12 ಗಂಟೆ ಕಷ್ಟಪಟ್ಟು ಕೆಲಸ ಮಾಡಿದರೂ ಪ್ರಮೋಷನ್ ಸಿಗ್ತಿಲ್ವಾ? ಹಾಗಾದ್ರೆ ಈ ಸ್ಟೋರಿ ಓದಿ
ಪ್ರತಿದಿನ ಆಫೀಸ್‌ನಲ್ಲಿ 10-12 ಗಂಟೆಗಳ ಕಾಲ ಕುಳಿತು ಕಷ್ಟಪಟ್ಟು ಕೆಲಸ ಮಾಡಿದರೆ, ನಮ್ಮ ಬಾಸ್ ಮೆಚ್ಚಿಕೊಳ್ಳುತ್ತಾರೆ ಮತ್ತು ನಮಗೆ ಶೀಘ್ರದಲ್ಲೇ ಪ್ರಮೋಷನ್ ಸಿಗುತ್ತದೆ ಎಂದು ಬಹುತೇಕ ಉದ್ಯೋಗಿಗಳು ಭಾವಿಸುತ್ತಾರೆ. ಆದರೆ, ಕೇವಲ ಕಷ್ಟಪಟ್ಟು ದುಡಿಯುವುದೊಂದೇ ನಿಮ್ಮ ವೃತ್ತಿಜೀವನದ ಬೆಳವಣಿಗೆಗೆ ಮಾನದಂಡವಾಗುವುದಿಲ್ಲ ಎಂಬ ಸತ್ಯವನ್ನ ಮಹಿಳೆಯೊಬ್ಬರು ಎತ್ತಿ ತೋರಿಸಿದ್ದಾರೆ.
ಫ್ರಿಯಾಜ್ ಶ್ರಾಫ್ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ (@teentotwenties) ಹಂಚಿಕೊಂಡಿರುವ ಈ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಕಾರ್ಪೊರೇಟ್ ಜಗತ್ತಿನ ಮಿಜವಾದ ಮುಖವನ್ನ ಅನಾವರಣಗೊಳಿಸಿದೆ. ಉದ್ಯೋಗಿಗಳು ತಾವು ತುಂಬ ಬ್ಯುಸಿಯಾಗಿದ್ದೇವೆ ಎಂದು ತೋರಿಸಿಕೊಳ್ಳುವುದಕ್ಕಿಂತ, ಕಚೇರಿಯಲ್ಲಿ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನ ಗಳಿಸುವುದು ಎಷ್ಟು ಮುಖ್ಯ ಎಂಬುದನ್ನ ಅವರು ಅತ್ಯಂತ ಸರಳವಾಗಿ ವಿವರಿಸಿದ್ದಾರೆ.

ಕೇವಲ ಹಾರ್ಡ್ ವರ್ಕ್ ನಿಮಗೆ ಪ್ರಮೋಷನ್ ತಂದುಕೊಡಲಾರದು
ಆಫೀಸ್‌ನಲ್ಲಿ ನೀವು ಎಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೀರಿ ಎಂಬುದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. "ಕೆಲಸದ ಸ್ಥಳದಲ್ಲಿ ನಿಮ್ಮ ಶ್ರಮ ಮತ್ತು ನೀವು ನೀಡುವ ಮೌಲ್ಯ ಎರಡೂ ಒಂದೇ ಅಲ್ಲ. ನೀವು ಯಾವುದೋ ಒಂದು ಟಾಸ್ಕ್ ಮೇಲೆ 12 ಗಂಟೆಗಳ ಕಾಲ ಸತತವಾಗಿ ಕೆಲಸ ಮಾಡಬಹುದು, ಆದರೂ ಸಂಸ್ಥೆಗೆ ಅಗತ್ಯವಿರುವ ಸರಿಯಾದ ಫಲಿತಾಂಶವನ್ನ ನೀಡಲು ವಿಫಲವಾಗಬಹುದು. ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಂಪೂರ್ಣ ಸುಸ್ತಾಗಿರಬಹುದು, ತೀವ್ರ ಒತ್ತಡದಲ್ಲಿರಬಹುದು ಮತ್ತು ಸಿಕ್ಕಾಪಟ್ಟೆ ಬ್ಯುಸಿಯಾಗಿರಬಹುದು. ಆದರೆ, ಇಷ್ಟೆಲ್ಲಾ ಆದರೂ ನಿಮ್ಮ ಬಾಸ್, 'ಈ ವ್ಯಕ್ತಿಗೆ ಇನ್ನಷ್ಟು ದೊಡ್ಡ ಜವಾಬ್ದಾರಿಯನ್ನ ವಹಿಸಬಹುದೇ? ಇವರನ್ನ ನಂಬಬಹುದೇ?' ಎಂದು ಯೋಚಿಸುತ್ತಿರುತ್ತಾರೆ" ಎಂದು ಶ್ರಾಫ್ ಅವರು ವಿವರಿಸಿದ್ದಾರೆ.
ಕರಿಯರ್ ಗ್ರೋತ್‌ಗೆ ನಂಬಿಕೆ ಬಹಳ ಮುಖ್ಯ
ಯಾವುದೇ ಒಂದು ವೃತ್ತಿಜೀವನವು ಕೇವಲ ಯಾಂತ್ರಿಕವಾದ ಕಠಿಣ ಶ್ರಮದ ಆಧಾರದ ಮೇಲೆ ಕಟ್ಟುವುದಿಲ್ಲ. ಬದಲಿಗೆ, ನೀವು ಏನು ಮಾಡಬಲ್ಲಿರಿ ಎಂಬ ಇತರರ ನಂಬಿಕೆಯ ಮೇಲೆ ನಿರ್ಧಾರವಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ಅಥವಾ ಪ್ರಮೋಷನ್ ಬೇಕಾದರೆ, ನೀವು ಕೆಳಗಿನ ಕೆಲವು ಮೂಲಭೂತ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗುತ್ತದೆ.
1.ನಿಗದಿತ ಸಮಯಕ್ಕೆ ಸರಿಯಾಗಿ (ಡೆಡ್‌ಲೈನ್) ಕೆಲಸವನ್ನು ಮುಗಿಸುತ್ತೀರಾ?
2.ಯಾವುದಾದರೂ ಬದಲಾವಣೆಗಳಾದಾಗ ಅದನ್ನ ಇತರರೊಂದಿಗೆ ಸ್ಪಷ್ಟವಾಗಿ ಸಂವಹನ ಮಾಡುತ್ತೀರಾ?
3.ನೀವು ಕೆಲಸದಲ್ಲಿ ಎಷ್ಟು ವಿಶ್ವಾಸಾರ್ಹರು?
ಮೇಲಿನ ಈ ಅಂಶಗಳೇ ನಿಮ್ಮ ವೃತ್ತಿಬದುಕಿನ ಬೆಳವಣಿಗೆಯನ್ನ ನಿರ್ಧರಿಸುತ್ತದೆ.
ಸಮಸ್ಯೆ ಪರಿಹರಿಸುವ ಕೌಶಲ್ಯ ನಿಮ್ಮಲ್ಲಿದೇಯೇ?
ಕೆಲಸದ ನಡುವೆ ಎದುರಾಗುವ ಸಮಸ್ಯೆಗಳನ್ನ ನೀವು ಹೇಗೆ ನಿಭಾಯಿಸುತ್ತೀರಿ? ಇತರರು ನೀಡುವ ಸಲಹೆ ಅಥವಾ ಫೀಡ್‌ಬ್ಯಾಕ್ ಅನ್ನ ಸಕಾರಾತ್ಮಕವಾಗಿ ಸ್ವೀಕರಿಸುತ್ತೀರಾ? ಯಾರದೇ ಮಾರ್ಗದರ್ಶನ ಅಥವಾ ಸಹಾಯವಿಲ್ಲದೆ ನಿಮ್ಮಷ್ಟಕ್ಕೆ ನೀವೇ ಸ್ವತಂತ್ರವಾಗಿ ಸರಿಯಾದ ನಿರ್ಧಾರಗಳನ್ನ ತೆಗೆದುಕೊಳ್ಳಬಲ್ಲಿರಾ? ಈ ಎಲ್ಲಾ ಗುಣಗಳು ಕಚೇರಿಯಲ್ಲಿ ನಿಮ್ಮನ್ನು ವಿಶೇಷವಾಗಿ ಗುರುತಿಸುವಂತೆ ಮಾಡುತ್ತವೆ.
"ನಿಮ್ಮ ವೃತ್ತಿಜೀವನದ ಆರಂಭಿಕ ಹಂತದಲ್ಲಿ ಕಲಿಯಬೇಕಾದ ಅತ್ಯಂತ ಕಷ್ಟಕರವಾದ ಪಾಠವಿದು. ನೀವು ಎಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೀರಿ ಎಂದು ಸಾಬೀತುಪಡಿಸಲು ಪ್ರಯತ್ನಿಸುವುದನ್ನು ಮೊದಲು ನಿಲ್ಲಿಸಿ. ಬದಲಿಗೆ, ಇತರರು ನಿಮ್ಮನ್ನ ನಂಬಿ ಒಂದು ಕೆಲಸವನ್ನ ಒಪ್ಪಿಸುವಂತಹ ವಿಶ್ವಾಸಾರ್ಹ ವ್ಯಕ್ತಿಯಾಗಿ ರೂಪುಗೊಳ್ಳಿ. ಏಕೆಂದರೆ, ನೀವು ಸುಸ್ತಾಗಿದ್ದೀರಿ ಎಂಬ ಕಾರಣಕ್ಕೆ ಯಾರೂ ನಿಮಗೆ ಬಡ್ತಿ ನೀಡುವುದಿಲ್ಲ. ಬದಲಿಗೆ, ದೊಡ್ಡ ಜವಾಬ್ದಾರಿಗಳನ್ನ ನಿಭಾಯಿಸುವ ತಾಕತ್ತು ನಿಮಗಿದೆ ಎಂದು ಅವರು ನಂಬಿದಾಗ ಮಾತ್ರ ಪ್ರಮೋಷನ್ ಸಿಗುತ್ತದೆ" ಎನ್ನುತ್ತಾರೆ ಶ್ರಾಫ್.
ನೆಟ್ಟಿಗರ ಪ್ರತಿಕ್ರಿಯೆ
" ಆಫೀಸ್ಸಿನಲ್ಲಿ ಕೇವಲ ಬ್ಯುಸಿಯಾಗಿರುವುದಕ್ಕೂ ಮತ್ತು ಮೌಲ್ಯಯುತವಾಗಿರುವುದಕ್ಕೂ ಬಹಳ ವ್ಯತ್ಯಾಸವಿದೆ. ಯಾವಾಗಲೂ ಮೌಲ್ಯವನ್ನ ಹೆಚ್ಚಿಸುವುದನ್ನ ಆಯ್ಕೆಮಾಡಿ" ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನ ಹಂಚಿಕೊಳ್ಳಲಾಗಿದೆ.
ಕೇವಲ ಗಂಟೆಗಟ್ಟಲೆ ಕೆಲಸ ಮಾಡುವುದಕ್ಕಿಂತ, ಡೆಡ್‌ಲೈನ್‌ಗಳನ್ನ ಪೂರೈಸುವುದು, ಪರಿಣಾಮಕಾರಿ ಸಂವಹನ ಮತ್ತು ಸಮಸ್ಯೆಗಳನ್ನ ಸ್ವತಂತ್ರವಾಗಿ ಪರಿಹರಿಸುವ ಕೌಶಲ್ಯಗಳು ಒಬ್ಬ ಉದ್ಯೋಗಿಯ ಭವಿಷ್ಯವನ್ನ ಉಜ್ವಲಗೊಳಿಸುತ್ತವೆ ಎಂಬುದನ್ನು ಈ ವಿಡಿಯೋ ಹೇಳಿದೆ.
ಈ ವಿಚಾರಕ್ಕೆ ನೆಟ್ಟಿಗರು ಕೂಡ ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದಾರೆ. "ಇದು ಜೀರ್ಣಿಸಿಕೊಳ್ಳಲು ಸ್ವಲ್ಪ ಕಷ್ಟವಾದರೂ ಒಪ್ಪಿಕೊಳ್ಳಲೇಬೇಕಾದ ಸತ್ಯ", "ಕೆಲಸದ ಗಂಟೆಗಳಿಗಿಂತ ವಿಶ್ವಾಸಾರ್ಹತೆ ಮುಖ್ಯ", "ಇದು ಅತ್ಯುತ್ತಮ ಕರಿಯರ್ ಅಡ್ವೈಸ್" ಎಂದು ಅನೇಕರು ಕಮೆಂಟ್ ಮಾಡುವ ಮೂಲಕ ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ. ಆಫೀಸ್‌ನಲ್ಲಿ ಸ್ಮಾರ್ಟ್ ಆಗಿ ಮತ್ತು ಜವಾಬ್ದಾರಿಯುತವಾಗಿ ಕೆಲಸ ಮಾಡುವುದು ಇಂದಿನ ಕಾರ್ಪೊರೇಟ್ ಜಗತ್ತಿನ ಅನಿವಾರ್ಯತೆಯಾಗಿದೆ.


Click it and Unblock the Notifications
