Suburban Rail Bengaluru; ಮಹತ್ವದ ಹೆಜ್ಜೆ ಇಟ್ಟ ಸರ್ಕಾರ
ಬೆಂಗಳೂರು, ನವೆಂಬರ್ 23: ಬೆಂಗಳೂರು ನಗರದ ಸಂಚಾರ ದಟ್ಟಣೆಗೆ ಪ್ರಮುಖ ಪರಿಹಾರ ಎಂದರೆ ಸಬ್ ಅರ್ಬನ್ ರೈಲು ಯೋಜನೆ. ಕರ್ನಾಟಕ ಸರ್ಕಾರ ಯೋಜನೆ ಚುರುಕುಗೊಳಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. 2026ರಲ್ಲಿ ಮೊದಲ ಕಾರಿಡಾರ್‌ನಲ್ಲಿ ರೈಲು ಸಂಚಾರ ನಡೆಸುವ ನಿರೀಕ್ಷೆ ಇದೆ.
ಕರ್ನಾಟಕ ಸರ್ಕಾರ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಯೋಜನೆ ಅನುಷ್ಠಾನಗೊಳಿಸುತ್ತಿರುವ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) ಲಿಮಿಟೆಡ್ (ಕೆ-ರೈಡ್)ನ ಪ್ರಮುಖ ಹುದ್ದೆಗೆ ನೇಮಕಾತಿಯನ್ನು ಮಾಡಿದೆ.

ಹಲವು ತಿಂಗಳಿನಿಂದ ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕರ ಹುದ್ದೆ ಖಾಲಿ ಇತ್ತು. ಸರ್ಕಾರ ಐಎಎಸ್ ಅಧಿಕಾರಿ ಡಾ. ಮಂಜುಳಾ ಎನ್. (ಕೆಎ-2002) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದ ತನಕ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಿ ಆದೇಶಿಸಿದೆ.
ಡಾ. ಮಂಜುಳಾ ಎನ್. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಕೆ-ರೈಡ್‌ಗೆ ವ್ಯವಸ್ಥಾಪಕ ನಿರ್ದೇಶಕರು ಇಲ್ಲದ ಕಾರಣ ಗೌರವ್ ಗುಪ್ತ ಹೆಚ್ಚುವರಿ ಹೊಣೆ ನೋಡಿಕೊಳ್ಳುತ್ತಿದ್ದರು. ಈಗ ನೇಮಕವಾದ ಬಳಿಕ ಅವರನ್ನು ಆ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ.
ತೇಜಸ್ವಿಸೂರ್ಯ ಮನವಿ ಮಾಡಿದ್ದರು; ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಈ ತಿಂಗಳ ಆರಂಭದಲ್ಲಿ ಉಪ ಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ. ಕೆ. ಶಿವಕುಮಾರ್ ಭೇಟಿಯಾಗಿದ್ದರು.
ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) ಲಿಮಿಟೆಡ್ (ಕೆ-ರೈಡ್)ನ ವ್ಯವಸ್ಥಾಪಕ ನಿರ್ದೇಶಕ ಹುದ್ದೆ ಖಾಲಿ ಇರುವ ಕುರಿತು, ತಕ್ಷಣ ಪ್ರಮುಖ ಹುದ್ದೆಗೆ ನೇಮಕ ಮಾಡಿ, ಯೋಜನೆಗೆ ಚುರುಕು ನೀಡುವಂತೆಯೂ ಮನವಿ ಮಾಡಿದ್ದರು.
ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಣೆಗೆ ಪೂರಕವಾದ ಯೋಜನೆ ಎಂದು ಉಪ ನಗರ ರೈಲು ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಒಟ್ಟು 4 ಕಾರಿಡಾರ್‌ಗಳಲ್ಲಿ ಈ ಯೋಜನೆ ಜಾರಿಯಾಗುತ್ತಿದೆ. ನಾಲ್ಕು ಕಾರಿಡಾರ್ ಟೆಂಡರ್ ಪ್ರಕ್ರಿಯೆ ಈ ವರ್ಷದ ಅಂತ್ಯದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ಬಳಿಕ ಕಾಮಗಾರಿಗೆ ವೇಗ ಸಿಗಲಿದೆ.
ಸಬ್ ಅರ್ಬನ್ ರೈಲು ಯೋಜನೆಯನ್ನು ಕಾರಿಡಾರ್-1 (ಸಂಪಿಗೆ), ಕಾರಿಡಾರ್-2 ಮಲ್ಲಿಗೆ, ಕಾರಿಡಾರ್-3 (ಪಾರಿಜಾತ), ಕಾರಿಡಾರ್-4 (ಕನಕ) ಎಂದು ವಿಭಾಗ ಮಾಡಲಾಗಿದೆ. ಸರ್ಕಾರ ಆದ್ಯತೆಯ ಮೇರೆಗೆ ಸದ್ಯ ಕಾರಿಡಾರ್-2 ಮತ್ತು ಕಾರಿಡಾರ್-4 ಕಾಮಗಾರಿಯನ್ನು ಆರಂಭಿಸಿದೆ.
ಬೆಂಗಳೂರು ನಗರದ ಸಬ್ ಅರ್ಬನ್ ರೈಲು ಯೋಜನೆ ಜಾರಿಗಾಗಿಯೇ ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಸಚಿವಾಲಯ ಜಂಟಿಯಾಗಿ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) ಲಿಮಿಟೆಡ್ (ಕೆ-ರೈಡ್) ಎಂಬ ಸಂಸ್ಥೆ ಸ್ಥಾಪನೆ ಮಾಡಿವೆ.
ಈ ಯೋಜನೆಯಡಿ 57 ನಿಲ್ದಾಣಗಳು ಬರಲಿವೆ. ಯೋಜನೆಯ ಅಂದಾಜು ವೆಚ್ಚ 15,767 ಕೋಟಿ ರೂ. ಗಳು. ಯೋಜನೆ ಸಂಪೂರ್ಣವಾಗಿ ಜಾರಿಗೆ ಬಂದರೆ ನಗರದ ಹಲವು ಪ್ರದೇಶಗಳಿಗೆ ಸಂಪರ್ಕ ಸುಲಭವಾಗಲಿದೆ. ನಮ್ಮ ಮೆಟ್ರೋ, ಸಬ್ ಅರ್ಬನ್ ಮತ್ತು ಬಿಎಂಟಿಸಿಯಿಂದ ಬೆಂಗಳೂರು ನಗರದ ಸಂಚಾರ ದಟ್ಟಣೆಯಲ್ಲಿ ಮಹತ್ವದ ಬದಲಾವಣೆ ಆಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಉದ್ಯಾನ ನಗರಿ ಬೆಂಗಳೂರಿಗೆ ಸಬ್ ಅರ್ಬನ್ ರೈಲು ಬೇಕು ಎಂಬುದು 4 ದಶಕಗಳ ಕನಸು. 1983ರಲ್ಲಿಯೇ ಉಪ ನಗರ ಸಂಪರ್ಕ ಯೋಜನೆ ಪ್ರಸ್ತಾವನೆ ಸಿದ್ಧವಾಗಿತ್ತು. 2019ರಲ್ಲಿ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಇದನ್ನು ಪ್ರಸ್ತಾಪಿಸಿತು. 2021ರಲ್ಲಿ ರೈಲ್ವೆ ಮಂಡಳಿ ಇದಕ್ಕೆ ಒಪ್ಪಿಗೆ ನೀಡಿತು. 2022ರ ಜೂನ್ 21ರಂದು ಪ್ರಧಾನಿ ನರೇಂದ್ರ ಮೋದಿ ಯೋಜನೆಗೆ ಶಂಕುಸ್ಥಾಪನೆ ಮಾಡಿದರು. ಈಗ ಕಾಮಗಾರಿ ನಡೆಯುತ್ತಿದೆ.












Click it and Unblock the Notifications