ಬೆಂಗಳೂರಿನಲ್ಲಿ ಟಿಪ್ಪರ್ ಲಾರಿ-ಸ್ಕೂಟಿ ನಡುವೆ ಭೀಕರ ಅಪಘಾತ: ವಿದ್ಯಾರ್ಥಿನಿ ಸಾವು
ಬೆಂಗಳೂರು, ಸೆಪ್ಟೆಂಬರ್ 29: ದಿನದಿಂದ ದಿನಕ್ಕೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಲಿವೆ. ಹಾಗೆಯೇ ಇದೀಗ ಭೀಕರ ಅಪಘಾತ ಸಂಭವಿಸಿದ್ದು, ಟಿಪ್ಪರ್ ಲಾರಿ ಸ್ಕೂಟರ್‌ಗೆ ಡಿಕ್ಕಿ ಹೊಡೆದು ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಬೂದಿಗೆರೆ ಕ್ರಾಸ್ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಟಿಪ್ಪರ್ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಸ್ಕೂಟಿಯಲ್ಲಿ ಕಾಲೇಜಿಗೆ ತೆರಳುತ್ತಿದ್ದ 22 ವರ್ಷದ ಧನುಶ್ರೀ ಆಯಾತಪ್ಪಿ ಕೆಳಗೆ ಬಿದ್ದಿದ್ದು, ಈ ವೇಳೆ ಟಿಪ್ಪರ್ ಆಕೆಯ ಮೇಲೆ ಹರಿದಿದೆ. ಘಟನೆ ಬಳಿಕ ಟಿಪ್ಪರ್ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಇನ್ನು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದರು ಎಂದು ತಿಳಿದುಬಂದಿದೆ.

ಮೂವರು ಯುವಕರು ಸಾವು: ಕೆಎಸ್‌ಆರ್‌ಟಿಸಿ ಬಸ್ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ಮೂವರು ಯುವಕರು ಸಾವನ್ನಪ್ಪಿರುವ ಭೀಕರ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಯಡೇಗೌಡನಹಳ್ಳಿ ಬಳಿ ನಡೆದಿದೆ.
ಕೆಎಸ್‌ಆರ್‌ಟಿಸಿ ಬಸ್-ಸ್ಕೂಟಿ ನಡುವಿನ ಭೀಕರ ಅಪಘಾತ ಶನಿವಾರ ರಾತ್ರಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಕೆಎಸ್‌ಆರ್‌ಟಿಸಿ ಬಸ್-ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಕೂಟಿಯಲ್ಲಿದ್ದ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನೂ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಯುವಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಇರ್ಫಾನ್, ತರುಣ್, ರೇವಂತ್ ಎಂಬುವರು ಅಪಘಾತದಲ್ಲಿ ಮೃತಪಟ್ಟವರು. ಹೊಳೆನರಸೀಪುರ ತಾಲ್ಲೂಕಿನ ಯಡೇಗೌಡನಹಳ್ಳಿ ಬಳಿ ಶನಿವಾರ ರಾತ್ರಿ ನಡೆದ ಭೀಕರ ಅಪಘಾತ ಸಂಭವಿಸಿದೆ. ಮೂವರು ಯುವಕರು ಒಂದೇ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಇನ್ನು ಅಪಘಾತದಲ್ಲಿ ಮೃತಪಟ್ಟ ಮೂವರು ಯುವಕರು ಸುಮಾರು 25 ವರ್ಷದವರಾಗಿದ್ದರು ಎನ್ನಲಾಗುತ್ತಿದೆ. ಈ ಘಟನೆ ಹಾಸನ-ಮೈಸೂರು ರಸ್ತೆಯಲ್ಲಿ ಘಟನೆ ನಡೆದಿದ್ದು, ಹಳ್ಳಿ ಮೈಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಆಗಿದೆ ಎನ್ನಲಾಗುತ್ತಿದೆ.
ಭೀಕರ ಅಪಘಾತ: ಇನ್ನೋವಾ ಕಾರು ಹಾಗೂ ಟಂಟಂ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಅನಗವಾಡಿ ಬ್ರಿಡ್ಜ್ ಬಳಿ ನಡೆದಿದೆ. ಇನ್ನೋವಾ ಕಾರು ಹಾಗೂ ಟಂಟಂ ವಾಹನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ. ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಹೇಶ್ ನಾಯ್ಕರ್ (27) ಮತ್ತು ಮೆಹಬೂಬ್ ಶೇಖ್ (30) ಎಂಬುವವರು ಅಪಘಾತದಲ್ಲಿ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇನ್ನು ವಿಶಾಲ್ ವರತಿಲ್ಲೆ, ವಿಜಯಕುಮಾರ್ ಭೋವಿ, ಗುರುಪ್ರಸಾದ್ ಸುಂಕದ ಎಂಬುವರು ಗಾಯಾಳುಗಳಾಗಿದ್ದು, ಇವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರು ಮತ್ತು ಗಾಯಾಳುಗಳು ನವನಗರದ 45ನೇ ಸೆಕ್ಟರ್ ನಿವಾಸಿಗಳಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಘಟನೆ ಸ್ಥಳಕ್ಕೆ ಆಮಿಸಿದ ಕಲಾದಗಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.












Click it and Unblock the Notifications