ಮಂಗಳವಾರ ಬಿಬಿಎಂಪಿಗೆ ಬೀದಿಬದಿ ವ್ಯಾಪಾರಿಗಳ ಮುತ್ತಿಗೆ
ಬೆಂಗಳೂರು, ಡಿಸೆಂಬರ್ 18; ಬೆಂಗಳೂರು ನಗರದ ಬೀದಿಬದಿ ವ್ಯಾಪಾರಿಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿರುದ್ಧ ಸಿಡಿದು ನಿಂತಿದ್ದಾರೆ. ಅಧಿಕಾರಗಳೇ ಆಡಳಿತ ನೋಡಿಕೊಳ್ಳುತ್ತಿರುವ ಬಿಬಿಎಂಪಿಗೆ ಮಂಗಳವಾರ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.
ಬೀದಿಬದಿ ವ್ಯಾಪಾರಿಗಳನ್ನು ಯಾವುದೇ ನೋಟಿಸ್ ನೀಡದೆ ತೆರವುಗೊಳಿಸುತ್ತಿರುವುದನ್ನು ಖಂಡಿಸಿ ಡಿಸೆಂಬರ್ 19ರ ಮಂಗಳವಾರ ಬಿಬಿಎಂಪಿ ಕೇಂದ್ರ ಕಛೇರಿಗೆ ಮುತ್ತಿಗೆ ಹಾಕಲಿದ್ದಾರೆ. ಅಧಿಕಾರಿಗಳ ಬಳಿ ವ್ಯಾಪಾರಿಗಳು ನ್ಯಾಯ ಕೇಳಲಿದ್ದಾರೆ.

ಜಯನಗರ 4ನೇ ಬ್ಲಾಕ್ ಸೇರಿದಂತೆ ಹಲವು ಬಡಾವಣೆಗಳಲ್ಲಿ ಬಿಬಿಎಂಪಿ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಕೈಗೊಂಡಿದೆ. ಯಾವ ಆದೇಶ ಇಟ್ಟುಕೊಂಡು ತೆರವು ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಿಲ್ಲ. ಆದ್ದರಿಂದ ವ್ಯಾಪಾರಿಗಳು ಪ್ರತಿಭಟನೆ ಮೊರೆ ಹೋಗಿದ್ದಾರೆ.
ಬಿಬಿಎಂಪಿ ಮಾರ್ಷಲ್‌ಗಳು ಮತ್ತು ಅಧಿಕಾರಿಗಳು ಅಂಗಡಿಗಳನ್ನು ತೆರವುಗೊಳಿಸುತ್ತಿರುವುದನ್ನು ಖಂಡಿಸಿ ಬೃಹತ್ ಹೋರಾಟ ನಡೆಸಲಿದ್ದಾರೆ. ನಗರ ಬೇರೆ ಯಾವುದೇ ಪ್ರದೇಶದಲ್ಲಿ ಇಂತಹ ಕಾರ್ಯಾಚರಣೆಯನ್ನು ನಡೆಸಬಾರದು ಎಂದು ಅಧಿಕಾರಿಗಳನ್ನು ವ್ಯಾಪಾರಿಗಳು ಒತ್ತಾಯಿಸಲಿದ್ದಾರೆ.
ಮೊದಲು ಸಮೀಕ್ಷೆ ನಡೆಸಿ; ಬೆಂಗಳೂರು ನಗರದ ಬೀದಿಬದಿ ವ್ಯಾಪಾರಿಗಳ ಸಂಘ ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಅಧಿಕಾರಿಗಳು ಬೀದಿ ವ್ಯಾಪಾರಿಗಳ (ಜೀವನೋ ಪಾಯ ರಕ್ಷಣೆ ಹಾಗು ನಿಯಂತ್ರಣ )ಕಾಯ್ದೆ 2014ರ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ ಎಂದು ಆರೋಪಿಸಲಾಗಿದೆ.
ಕಾನೂನಿನ ಪ್ರಕಾರ ಸಮೀಕ್ಷೆಯನ್ನು ಮಾಡಿ ಎಲ್ಲಾ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿಯನ್ನು ನೀಡಬೇಕು. ಅಲ್ಲಿಯ ತನಕ ಯಾರನ್ನು ಕೂಡ ತೆರವು ಮಾಡುವಂತಿಲ್ಲ. ಲಿಖಿತ ನೋಟಿಸ್ ನೀಡದೆ ಅಂಗಡಿಯನ್ನು ಎತ್ತಂಗಡಿ ಮಾಡುವಂತಿಲ್ಲ. ಆದರೆ ಅಧಿಕಾರಿಗಳು, ಮಾರ್ಷಲ್‌ಗಳು ಯಾವುದೇ ನಿಯಮ, ಕಾನೂನು ಪಾಲನೆ ಮಾಡುತ್ತಿಲ್ಲ ಎಂದು ದೂರಿದ್ದಾರೆ.
ಜಯನಗರ 4ನೇ ಬ್ಲಾಕ್ ಶಾಪಿಂಗ್ ಕಾಂಪ್ಲೆಕ್ಸ್ ಸುತ್ತಲೂ ಸುಮಾರು 30 ರಿಂದ 40 ವರ್ಷಗಳಿಂದ ಬೀದಿಬದಿ ವ್ಯಾಪಾರ ಮಾಡಲಾಗುತ್ತಿದೆ. 400 ರಿಂದ 500 ಬೀದಿಬದಿ ವ್ಯಾಪಾರಿಗಳಿದ್ದಾರೆ. ಅವರಿಗೆ 2018ರಲ್ಲಿ ಬಿಬಿಎಂಪಿಯೇ ಸಮೀಕ್ಷೆ ನಡೆಸಿ ಗುರುತಿನ ಚೀಟಿ ನೀಡಿದೆ. ಆದರೆ ಈಗ ಅವರ ಅಂಗಡಿಗಳನ್ನು ತೆರವು ಮಾಡುತ್ತಿರುವುದು ಎಷ್ಟು ಸರಿ? ಎಂದು ವ್ಯಾಪಾರಿಗಳು ಪ್ರಶ್ನೆ ಮಾಡಿದ್ದಾರೆ.
ಮೊದಲು ಬಿಬಿಎಂಪಿ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆಯನ್ನು ನಡೆಸಲಿ. ಬಳಿಕ ಗುರುತಿನ ಚೀಟಿ ನೀಡಲಿ. ಯಾವ ಆದೇಶದ ಮೇಲೆ ಅಂಗಡಿ ತೆರವು ಮಾಡಲಾಗುತ್ತಿದೆ ಎಂದು ಹೇಳಲಿ ಬಳಿಕ ಯಾವುದೇ ಕ್ರಮ ಕೈಗೊಳ್ಳಲಿ. ಅಲ್ಲಿಯ ತನಕ ತೆರವು ಕಾರ್ಯಾಚರಣೆ ಮಾಡಬಾರದು ಎಂದು ವ್ಯಾಪಾರಿಗಳು ಒತ್ತಾಯಿಸಿದ್ದಾರೆ.
ಫುಟ್‌ಪಾತ್ ಒತ್ತುವರಿ ಮಾಡಲಾಗಿದೆ ಎಂದು ಅಂಗಡಿಗಳನ್ನು ಎತ್ತಂಗಡಿ ಮಾಡುತ್ತಿದ್ದಾರೆ. ಯಾರು ಈ ಆದೇಶ ಮಾಡಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟವಾಗಿ ಹೇಳುತ್ತಿಲ್ಲ. ಅಂಗಡಿ ತೆರವು ಮಾಡಿದ ಜಾಗದಲ್ಲಿ ವ್ಯಾಪಾರ ಮುಂದುವರೆಸಲು ಅವಕಾಶ ನೀಡಬೇಕು. ಪೊಲೀಸರಿಂದ ವ್ಯಾಪಾರಕ್ಕೆ ತೊಂದರೆ ಆಗದಂತೆ ಸೂಕ್ತ ಆದೇಶ ನೀಡಬೇಕು ಎಂದು ವ್ಯಾಪಾರಿಗಳು ಬೇಡಿಕೆ ಮುಂದಿಟ್ಟಿದ್ದಾರೆ.












Click it and Unblock the Notifications