ಭದ್ರತಾ ಲೋಪ: ವಿಧಾನಸೌಧಕ್ಕೆ 'ಹೈಟೆಕ್' ಭದ್ರತೆ ಒದಗಿಸಲು ಮುಂದಾದ ಸರ್ಕಾರ
ಬೆಂಗಳೂರು, ಜುಲೈ 11: ಬೆಂಗಳೂರಿನ ಹೃದಯ ಭಾಗದಲ್ಲಿರುವ ಶಕ್ತಿ ಸೌಧವಾದ ವಿಧಾನಸೌಧದಲ್ಲಿ ಒಂದೇ ವಾರದಲ್ಲಿ ಎರಡು ಭಾರಿ ಭದ್ರತಾ ಲೋಪ ಕಂಡು ಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಹೈಟೆಕ್ ಬಿಗಿ ಭದ್ರತೆ ಒದಗಿಸಲು ಸಜ್ಜಾಗಿದೆ. ಮುಂದಿನ ಎರಡು ವಾರದಲ್ಲಿ ಪಾರ್ಲಿಮೆಂಟ್ ರೀತಿಯಲ್ಲಿ ಭದ್ರತೆ ಕೈಗೊಳ್ಳಲು ನಿರ್ಧರಿಸಿದೆ.
ಸದನದ ಒಳಕ್ಕೆ ಅಪರಿಚಿತ ವ್ಯಕ್ತಿಯೊಬ್ಬರು ಬಂದ ಕೂತ ಘಟನೆ ಹೊರ ಬೀಳುತ್ತಿದ್ದಂತೆ ಭದ್ರತಾ ಲೋಪ ಬಗ್ಗೆ ಭಾರಿ ಚರ್ಚೆ ಆಗಿತ್ತು. ಸಿಎಂ ಸಿದ್ದರಾಮಯ್ಯನವರ ಬಜೆಟ್ ಮಂಡನೆ ದಿನವೇ ಈ ಪ್ರಮಾದ ನಡೆದಿತ್ತು. ಇದರ ಬೆನ್ನಲ್ಲೆ ಸೋಮವಾರ ಮಹಿಳೆಯೊಬ್ಬರು ಬ್ಯಾಗ್ ನಲ್ಲಿ ಚಾಕು ಇಟ್ಟುಕೊಂಡು ಬಂದು ವಿಧಾನಸೌಧ ಪ್ರವೇಶಿಸಲು ಯತ್ನಿಸಿದ್ದರು. ಇವೆಲ್ಲವು ಭದ್ರತಾ ಲೋಪ ಭಾರಿ ಚರ್ಚೆಗೆ ಕಾರಣವಾಗಿತ್ತು.

ಭದ್ರತಾ ಲೋಪದಿಂದ ಮುಜುಗರಕ್ಕೀಡಾದ ರಾಜ್ಯ ಸರ್ಕಾರ ಕೊನೆಗೂ ಎಚ್ಚೆತ್ತುಕೊಂಡು ವಿಧಾನಸೌಧ ಜೊತೆಗೆ ವಿಕಾಸಸೌಧಕ್ಕೆ ಭಾರಿ ಭದ್ರತೆ ನೀಡುವುದಕ್ಕೆ ನಿರ್ಧರಿಸಿದೆ. ಪಾರ್ಲಿಮೆಂಟ್ನ ತಂತ್ರಜ್ಞಾನ ಬಳಸಲು ಸರ್ಕಾರ ಮುಂದಾಗಿದೆ. ಇದು ಮೂರು ಹಂತಗಳಲ್ಲಿ ಭದ್ರತೆ ಹೊಂದಿರಲಿದೆ ಎಂದು ಮೂಲಗಳು ತಿಳಿಸಿವೆ.
ಆಧುನಿಕ ತಂತ್ರಜ್ಞಾನ ಆಧಾರಿತ ಬೀಗಿ ಬಂದೋಬಸ್ತ್ ನೀಡಲಾಗುತ್ತಿದೆ. ಯಾರಾದರೂ ಅನಾಮಧೇಯರು ಒಳ ಪ್ರವೇಶಕ್ಕೆ ಸಾಧ್ಯವಾಗದಂತೆ ಮಾಡಲು ತಯಾರಿ ನಡೆಸಲಾಗಿದೆ. ಮುಂದಿನ ಎರಡು ಮೂರು ವಾರದಲ್ಲಿ ವಿಧಾನಸೌಧ ಮತ್ತು ವಿಕಾಸಸೌಧ ಪ್ರವೇಶಕ್ಕೆ ಮೂರು ಸುತ್ತಿನಲ್ಲಿ ಭದ್ರತೆ ಇರಲಿದೆ.

ಲೇಸರ್ ಐಡೆಂಟಿಟಿ ಸೆನ್ಸಿಟಿವ್ ಕಾರ್ಡ್
ಪ್ರವೇಶಿಸುವವರಿಗೆ ಲೇಸರ್ ಐಡೆಂಟಿಟಿ ಸೆನ್ಸಿಟಿವ್ ಕಾರ್ಡ್ ನೀಡಲಾಗುವುದು. ಐಟಿ ಹೊಂದಿದವರು ಒಳಪ್ರವೇಶಿಸುವಾಗ ಕಡ್ಡಾಯ ಮಾಡಲಾಗುತ್ತದೆ. ಹೈ-ಅಂಡ್ ಸಿಸಿಟಿವಿ ಕ್ಯಾಮರಾ, ಕಂಟ್ರೋಲ್ ರೂಂ, ಸ್ಕ್ಯಾನರ್ಗಳಿಂದ ಸಹ ಕಟ್ಟೆಚ್ಚರ ವಹಿಸಲಾಗುವುದು. ವಿಸಿಟರ್ಗಳಿಗೆ ಸ್ಮಾರ್ಟ್ ಪಾಸ್ ಪರಿಶೀಲಿಸಿ ಒಳ ಬಿಡುವ ಕ್ರಮ ಜಾರಿಯಾಗಲಿದೆ. ಎಲ್ಲ ರೀತಿಯ ಭದ್ರತಾ ಒದಗಿಸುವ ಕ್ರಮ 15-20 ದಿನಗಳಲ್ಲಿ ಅನುಷ್ಠಾನಗೊಳ್ಳಿಸಬೇಕೆಂದು ನಗರ ಪೊಲೀಸ್ ಆಯುಕ್ತ ದಯಾನಂದ್ ತಿಳಿಸಿದ್ದಾರೆ.
ಸೋಮವಾರ ವಿಧಾನಸಭಾಧ್ಯಕ್ಷ ಯು.ಟಿ ಖಾದರ್, ನಗರ ಪೊಲೀಸ್ ಆಯುಕ್ತ ದಯಾನಂದ್, ಅಪರಾಧ ವಿಭಾಗದ ಜಂಟಿ ಆಯುಕ್ತ ಶರಣಪ್ಪ ವಿಧಾನಸೌಧದಲ್ಲಿನ ಭದ್ರತೆಯನ್ನು ಖುದ್ದು ಪರಿಶೀಲಿಸಿದರು. ಈ ವೇಳೆ ಕೈಗೊಳ್ಳಬೇಕಾದ ಕೆಲ ಬದಲಾವಣೆ ಬಗ್ಗೆ ಸಭೆ ನಡೆಸಿ ಚರ್ಚಿಸಿದ್ದಾರೆ. ಮೂರು ಹಂತದ ಭದ್ರತೆ ಒದಗಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಆಧುನಿಕ ತಂತ್ರಜ್ಞಾನದಡಿ ಭದ್ರತೆ ಕೈಗೊಳ್ಳಬೇಕಿದೆ ಎಂದು ಸ್ಪೀಕರ್ ಯುಟಿ ಖಾದರ್ಗೆ ಪೊಲೀಸ್ ಇಲಾಖೆಗೆ ಮನವಿ ಮಾಡಿದರು ಎಂದು ಟಿವಿ ನೈನ್ ವರದಿ ಮಾಡಿದೆ.












Click it and Unblock the Notifications