ಬೆಂಗಳೂರು ಸಬ್ ಅರ್ಬನ್ ರೈಲು; 4ನೇ ಕಾರಿಡಾರ್ ಅಪ್‌ಡೇಟ್
ಬೆಂಗಳೂರು, ಅಕ್ಟೋಬರ್ 11: ಸಬ್ ಅರ್ಬನ್ ರೈಲು ಯೋಜನೆಯು ಬೆಂಗಳೂರು ನಗರದಲ್ಲಿ ಭವಿಷ್ಯದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಯೋಜನೆಯಡಿ ಒಟ್ಟು 4 ಕಾರಿಡಾರ್ ನಿರ್ಮಾಣವಾಗುತ್ತಿದೆ. ಈಗ ಈ ನಾಲ್ಕನೇ ಕಾರಿಡಾರ್ ಕುರಿತು ಅಪ್‌ಡೇಟ್ ಒಂದು ಬಂದಿದೆ.
ಬೆಂಗಳೂರು ನಗರದ ಉಪ ನಗರ ರೈಲು (ಸಬ್-ಅರ್ಬನ್) ಯೋಜನೆಯನ್ನು ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) ಲಿಮಿಟೆಡ್ (ಕೆ-ರೈಡ್) ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. 4ನೇ ಕಾರಿಡಾರ್‌ಗೆ ಕೆ-ರೈಡ್ 2000 ಮರಗಳನ್ನು ಕಡಿಯಬೇಕು ಎಂದು ಪ್ರಸ್ತಾವನೆ ಇಟ್ಟಿದೆ.

ಸಬ್ ಅರ್ಬನ್ ರೈಲಿನ 4ನೇ ಕಾರಿಡಾರ್ 46.24 ಕಿ. ಮೀ. ಸಂಪರ್ಕ ಜಾಲ ಹೊಂದಿದೆ. ಹೀಲಲಿಗೆ-ರಾಜನಕುಂಟೆ ನಡುವೆ ಈ ಮಾರ್ಗ ನಿರ್ಮಾಣವಾಗುತ್ತಿದೆ. ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಈಗಾಗಲೇ ಕೆ-ರೈಡ್‌ಗೆ ಹಸ್ತಾಂತರ ಮಾಡಲಾಗಿದೆ. ಈ ಭೂಮಿಯಲ್ಲಿ ಬರುವ ಸರ್ಕಾರಿ, ಖಾಸಗಿ ಜಮೀನಿನಲ್ಲಿ 2 ಸಾವಿರ ಮರಗಳನ್ನು ಕಡಿಯಬೇಕು ಎಂದು ವರದಿ ತಯಾರಿಸಲಾಗಿದೆ.
ಆಕ್ಷೇಪಣೆ ಆಹ್ವಾನ; ಕೆ-ರೈಡ್ ಪ್ರಸ್ತಾವನೆಯನ್ನು ಆಧರಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2,346 ಮರಗಳನ್ನು ಸಬ್ ಅರ್ಬನ್ ರೈಲು ಯೋಜನೆ ಕಾರಿಡಾರ್-4ಕ್ಕೆ ಕಡಿಯಲು ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಈ ಮರಗಳು ಉತ್ತರ ಬೆಂಗಳೂರು ವ್ಯಾಪ್ತಿಗೆ ಬರುತ್ತವೆ.
ಎರಡು ವರ್ಷಗಳ ಹಿಂದೆ ಕಾರಿಡಾರ್-4 ಮಾರ್ಗ ಸಮೀಕ್ಷೆ ಮಾಡಿದ್ದ ಕೆ-ರೈಡ್ ಯೋಜನೆಯ ಹಳಿಗಳನ್ನು ಹಾಕಲು ಮರಗಳನ್ನು ಕಡಿಯಬೇಕು ಎಂದು ವರದಿ ತಯಾರು ಮಾಡಿತ್ತು. ಇವುಗಳಲ್ಲಿ ಜಲಮಂಡಳಿ ಒಳಚರಂಡಿ ಕಾಮಗಾರಿಗಾಗಿ 24 ಮರಗಳನ್ನು ಈಗಾಗಲೇ ಕತ್ತರಿಸಿದೆ. ಚನ್ನಸಂದ್ರ, ಮುದ್ದೇನಹಳ್ಳಿ ಭಾಗದ ಮರಗಳನ್ನು ಈಗ ಕಡಿಯಬೇಕಿದೆ.
ಕಾರಿಡಾರ್-4 ಯೋಜನೆ ಪೂರ್ಣಗೊಂಡ ಬಳಿಕ ಇದರಲ್ಲಿ ಪ್ರತಿನಿತ್ಯ 2 ಲಕ್ಷ ಜನರು ಸಂಚಾರ ನಡೆಸಲಿದ್ದಾರೆ ಎಂದು ಅಂದಾಜಿಸಲಾಗಿದೆ. ಮುದ್ದೇನಹಳ್ಳಿ, ಜಕ್ಕೂರು, ಹೆಗಡೆ ನಗರ, ಥಣಿಸಂದ್ರ, ಹೆಣ್ಣೂರು, ಹೊರಮಾವು, ಚನ್ನಸಂದ್ರ, ಕೆಆರ್ ಪುರ, ಕಗ್ಗದಾಸಪುರ, ಮಾರತ್‌ಹಳ್ಳಿ, ಬೆಳ್ಳಂದೂರು ರಸ್ತೆ, ಅಂಬೇಡ್ಕರ್ ನಗರ, ಹುಸ್ಕೂರು, ಸಿಂಗೇನ ಅಗ್ರಹಾರ, ಬೊಮ್ಮಸಂದ್ರ ಮೂಲಕ ಯೋಜನೆ ಸಾಗಲಿದೆ.
ಯೋಜನೆಗೆ ಕಡಿಯಲಿರುವ ಮರಗಳಲ್ಲಿ ಹಲವಾರು ತಳಿಗಳಿವೆ. ತೆಂಗು, ಮಾವು, ಹಲಸು, ರಾಯಲ್ ಪಾಮ್, ಸ್ವಿಲರ್, ಓಕ್, ಅಶೋಕ ಟ್ರೀಗಳು ಸೇರಿವೆ. ಮರಗಳನ್ನು ಕಡಿಯುವ ಕುರಿತು ಸಾರ್ವಜನಿಕರು ಸಲ್ಲಿಕೆ ಮಾಡುವ ಆಕ್ಷೇಪಣೆಗಳನ್ನು ತಜ್ಞರ ತಂಡ ಪರಾಮರ್ಶೆ ನಡೆಸಲಿದೆ. ಮರಗಳ ಕಡಿತ, ಸ್ಥಳಾಂತರದ ಕುರಿತು ಬಳಿಕ ತೀರ್ಮಾನ ಕೈಗೊಳ್ಳಲಾಗುತ್ತದೆ.
ಈ ಎಲ್ಲಾ ಪ್ರಕ್ರಿಯೆಗಳಿಗೆ ಸುಮಾರು 2-3 ತಿಂಗಳು ಬೇಕು ಎಂದು ಅಂದಾಜಿಸಲಾಗಿದೆ. ಮರಗಳ ಕಡಿತ, ಸ್ಥಳಾಂತರಗೊಂಡ ಬಳಿಕ ಕಾರಿಡಾರ್-4 ನಿರ್ಮಾಣ ಕಾಮಗಾರಿಯನ್ನು ಕೈ-ರೈಡ್ ಕೈಗೊಳ್ಳಲಿದೆ. ಸಬ್ ಅರ್ಬನ್ ರೈಲು ಯೋಜನೆ 2025ರಲ್ಲಿ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಬೆಂಗಳೂರು ನಗರದ ಸಂಚಾರ ದಟ್ಟಣೆಗೆ ಪರಿಹಾರ ಎಂದು ಅಂದಾಜಿಸಿರುವ ಸಬ್ ಅರ್ಬನ್ ರೈಲು ಯೋಜನೆ 4 ದಶಕಗಳ ಕನಸು. 1983ರಲ್ಲಿಯೇ ಉಪ ನಗರ ಸಂಪರ್ಕ ಯೋಜನೆ ಪ್ರಸ್ತಾವನೆ ಸಿದ್ಧವಾಗಿತ್ತು. 2019ರಲ್ಲಿ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಇದನ್ನು ಪ್ರಸ್ತಾಪಿಸಿತು. 2021ರಲ್ಲಿ ರೈಲ್ವೆ ಮಂಡಳಿ ಇದಕ್ಕೆ ಒಪ್ಪಿಗೆ ನೀಡಿತು. 2022ರ ಜೂನ್ 21ರಂದು ಪ್ರಧಾನಿ ನರೇಂದ್ರ ಮೋದಿ ಯೋಜನೆಗೆ ಶಂಕುಸ್ಥಾಪನೆ ಮಾಡಿದರು.
2022ರ ಡಿಸೆಂಬರ್‌ನಲ್ಲಿ ನೈಋತ್ಯ ರೈಲ್ವೆ ಕೆ-ರೈಡ್‌ಗೆ ಯೋಜನೆಗಾಗಿ 157 ಎಕರೆ ಭೂಮಿ ಹಸ್ತಾಂತರ ಮಾಡಿತು. 2023ರ ಜನವರಿಯಲ್ಲಿ ಸಬ್ ಅರ್ಬನ್ ರೈಲು ಯೋಜನೆಯ 2ನೇ ಕಾರಿಡಾರ್ ನಿರ್ಮಾಣ ಕಾರ್ಯ ಆರಂಭಗೊಂಡಿದೆ.
ಸಬ್ ಅರ್ಬನ್ ರೈಲು ಯೋಜನೆ ಕಾರಿಡಾರ್-1 ಕೆಎಸ್ಆರ್ ಬೆಂಗಳೂರು-ದೇವನಹಳ್ಳಿ, ಕಾರಿಡಾರ್-2 ಬೈಯಪ್ಪನಹಳ್ಳಿ-ಚಿಕ್ಕಬಣಾವರ, ಕಾರಿಡಾರ್-3 ಕೆಂಗೇರಿ-ವೈಟ್‌ಫೀಲ್ಡ್ ಮತ್ತು ಕಾರಿಡಾರ್-4 ಹೀಲಲಿಗೆ-ರಾಜನಕುಂಟೆ ನಡುವೆ ಸಂಪರ್ಕ ಕಲ್ಪಿಸುತ್ತದೆ.












Click it and Unblock the Notifications