸುತ್ತಿರುವ ದಂಡದ ಪ್ರಮಾಣ ತೀರಾ ಕಡಿಮೆ ಇದೆ. ಇದರಿಂದಾಗಿ ಎಚ್ಚರಿಕೆಯ ನಡುವೆಯೂ ಉಲ್ಲಂಘನೆಗಳು ಮುಂದುವರೆದಿವೆ. ನಗರದಲ್ಲಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗಿದ್ದು, ಅದರಿಂದ ಉತ್ಪಾದನೆಯಾಗುತ್ತಿರುವ ವೈದ್ಯಕೀಯ ತ್ಯಾಜ್ಯ ಆತಂಕವನ್ನುಂಟು ಮಾಡುತ್ತಿದೆ. ಹೀಗಾಗಿ ಈ ಸಂಬಂಧ ಮೆಡಿಕಲ್ ತ್ಯಾಜ್ಯವನ್ನು ನಿರ್ವಹಣೆ ಮಾಡುವ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪೀಠ ಬಿಬಿಎಂಪಿಗೆ ಸೂಚನೆ ನೀಡಿದೆ.
ಪ್ರಕರಣದಲ್ಲಿ ಬಿಬಿಎಂಪಿ ಹಾಗೂ ಸರ್ಕಾರದೊಂದಿಗೆ ನಗರದ ವಿವಿಧ ಭಾಗಗಳ ನಿವಾಸಿಗಳ ಸಂಘಗಳು ಪ್ರತಿವಾದಿಯಾಗಿವೆ. ಅಪಾರ್ಟ್‌ಮೆಂಟ್‌ಗಳ ಮಾಲೀಕರು, ಸಹಕಾರಿ ಸಂಘಗಳ ಸದಸ್ಯರು ತ್ಯಾಜ್ಯ ವಿಲೇವಾರಿ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಕ್ರಮಕ್ಕೆ ಮುಂದಾಗಬೇಕಾಗಿದೆ. ಈ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಮಾತ್ರವಲ್ಲದೇ, ಸಾರ್ವಜನಿಕರು ಭಾಗಿಯಾಗುವಂತೆ ನೋಡಿಕೊಳ್ಳಬೇಕು ಎಂದು ಪೀಠ ಅಭಿಪ್ರಾಯ ಪಟ್ಟಿದೆ.












Click it and Unblock the Notifications