ನಾಡಗೀತೆಯನ್ನು ಯಾವ ಧಾಟಿಯಲ್ಲಿ ಹಾಡಬೇಕು? ಈ ವಿವಾದದ ಬಗ್ಗೆ ಕೋರ್ಟ್ ಹೇಳಿದ್ದೇನು?
ಬೆಂಗಳೂರು, ಫೆಬ್ರವರಿ 03: ನಾಡಗೀತೆಯ ವಿವಾದವನ್ನು ಎರಡೂ ಕಡೆಯವರು ಕುಳಿತು ಸೌರ್ಹಾದಯುತವಾಗಿ ಬಗೆಹರಿಸಿಕೊಳ್ಳಲು ಮುಂದಾಗಬೇಕು ಎಂದು ಹೈಕೋರ್ಟ್ ಸಲಹೆ ನೀಡಿದೆ. ಅಲ್ಲದೆ, ಸದ್ಯ ಸರ್ಕಾರ ಘೋಷಿಸಿರುವ ಧಾಟಿಯಲ್ಲಿ ನಾಡಗೀತೆ ಹಾಡುವುದು ಖಾಸಗಿ ಶಾಲೆಗಳಿಗೆ ಅನ್ವಯವಾಗುತ್ತದೆಯೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.
ನಾಡಗೀತೆಯನ್ನು ಇಂತಹುದೇ ಧಾಟಿಯಲ್ಲಿ ಹಾಡಬೇಕು ಎಂದು ಸರ್ಕಾರದ ಆದೇಶ ಇರುವಾಗ ಮತ್ತೊಂದು ಧಾಟಿಯಲ್ಲಿ ಹಾಡಲು ನಿರ್ದೇಶಿಸಬೇಕು ಎನ್ನುವ ಮನವಿಗಳನ್ನು ಪುರಸ್ಕರಿಸಬಾರದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮನವಿ ಮಾಡಿದೆ.

ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿಯೇ ನಾಡಗೀತೆಯನ್ನು 2 ನಿಮಿಷ 30 ಸೆಕೆಂಡ್‌ಗಳಲ್ಲಿ ಹಾಡಬೇಕು ಎಂಬುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ 2022ರ ಸೆಪ್ಟೆಂಬರ್ 25ರಂದು ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಸುಗಮ ಸಂಗೀತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಮನವಿ ಪುರಸ್ಕರಿಸದಂತೆ ಕೋರಿಕೆ
ರ್ಕಾರಿ ವಕೀಲರು, 'ಕೋರ್ಟ್ ಇಂತಹ ಮನವಿಗಳನ್ನೆಲ್ಲಾ ಮಾನ್ಯ ಮಾಡುತ್ತಾ ಹೋದರೆ ಮುಂದೆ ಮತ್ತೊಬ್ಬರು ಮತ್ತೊಂದು ಧಾಟಿಯಲ್ಲಿ ಹಾಡುವುದಕ್ಕೆ ನಿರ್ದೇಶಿಸಿಬೇಕು ಎಂದು ಕೋರಿ ಕೋರ್ಟ್ ಮೆಟ್ಟಿಲೇರುತ್ತಾರೆ. ಆಗ ಅದು ಅನಪೇಕ್ಷಿತ ಬೆಳವಣಿಗೆಗಳಿಗೆ ನಾಂದಿ ಹಾಡುತ್ತದೆ' ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಇಂತಹುದೇ ಧಾಟಿಯಲ್ಲಿ ಹಾಡಬೇಕು ಎಂಬುದನ್ನು ಸರ್ಕಾರ ಕಣ್ಣುಮುಚ್ಚಿ ಕಡ್ಡಾಯಗೊಳಿಸಿಲ್ಲ. ಇದಕ್ಕಾಗಿಯೇ ಇದ್ದ ಸಮಿತಿ ಈ ಆಖೈರು ತೀರ್ಮಾನ ಕೈಗೊಂಡಿದೆ. ಇದು ಯಾರ ಮೂಲಭೂತ ಹಕ್ಕನ್ನೂ ಕಸಿಯುವ ಪ್ರಯತ್ನವಲ್ಲ. ನಾಡಗೀತೆಯ ಗೌರವ ಕಾಪಾಡುವ ದೃಷ್ಟಿಯಿಂದ ಏಕರೂಪದ ಅನುಶಾಸನಕ್ಕೆ ಒಳಪಡಿಸಿದೆ. ಇಂತಹ ವಿಷಯಗಳಲ್ಲಿ ಶಾಸನಾತ್ಮಕ ಅಧಿಕಾರದ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದರು.
ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲರು 'ಸರ್ಕಾರದ ಈ ಆದೇಶ ಅಭಿವ್ಯಕ್ತಿ ಹಾಗೂ ವಾಕ್ ಸ್ವಾತಂತ್ರ್ಯ ಧಕ್ಕೆ ಉಂಟು ಮಾಡುತ್ತದೆ. ಇಂತಹುದೇ ಧಾಟಿಯಲ್ಲಿ ಹಾಡಬೇಕು ಎನ್ನುವುದು ಒಪ್ಪುವಂತಹ ವಿಚಾರವಲ್ಲ. ಈ ಹಿಂದೆ ಸಿ.ಅಶ್ವತ್ಥ್ ಅವರ ರಾಗ ಸಂಯೋಜನೆ ಮುಂದುವರಿಸುವ ಬಗ್ಗೆ ಸ್ವತಃ ಮೈಸೂರು ಅನಂತಸ್ವಾಮಿಯವರೇ ಒಪ್ಪಿಕೊಂಡಿದ್ದರು' ಎಂದು ಸ್ಮರಿಸಿದರು.
ತಮ್ಮ ಬಾಲ್ಯ ನೆನೆದ ಜಡ್ಜ್
ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್, ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿಕೊಂಡರು. 'ಶಾಲಾ ದಿನಗಳಲ್ಲಿನ ತಾಲೂಕು-ಜಿಲ್ಲಾ ಮಟ್ಟದ ಪಂದ್ಯಾಟಗಳಿದ್ದಾಗ ವಿವಿಧ ಶಾಲೆಗಳ ವಿದ್ಯಾರ್ಥಿಗಳೆಲ್ಲಾ ಒಂದೆಡೆ ಸೇರುತ್ತಿದ್ದೆವು. ಆಗ ಸಿದ್ದಯ್ಯ ಪುರಾಣಿಕರ, ಸುಗ್ಗಿಯು ಬಂದಿತು ಹಿಗ್ಗನು ತಂದಿತು, ನಮ್ಮಯ ನಾಡಿನ ಜನಕೆಲ್ಲ, ಸಗ್ಗದ ಸುಖವನು ನೀಡುತ ರೈತಗೆ, ದುಡಿಯಲು ಹಚ್ಚುತ ದಿನವೆಲ್ಲ. ಪದ್ಯವನ್ನು ಒಂದೊಂದು ಶಾಲೆಗಳವರು ಒಂದೊಂದು ರೀತಿ ಹಾಡುತ್ತಿದ್ದರು' ಎಂಬುದನ್ನು ಬಿಚ್ಚಿಟ್ಟರು.
'ಜಯಭಾರತ ಜನನಿಯ ತನುಜಾತೆ...ಗೀತೆಯು ಅರ್ಥಗರ್ಭಿತವಾದ ಮತ್ತು ಸುಂದರವಾದ ಪದ್ಯ. ಇದರ ಬಗ್ಗೆ ಹೆಚ್ಚು ಬಡಿದಾಡಿಕೊಳ್ಳಬೇಡಿ. ಬೇಕಿದ್ದರ ಉಭಯ ಪಕ್ಷಗಾರರೂ ಒಂಡೆಡೆ ಕಲೆತು ಗೌರವಯುತವಾದ ಒಮ್ಮತದ ನಿರ್ಧಾರಕ್ಕೆ ಬನ್ನಿ' ಎಂದು ಸಲಹೆ ನೀಡಿ ವಿಚಾರಣೆ ಮುಂದೂಡಿತು.












Click it and Unblock the Notifications