Stray Dog: ಬೆಂಗಳೂರಿನಲ್ಲಿ ಜಿಬಿಎಯಿಂದ ಬೀದಿ ನಾಯಿ ದತ್ತು ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಳ, ನಾಯಿ ದತ್ತು ಪಡೆಯುವುದು ಹೇಗೆ
Stray Dog: ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಬೀದಿ ನಾಯಿಗಳನ್ನು ದತ್ತು ನೀಡುತ್ತಿದ್ದು, ಬೀದಿ ನಾಯಿಗಳನ್ನು ದತ್ತು ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಐದು ಪಾಲಿಕೆಗಳಿಂದ ಬೀದಿ ನಾಯಿಗಳ ದತ್ತು ಯೋಜನೆಯನ್ನು ಪರಿಚಯಿಸಲಾಗಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬೀದಿ ನಾಯಿಗಳ ಮಾನವೀಯ ನಿರ್ವಹಣೆ, ದತ್ತು ಪ್ರೋತ್ಸಾಹ ಮತ್ತು ಪ್ರಾಣಿ ಕಲ್ಯಾಣಕ್ಕೆ ಒತ್ತು ನೀಡುವ ಉದ್ದೇಶದಿಂದ, ಬೆಂಗಳೂರು ಉತ್ತರ ನಗರ ಪಾಲಿಕೆಯ ವತಿಯಿಂದ ಸುಜಯ ಜಗದೀಶ್ ಅವರಿಗೆ ಒಟ್ಟು 20 ಬೀದಿ ನಾಯಿಗಳನ್ನು ದತ್ತು ನೀಡಲಾಗಿದೆ ಎಂದು ಉತ್ತರ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಪ್ರಾಧಿಕಾರದ ವ್ಯಾಪ್ತಿಯ ಬೆಂಗಳೂರು ಉತ್ತರ ನಗರ ಪಾಲಿಕೆಯ ವತಿಯಿಂದ ದತ್ತು ಕಾರ್ಯವನ್ನು ಪ್ರಾಣಿಗಳ ಮೇಲೆ ಕ್ರೂರತೆ ತಡೆ ಕಾಯ್ದೆ, 1960 (PCA Act) ಹಾಗೂ Animal Birth Control (ABC) Rules, 2023 ನಿಯಮಾವಳಿಗಳ ಅನುಸಾರ ಮಾನವೀಯ ವಿಧಾನದಲ್ಲಿ ನಡೆಸಲಾಗಿದೆ. ದತ್ತು ನೀಡಲಾದ ಎಲ್ಲಾ ನಾಯಿಗಳಿಗೆ ಅಗತ್ಯವಾದ ಲಸಿಕೆ (ARV ಹಾಗೂ ಸಂಯುಕ್ತ ಲಸಿಕೆ) ಸಂತಾನಹರಣ ಶಸ್ತ್ರ ಚಿಕಿತ್ಸೆ (ABC), ಆರೋಗ್ಯ ಪರಿಶೀಲನೆ ಮತ್ತು ಗುರುತು ಗುರುತಿಸುವಿಕೆ (Tagging) ಕ್ರಮಗಳನ್ನು ಪಾಲಿಕೆಯ ವತಿಯಿಂದ ಪೂರ್ಣಗೊಳಿಸಲಾಗಿದೆ. ಬೀದಿ ನಾಯಿಗಳ ದತ್ತು ಸ್ವೀಕಾರವು ನಗರದಲ್ಲಿ ನಾಯಿಗಳ ಮಾನವೀಯ ನಿಯಂತ್ರಣ, ಸಾರ್ವಜನಿಕ ಆರೋಗ್ಯ ರಕ್ಷಣೆ ಹಾಗೂ ಪ್ರಾಣಿ ಕಲ್ಯಾಣಕ್ಕೆ ಸಹಕಾರಿ ಎಂದು ಹಾಗೂ ಸಾರ್ವಜನಿಕರು ಬೀದಿ ನಾಯಿಗಳನ್ನು ದತ್ತು ಪಡೆಯುವ ಮೂಲಕ ಸಮಾಜಮುಖಿ ಜವಾಬ್ದಾರಿಯನ್ನು ನಿರ್ವಹಿಸುವಂತೆ ನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಈ ವೇಳೆ ಬೆಂಗಳೂರು ಉತ್ತರ ನಗರ ಪಾಲಿಕೆಯ ಪಶುಪಾಲನ ವಿಭಾಗದ ಮುಖ್ಯ ಪಶುವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು ಎಂದು ಬೆಂಗಳೂರು ಉತ್ತರ ನಗರ ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದತ್ತು ಪಡೆದ ನಾಯಿಗಳ ಸಂರಕ್ಷಣೆ
ಸುಜಯ ಜಗದೀಶ್ ಅವರು, ಪಾಲಿಕೆಯ ದತ್ತು ಕಾರ್ಯಕ್ರಮದಡಿ ನಾಯಿಗಳಿಗೆ ಸಮರ್ಪಕ ಆಹಾರ, ಆಶ್ರಯ, ವೈದ್ಯಕೀಯ ಆರೈಕೆ ಹಾಗೂ ಮಾನವೀಯ ಸಂರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಬೆಂಗಳೂರು ಉತ್ತರ ನಗರ ಪಾಲಿಕೆ ವತಿಯಿಂದ ಮುಂದಿನ ದಿನಗಳಲ್ಲಿಯೂ ಬೀದಿ ನಾಯಿಗಳ ದತ್ತು, ABC & ARV ಕಾರ್ಯಕ್ರಮಗಳು ಹಾಗೂ ಪ್ರಾಣಿ ಕಲ್ಯಾಣ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು. ಆಸಕ್ತರು ಪಾಲಿಕೆಯ ಪಶುಪಾಲನಾ ವಿಭಾಗವನ್ನು ಸಂಪರ್ಕಿಸಿ ಬೀದಿ ನಾಯಿಗಳನ್ನು ದತ್ತು ಪಡೆಯಲು ಅವಕಾಶವಿದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದತ್ತು ಪಡೆಯಲು ಸಂಪರ್ಕಿಸಿ-
ಇ ಮೆಲ್[email protected]
ಮುಖ್ಯ ಪಶುವೈದ್ಯಾಧಿಕಾರಿಗಳ ಕಚೇರಿ, ಪಶುಪಾಲನಾ ವಿಭಾಗ,
ಬೆಂಗಳೂರು ಉತ್ತರ ನಗರ ಪಾಲಿಕೆ
ಅಮೃತಹಳ್ಳಿ ಮುಖ್ಯರಸ್ತೆ,
ಬ್ಯಾಟರಾಯನಪುರ, ಬೆಂಗಳೂರು.












Click it and Unblock the Notifications