Get Updates
Get notified of breaking news, exclusive insights, and must-see stories!

ಬೆಂಗಳೂರಲ್ಲಿ ಅನುಮತಿ ಇಲ್ಲದೆ ಈ ಕೆಲಸ ಮಾಡಿದರೆ ದಂಡ, ಪ್ರಕರಣ ದಾಖಲು: ಜಿಬಿಎ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು: ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ರಸ್ತೆ ಅಗೆತಕ್ಕೆ ಸಂಬಂಧಿಸಿದಂತೆ ಮಹತ್ವದ ಸೂಚನೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಕೊಟ್ಟಿದ್ದಾರೆ.

ಜಿಬಿಎ ವ್ಯಾಪ್ತಿಯಲ್ಲಿ ಯಾವುದೇ ಇಲಾಖೆಯವರು ಅನುಮತಿ ಪಡೆಯದೆ ರಸ್ತೆ ಕತ್ತರಿಸಿದರೆ (ಅಗೆತ ಮಾಡಿದರೆ) ದಂಡ ವಿಧಿಸುವುದರ ಜೊತೆಗೆ ಪ್ರಕರಣ ದಾಖಲಿಸಲಾಗುವುದು ಎಂದು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಬೆಸ್ಕಾಂ, ಕೆಪಿಟಿಸಿಎಲ್, ಜಲಮಂಡಳಿ ಹಾಗೂ ಗೇಲ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಒಂದೇ ರಸ್ತೆಯಲ್ಲಿ ಒಂದು ಇಲಾಖೆಯ ಕೆಲಸ ನಡೆದ ನಂತರ ಮತ್ತೊಂದು ಇಲಾಖೆಯಿಂದ ರಸ್ತೆ ಅಗೆಯುವುದು ಇದೆ. ಅಲ್ಲದೇ ಕೆಲವು ರಸ್ತೆ ಡಾಂಬರೀಕರಣ ಮುಗಿದ ಮೇಲೂ ರಸ್ತೆ ಅಗೆಯುವುದು ಇದೆ. ಇದೀಗ ಈ ರೀತಿಯ ಕೆಲಸಗಳಿಗೆ ಬ್ರೇಕ್ ಹಾಕುವುದಕ್ಕೆ ಪ್ರಾಧಿಕಾರ ಮುಂದಾಗಿದೆ.

Strict Action on Unauthorized Road Excavation in Bengaluru Says GBA Commissioner Maheshwar Rao

ಜಿಬಿಎ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳು ಕೈಗೊಂಡಿರುವ ಕಾಮಗಾರಿಗಳ ಅನುಷ್ಠಾನದ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳ ಕುರಿತು ಶುಕ್ರವಾರ ನಡೆದ ಸಮನ್ವಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ರಸ್ತೆ ಕತ್ತರಿಸುವ ಅಗತ್ಯವಿದ್ದಲ್ಲಿ "ಮಾರ್ಕ್ಸ್" ತಂತ್ರಾಂಶದ ಮೂಲಕ ಅನುಮತಿ ಪಡೆಯುವುದು ಕಡ್ಡಾಯ.

ಈ ಪೈಕಿ ಯಾವುದೇ ಇಲಾಖೆಯಾಗಲಿ ಅನುಮತಿಯಿಲ್ಲದೆ ರಸ್ತೆ ಕತ್ತರಿಸುವಂತಿಲ್ಲ ಎಂದು ಅವರು ಎಚ್ಚರಿಕೆ ಕೊಟ್ಟಿದ್ದಾರೆ. ಆಯಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಕತ್ತರಿಸಲು ಮಾರ್ಕ್ಸ್ ತಂತ್ರಾಂಶದ ಮೂಲಕ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ಕೂಡಲೇ ಅನುಮತಿ ನೀಡಬೇಕು. ಅನುಮತಿ ದೊರಕಿದ ನಂತರ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ, ರಸ್ತೆ ದುರಸ್ತಿ ಕಾರ್ಯವನ್ನು ಸಮರ್ಪಕವಾಗಿ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಯಾವುದೇ ಇಲಾಖೆ ಮುಂದಿನ ದಿನಗಳಲ್ಲಿ ರಸ್ತೆ ಕತ್ತರಿಸುವ ಪೂರ್ವಭಾವಿ ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸಬೇಕು. ಜೊತೆಗೆ, ಗೂಗಲ್ ಮ್ಯಾಪ್‌ನಲ್ಲಿ ಯಾವ ರಸ್ತೆಯಲ್ಲಿ ಎಷ್ಟು ಉದ್ದದ ರಸ್ತೆ ಕತ್ತರಿಸಲಾಗುತ್ತಿದೆ ಎಂಬುದನ್ನು ಗುರುತಿಸಿ, ಆ ಮಾಹಿತಿಯನ್ನು ಎಲ್ಲಾ ನಗರ ಪಾಲಿಕೆಗಳಿಗೆ ಒದಗಿಸುವಂತೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ತಪ್ಪಲಿದ್ದು, ಬೆಂಗಳೂರಿನ ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಮೂಡುವ ನಿರೀಕ್ಷೆ ಇದೆ.

ಲಾಸ್ಟ್ ಮೈಲ್ ಕನೆಕ್ಟಿವಿಟಿಗೆ ವೇಗ ನೀಡಲು ಸೂಚನೆ

ನಗರದಲ್ಲಿ ಲಾಸ್ಟ್ ಮೈಲ್ ಕನೆಕ್ಟಿವಿಟಿ ಕಾರ್ಯಗಳಿಗೆ ಹೆಚ್ಚಿನ ವೇಗ ನೀಡಬೇಕು. ಈಗಾಗಲೇ ಎನ್‌ಕ್ಯಾಪ್ ಅನುದಾನದಡಿ ಹಲವೆಡೆ ಲಾಸ್ಟ್ ಮೈಲ್ ಕನೆಕ್ಟಿವಿಟಿ ಕಾಮಗಾರಿ ಆರಂಭಗೊಂಡಿದೆ. ಬಿಎಂಟಿಸಿಯಿಂದ ಫೀಡರ್ ಬಸ್ ವ್ಯವಸ್ಥೆ, ಪಾರ್ಕಿಂಗ್ ಸೌಲಭ್ಯ, ಸ್ಕೈ ವಾಕ್ ನಿರ್ಮಾಣ, ಬಸ್ ನಿಲ್ದಾಣಗಳ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಾಲಮಿತಿಯೊಳಗೆ ಸಮರ್ಪಕವಾಗಿ ಪೂರ್ಣಗೊಳಿಸಲು ಎಂದು ಹೇಳಲಾಗಿದೆ.

ಜೆಟ್ಟಿಂಗ್ ಯಂತ್ರಗಳ ಖರೀದಿ

ಇನ್ನು ಬೆಂಗಳೂರಿನ ಪಾದಚಾರಿ ಮಾರ್ಗಗಳನ್ನು ಸ್ವಚ್ಛವಾಗಿ ನಿರ್ವಹಿಸುವ ಉದ್ದೇಶದಿಂದ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ನಿಯಮಿತದ ವತಿಯಿಂದ ಪ್ರತಿಯೊಂದು ನಗರ ಪಾಲಿಕೆಗೆ ಒಂದರಂತೆ 5 ವಾಟರ್ ಜೆಟ್ಟಿಂಗ್ ಯಂತ್ರಗಳನ್ನು ಖರೀದಿಸಬೇಕು. ನಂತರ, ಆಯಾ ಪಾಲಿಕೆ ವ್ಯಾಪ್ತಿಯಲ್ಲಿ ಈ ಯಂತ್ರಗಳ ಮೂಲಕ ಪಾದಚಾರಿ ಮಾರ್ಗಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲು ಕ್ರಮವಹಿಸುವಂತೆ ಸೂಚನೆ ನೀಡಿದ್ದಾರೆ. ಈಚೆಗೆ ಬೆಂಗಳೂರಿನಲ್ಲಿ ಸ್ವಚ್ಛತಾ ಯಂತ್ರಗಳನ್ನು ಬಾಡಿಗೆ ಪಡೆಯುವ ವಿಚಾರವು ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಖರೀದಿಗೆ ಸೂಚನೆ ನೀಡಲಾಗಿದೆ.

ಬೆಂಗಳೂರಿನ ಬಹುತೇಕ ಕಡೆ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದ್ದು, ಕೆಲ ರಸ್ತೆಗಳಲ್ಲಿ ಜಲಮಂಡಳಿ ಕಾಮಗಾರಿ ಮತ್ತು ಸಂಚಾರಿ ಪೊಲೀಸ್ ಇಲಾಖೆಯಿಂದ ಅನುಮತಿ ನೀಡಬೇಕಿದೆ. ಈ ಸಂಬಂಧ ಎಲ್ಲೆಲ್ಲಿ ಸಮಸ್ಯೆಗಳಿವೆ ಎಂಬುದನ್ನು ಪಟ್ಟಿ ಮಾಡಿ, ಆ ಸ್ಥಳಗಳಿಗೆ ಜಿಬಿಎ, ಸಂಚಾರಿ ಪೊಲೀಸ್ ಹಾಗೂ ಜಲಮಂಡಳಿ ಅಧಿಕಾರಿಗಳು ಜಂಟಿಯಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ನಂತರ ಸಮಸ್ಯೆಗಳನ್ನು ಬಗೆಹರಿಸಿ ಕಾಮಗಾರಿ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಸಭೆಯಲ್ಲಿ ಚರ್ಚೆ ಮಾಡಲಾದ ಪ್ರಮುಖ ವಿಚಾರಗಳು

1. ನಗರದಲ್ಲಿನ 69 ಮೆಟ್ರೋ ನಿಲ್ದಾಣಗಳ ಸಮೀಪ ಪಾರ್ಕಿಂಗ್ ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಮೆಟ್ರೋ ಮಾರ್ಗದಲ್ಲಿ ಅನಧಿಕೃತ ಪಾರ್ಕಿಂಗ್ ನಡೆಯುತ್ತಿರುವ ಸ್ಥಳಗಳನ್ನು ಗುರುತಿಸಿ ಪಟ್ಟಿ ಸಲ್ಲಿಸಲು ಸೂಚನೆ.

2. ರಸ್ತೆ ಸುರಕ್ಷತಾ ಭಾಗವಾಗಿ ಆಯಾ ನಗರ ಪಾಲಿಕೆಗಳು, ಡಲ್ಟ್ ಹಾಗೂ ಮೆಟ್ರೋ ಇಲಾಖೆಗಳು ಕ್ರಾಸಿಂಗ್, ಪೇಂಟಿಂಗ್ ಸೇರಿದಂತೆ ಅಗತ್ಯ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಬೇಕು.

3. ಬಸ್ ತಂಗುದಾಣಗಳ ಸ್ಥಳಾಂತರ ಕಾರ್ಯವನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ.

4. ಪಾದಚಾರಿ ಮಾರ್ಗಗಳಲ್ಲಿ ಬೆಸ್ಕಾಂಗೆ ಸಂಬಂಧಿಸಿದ ವಿದ್ಯುತ್ ಕಂಬಗಳು, ಟ್ರಾನ್ಸ್‌ಫಾರ್ಮರ್‌ಗಳ ಸ್ಥಳಾಂತರ, ಅಪಾಯಕರ ಸ್ಥಿತಿಯಲ್ಲಿರುವ ತಂತಿಗಳನ್ನು ಗುರುತಿಸಲು ಸೂಚನೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+