Rajinikanth: ಬಿಎಂಟಿಸಿ ಬಸ್ ಡಿಪೋಗೆ ಬೇಟಿ ನೀಡಿದ ರಜನಿಕಾಂತ್: ಅಚ್ಚರಿಗೊಂಡ ಸಿಬ್ಬಂದಿ
ಬೆಂಗಳೂರು, ಆಗಸ್ಟ್ 29: ಕರ್ನಾಟಕದಲ್ಲೇ ಹುಟ್ಟಿ ಬೆಳೆದು ತಮಿಳು ಚಿತ್ರರಂಗದಲ್ಲಿ ಸೂಪರ್‌ಸ್ಟಾರ್ ಆಗಿ ಬೆಳೆದ ಹಿರಿಯ ನಟ ರಜನಿಕಾಂತ್ ಅವರು ಬೆಂಗಳೂರು ಜಯನಗರದ ಬಿಎಂಟಿಸಿ ಡಿಪೋ ಗೆ ದಿಢೀರ್ ಬೇಟಿ ನೀಡಿದ್ದಾರೆ. ಅವರನ್ನು ನೋಡಲು ಸಿಬ್ಬಂದಿ ಮುಗಿಬಿದ್ದು ಸೆಲ್ಪಿ ಕ್ಲಿಕ್ಕಿಸಿದ ಘಟನೆ ಮಂಗಳವಾರ ನಡೆದಿದೆ.
ತಮಿಳು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿರುವ ತಲೈವಾ ರಜನಿಕಾಂತ್ ಅವರ ನಟನೆಯ 'ಜೈಲರ್' (Jailer) ಸಿನಿಮಾ ತೆರೆಕಂಡು ಜನಮನ್ನಣೆ ಪಡೆದುಕೊಂಡಿತ್ತು. ಅದರ ಬೆನ್ನಲ್ಲೆ ಬಿಎಂಟಿಸಿಗೆ ರಜನಿ ಬೇಟಿ ಕೊಡುವ ಮೂಲಕ ತಮ್ಮ ಹಳೆಯ ದಿನಗಳನ್ನು ನೆನೆದಿದ್ದಾರೆ.

ಹೌದು, ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ನಟ ರಜನಿಕಾಂತ್ ಅವರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ (BMTC) ಬಸ್ ನಿರ್ವಾಹಕ (ಕಂಡಕ್ಟರ್) ಆಗಿ ವೃತ್ತಿ ಜೀವನ ಆರಂಭಿಸಿದ್ದರು. ಬಸ್ ಕಂಡಕ್ಟರ್ ಆಗಿದ್ದುಕೊಂಡೇ ಅವರು ನಾಟಕದ ಗೀಳು ಬೆಳೆಸಿಕೊಂಡಿದ್ದರು. ಇದು ಅವರನ್ನು ಸೂಪರ್ ಸ್ಟಾರ್ ಆಗಿ ಮಾಡಿತು.
ರಜನಿ ಬೇಟಿ: ಬಿಎಂಟಿಸಿ ಸಿಬ್ಬಂದಿಗೆ ಅಚ್ಚರಿ
ಜಯನಗರ ಬಿಎಂಟಿಸಿಗೆ ಬೇಟಿ ಕೊಟ್ಟ ರಜನಿಕಾಂತ್ ಕೆಲ ಹೊತ್ತು ಅಧಿಕಾರಿಗಳ ಜೊತೆ ಚರ್ಚಿಸಿದರು. ತಾವು ಕಂಡಕ್ಟರ್ ಆಗಿದ್ದ ದಿನಗಳು, ಇದೇ ಬಿಎಂಟಿಸಿ ಬಸ್‌ನಲ್ಲಿ ಬೆಂಗಳೂರು ಸುತ್ತಿದ ದಿನಗಳು, ಕೆಲಸ, ನಾಟಕ ಅಲ್ಲಿಂದ ಸಿನಿಮಾ ಪ್ರವೇಶ ಅದೆಲ್ಲ ಹಳೆಯ ದಿನಗಳನ್ನು ಮೆಲುಕು ಹಾಕಿದರು. ಸಿಬ್ಬಂದಿ ಜೊತೆಗೆ ಫೋಟೊಗೆ ಫೋಸ್ ಕೊಟ್ಟರು. ರಜನಿಯ ದಿಢೀರ್ ಬೇಟಿ ಅನೇಕರ ಅಚ್ಚರಿಕೆ ಕಾರಣವಾಗಿದ್ದಂತು ಸುಳ್ಳಲ್ಲ.
ಕರ್ನಾಟಕದೊಂದಿಗೆ ರಜನಿ ನಂಟು ನಿರಂತರ
72 ವರ್ಷ ವಯಸ್ಸಾದರು ಇಂದಿಗೂ ನಟ ರಜನಿಕಾಂತ್ ಸಿನಿಮಾಗಳಲ್ಲಿ ಸಕ್ರಿಯವಾಗಿದ್ದಾರೆ. ತಮಿಳು ಸಿನಿಮಾಗಳಲ್ಲಿ ಹೆಚ್ಚು ಗುರುತಿಸಿಕೊಂಡರು ಸಹ ಅವರು ಕನ್ನಡದೊಂದಿಗೆ ನಂಟು ಹೊಂದಿದ್ದಾರೆ. ಆರಂಭದ ದಿನಗಳಲ್ಲಿಯೇ ಅವರು ದಿ.ನಟ ವಿಷ್ಣುವರ್ಧನ್ ಅವರೊಂದಿಗೆ ಸಹೋದರರ ಸವಾಲ್ ಸಿನಿಮಾ ಸೇರಿದಂತೆ ಒಂದೆರಡು ಕನ್ನಡ ಭಾಷೆಯ ಸಿನಿಮಾಗಳಲ್ಲೂ ಅವರು ಬಣ್ಣ ಹಚ್ಚಿಸಿದ್ದರು. ಅದಾದ ಬಳಿಕ ಅನೇಕ ಕನ್ನಡದ ಕಾರ್ಯಕ್ರಮದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಡಾ.ರಾಜ್ ಕುಟುಂಬದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ತಮಿಳು ಸೂಪರ್‌ಸ್ಟಾರ್
ನಟ ರಜನಿಕಾಂತ್ ಅವರು 1950ರ ಡಿಸೆಂಬರ್ 12ರಂದು ಅಂದಿನ ಮೈಸೂರು ರಾಜ್ಯ ಇಂದಿನ ಕರ್ನಾಟಕದ ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದವರು. ಅವರ ಜನ್ಮನಾಮ ಶಿವಾಜಿ ರಾವ್ ಗಾಯಕ್ವಾಡ್ ಆಗಿದ್ದು, ನಂತರ ಅವರು ರಜನಿಕಾಂತ್ ಆದರು. ವಿದ್ಯಾಭ್ಯಾಸದ ನಂತರ ಅವರು ಬಿಎಂಟಿಸಿ ಬಸ್ ಕಂಡಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು.
ಇದೇ ವೇಳೆ ಅವರು ನಿರ್ದೇಶಕ ಬಾಲಚಂದ್ರ ಅವರ ಕಣ್ಣಿಗೆ ಬಿದ್ದರು. 1975ರಲ್ಲಿ ಬಾಲಚಂದ್ರ ಅವರು ರಜನಿಕಾಂತ್ ಅವರನ್ನು ಬೆಳ್ಳಿತೆರೆಗೆ ಪರಿಚಯಿಸಿದರು. ಅವರ ಮೊದಲ ಸಿನಿಮಾ 'ಅಪೂರ್ವ ರಾಗಂಗಳ' ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟರು. ಅಲ್ಲಿಂದ ಹಿಂದೆ ತಿರುಗಿ ನೋಡದ ರಜನಿಕಾಂತ್ ಇತ್ತೀಚೆಗೆ ಬಹುಭಾಷೆಗಳಲ್ಲಿ ತರೆಕಂಡ ಭರ್ಜರಿ ಪ್ರದರ್ಶನ ಕಂಡ 'ಜೈಲರ್' ಸಿನಿಮಾ ವರೆಗೆ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ತಮಿಳು, ಹಿಂದಿ, ಕನ್ನಡ, ತೆಲುಗು, ಬೆಂಗಾಲಿ ಭಾಷೆ ಸಿನಿಮಾಗಳಲ್ಲೂ ಅಭಿನಯಿಸಿ ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ದಿದ್ದಾರೆ.












Click it and Unblock the Notifications