ಬೆಂಗಳೂರು; ಸುಮನಹಳ್ಳಿ ಚಿತಾಗಾರ ತಾತ್ಕಾಲಿಕವಾಗಿ ಬಂದ್
ಬೆಂಗಳೂರು, ಮೇ 04; ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಅಂತ್ಯಕ್ರಿಯೆಗೆ ಹಲವು ತಾಸುಗಳ ಕಾಲ ಕಾಯಬೇಕಿದೆ. ಇಂತಹ ಸಮಯದಲ್ಲಿಯೇ ಸುಮನಹಳ್ಳಿ ವಿದ್ಯುತ್ ಚಿತಾಗಾರ ತಾತ್ಕಾಲಿಕವಾಗಿ ಬಂದ್ ಆಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ಈ ಚಿತಾಗಾರವಿದೆ. ಮೇ 4ರ ಮಂಗಳವಾರದಿಂದ 10ರ ತನಕ ವಿದ್ಯುತ್ ಚಿತಾಗಾರ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ಈ ಚಿತಾಗಾರದಲ್ಲಿ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಗಳ ಶವಗಳನ್ನು ಮಾತ್ರ ಕಾಯ್ದಿರಿಸಲಾಗಿತ್ತು.
ಚಿತಾಗಾರದ ಫರ್ನೇಸ್ ಬದಲಾಯಿಸಬೇಕಿದೆ. ಆದ್ದರಿಂದ ಚಿತಾಗಾರದಲ್ಲಿ ಅಂತ್ಯಕ್ರಿಯೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ರಾಜರಾಜೇಶ್ವರಿನಗರ ವಲಯ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಚಿತಾಗಾರವನ್ನು ಬಿಬಿಎಂಪಿ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಗಳ ಶವ ಸಂಸ್ಕಾರಕ್ಕೆ ಮಾತ್ರ ಮೀಸಲಾಗಿಟ್ಟಿದೆ. ಕೆಲವು ದಿನಗಳಿಂದ ಪ್ರತಿದಿನ ಸುಮಾರು 20 ಶವಗಳ ಅಂತ್ಯ ಸಂಸ್ಕಾರ ಮಾಡಲಾಗುತ್ತಿದ್ದು, ಇದರಿಂದಾಗಿ ಫರ್ನೇಸ್ ಯಂತ್ರವನ್ನು ಬದಲಾವಣೆ ಮಾಡಬೇಕಿದೆ.
ಸುಮನಹಳ್ಳಿ ವಿದ್ಯುತ್ ಚಿತಾಗಾರ ತಾತ್ಕಾಲಿಕವಾಗಿ ಬಂದ್ ಆಗುವುದರಿಂದ ನಗರದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯ ಸಂಸ್ಕಾರ ತಡವಾಗಲಿದೆ. ಉಳಿದ ಚಿತಾಗಾರಗಳ ಬಳಿ ಅಂಬ್ಯುಲೆನ್ಸ್‌ಗಳು ಕಾಯಬೇಕಿದೆ.
ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರವನ್ನು ತುರ್ತು ನಿರ್ವಹಣಾ ಕೆಲಸದ ನಿಮಿತ್ತ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಬಗ್ಗೆ.@mla_sudhakar @Comm_dhfwka @MDNHM_Kar @KarnatakaVarthe @BlrCityPolice @PIBBengaluru @kiranshaw @WFRising @citizenkamran @BangaloreBuzz @TOIBengaluru @IEBengaluru @BangaloreMirror pic.twitter.com/8XtRSpjtAR
— K'taka Health Dept (@DHFWKA) May 3, 2021
ಬೆಂಗಳೂರು ನಗರದಲ್ಲಿ ಏಪ್ರಿಲ್ 15ರ ಬಳಿಕ ಪ್ರತಿದಿನ 100ಕ್ಕೂ ಹೆಚ್ಚು ಕೋವಿಡ್ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಸೋಮವಾರ ಸಹ ನಗರದಲ್ಲಿ 115 ಜನರು ಮೃತಪಟ್ಟಿದ್ದಾರೆ.












Click it and Unblock the Notifications