10ನೇ ತರಗತಿ ಫಲಿತಾಂಶದ ದಿನ ನಾಪತ್ತೆಯಾದ ವಿದ್ಯಾರ್ಥಿ: ಮಗನಿಗಾಗಿ ಪೋಷಕರ ಹುಡುಕಾಟ!
ನೆಲಮಂಗಲ ಮೇ 9: 10ನೇ ತರಗತಿ ಫಲಿತಾಂಶದ ದಿನ ವಿದ್ಯಾರ್ಥಿಯೊಬ್ಬ ನಾಪತ್ತೆಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾ.ಬೆಟ್ಟಹಳ್ಳಿಯಲ್ಲಿ ನಡೆದಿದೆ. ಪೋಷಕರು ಮಗನಿಗಾಗಿ ಹುಡುಕಾಟ ನಡೆಸಿದ್ದು ಮಗನನ್ನು ಹುಡುಕಿ ಕೊಡಿ ಎಂದು ಪೊಲೀಸರ ಮೊರೆ ಹೋಗಿದ್ದಾರೆ.
ಕಾಣೆಯಾದ ಯುವಕನ ಹೆಸರು ಚಂದನ್ ಗೌಡ. ಮಂಡಿಗೆರೆ ಸರ್ಕಾರಿ ಶಾಲೆ ವಿದ್ಯಾರ್ಥಿಯಾಗಿದ್ದ ಚಂದನ್‌ಗೆ ಈಗಿನ್ನು 16 ವರ್ಷ ವಯಸ್ಸು. ಆದರೆ ಇಂದು ರಿಸಲ್ಟ್‌ಗೆ ಹೆದರಿ ಆತ ಮನೆಯನ್ನು ತೊರೆದಿದ್ದಾನೆ.

ಇಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ಇದಕ್ಕೆ ಹೆದರಿದ ಚಂದನ್ ಮನೆಯಿಂದ ನಾಪತ್ತೆಯಾಗಿದ್ದಾನೆ. ಮಗ ಕಾಣದೆ ಕಂಗಾಲಾದ ಸುರೇಶ್ ಮತ್ತು ರೂಪ ದಂಪತಿ ಮಗನನ್ನು ಹುಡುಕಿ ಕೊಡುವಂತೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಚಂದನ್ ಗೌಡ ಬೈರನಾಯಕನಹಳ್ಳಿ ರೈಲ್ವೆ ನಿಲ್ದಾಣದ ಬಳಿ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದಾನೆ. ಮಗನ ಫೋಟೋ ಹಿಡಿದುಕೊಂಡು ಪೋಷಕರು ಹುಡುಕಾಟ ನಡೆಸಿದ್ದಾರೆ.
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ:
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ಇಂದು (ಮೇ 09, 2024) 2023-24ನೇ ಸಾಲಿನ ಹತ್ತನೇ ತರಗತಿ ಪರೀಕ್ಷೆ-1ರ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಈ ವರ್ಷ 8.69 ಲಕ್ಷ ವಿದ್ಯಾರ್ಥಿಗಳು SSLC ವಾರ್ಷಿಕ ಪರೀಕ್ಷೆ-1ಕ್ಕೆ ನೋಂದಾವಣೆ ಮಾಡಿದ್ದರು. ಮಂಡಲಿಯು ಕರ್ನಾಟಕದಾದ್ಯಂತ ಒಟ್ಟು 2,750 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಿತ್ತು.
2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ದೊರೆತಿದ್ದರೆ, ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನದಲ್ಲಿದೆ. ಉಡುಪಿ ಜಿಲ್ಲೆಯಲ್ಲಿ ಶೇ 94ರ ಫಲಿತಾಂಶ ದಾಖಲಾಗಿದೆ.
2024 ರ ಎಲ್ಲಾ 3 ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಿಗೆ ಎಲ್ಲಾ ವಿಷಯಗಳಲ್ಲಿ ನೀಡುವ ಕೃಪಾಂಕಗಳನ್ನು ಆಕರ್ಷಿಸಲು ಪಡೆಯಬೇಕಾದ ಅರ್ಹ ಅಂಕಗಳನ್ನು ಶೇಕಡ.35 ರಿಂದ ಶೇಕಡ.25ಕ್ಕೆ ಇಳಿಸಲಾಗಿದೆ. ಮತ್ತು ಕೃಪಾಂಕದ ಪ್ರಮಾಣವನ್ನು ಶೇಕಡ.10 ರಿಂದ ಶೇಕಡ.20 ಕ್ಕೆ ಹೆಚ್ಚಿಸಲಾಗಿದೆ. ಈ ಕ್ರಮದ ನಂತರ ಒಟ್ಟಾರೆ ಫಲಿತಾಂಶವು ಶೇಕಡ.73.40 ರಷ್ಟು ದಾಖಲಾಗಿದೆ ಎಂದು ಮಂಡಲಿಯ ನಿರ್ದೇಶಕಿ ಸುದ್ದಿಗೋಷ್ಟಿ ಮೂಲಕ ತಿಳಿಸಿದ್ದಾರೆ.












Click it and Unblock the Notifications