ಬೆಂಗಳೂರಿನಲ್ಲಿ ಮಾರ್ಚ್ 9 ಕ್ಕೆ ಯೋಗಿ ಶ್ರೀ ಎಂ ಉಪನ್ಯಾಸ, ನಾಸ್ತಿಕರಿಗೂ ಯೋಗ ಪುಸ್ತಕ ಬಿಡುಗಡೆ
ಬೆಂಗಳೂರು: ಪದ್ಮಭೂಷಣ ಪುರಸ್ಕೃತರೂ ಹಾಗೂ ಅಧ್ಯಾತ್ಮ ಚಿಂತಕರೂ ಆದ ಯೋಗಿ ಶ್ರೀ ಎಂ (ಮುಮ್ತಾಜ್ ಅಲಿ ಖಾನ್) ಅವರ ವಿಶೇಷ ಉಪನ್ಯಾಸವು ನಗರದಲ್ಲಿ ಮಾರ್ಚ್ 9 ರಂದು ನಡೆಯಲಿದೆ. ತಮ್ಮ ವಿಶಿಷ್ಟ ಅಧ್ಯಾತ್ಮ ಚಿಂತನೆಗಳಿಂದ ಅಪಾರ ಅನುಯಾಯಿಗಳನ್ನು ಹೊಂದಿರುವ ಶ್ರೀ ಎಂ ಅವರ ನಗರ ಭೇಟಿಯು ಹಲವರ ಗಮನ ಸೆಳೆದಿದೆ. ಈ ಕಾರ್ಯಕ್ರಮಕ್ಕೂ ಅಪಾರ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಹುಟ್ಟುಹಾಕಿದೆ.
ಯೋಗಿ ಶ್ರೀ ಎಂ ಅವರು ಕೇರಳದ ತಿರುವನಂತಪುರದಲ್ಲಿ 6 ನವೆಂಬರ್ 1948 ರಂದು ಜನಿಸಿದರು. ಬಾಲ್ಯದಲ್ಲಿಯೇ ಆತ್ಮಸಾಕ್ಷಾತ್ಕಾರದ ಹಂಬಲದಿಂದ ಹಿಮಾಲಯಕ್ಕೆ ತೆರಳಿ ತಮ್ಮ ಗುರು ಮಹೇಶ್ವರನಾಥರಿಂದ ಯೋಗಿಗಳಿಂದ ಕ್ರಿಯಾಯೋಗ ದೀಕ್ಷೆಯನ್ನು ಪಡೆದರು.
ಗೃಹಸ್ಥಾಶ್ರಮದಲ್ಲಿದ್ದುಕೊಂಡೇ ಯೋಗಸಾಧನೆಯನ್ನು ನಡೆಸುತ್ತಾ, ಸರ್ವಧರ್ಮ ಸೌಹಾರ್ದ ಮತ್ತು ಮಾನವ ಏಕತೆಯ ಸಂದೇಶವನ್ನು ಜಗತ್ತಿನಾದ್ಯಂತ ಹರಡಲು ಬದುಕು ಮುಡಿಪಿಟ್ಟರು. ಅವರ ಆತ್ಮಚರಿತ್ರೆಯಾದ "ಹಿಮಾಲಯ ಗುರುವಿನ ಗರಡಿಯಲ್ಲಿ" ಅನೇಕ ಭಾಷೆಗಳಿಗೆ ಅನುವಾದಗೊಂಡು ದಾಖಲೆಯ ಮಾರಾಟವನ್ನು ಕಂಡಿದೆ.

ವಿಸ್ಮಯಕಾರಿ ಹಾಗೂ ಮಾನವಾತೀತ ಅನುಭವಗಳನ್ನು ಅವರು ತಮ್ಮ ಆತ್ಮಚರಿತ್ರೆಯಲ್ಲಿ ಸ್ಫುಟವಾಗಿಯೂ ನಿರ್ಭೀತಿಯಿಂದಲೂ ಹಂಚಿಕೊಂಡಿದ್ದಾರೆ. ಉಪನಿಷತ್ತುಗಳು, ವೇದಾಂತ, ಭಗವದ್ಗೀತೆ, ಕ್ರಿಯಾಯೋಗ ಮತ್ತು ಸೂಫಿ ತತ್ತ್ವಗಳಲ್ಲಿ ಪರಿಣತಿ ಹೊಂದಿರುವ ಶ್ರೀ ಎಂ ಅವರ ಸಂದೇಶ ಸರಳ ಮತ್ತು ಸ್ಪಷ್ಟ - "ಒಳತಿರುಳನ್ನು ಗ್ರಹಿಸಬೇಕು; ಕೇವಲ ತತ್ತ್ವಗಳಿಂದ ಪ್ರಯೋಜನವಿಲ್ಲ."
ಬೆಂಗಳೂರು ಭೇಟಿ, ಉಪನ್ಯಾಸ
ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಮಾರ್ಚ್ 9 ರಂದು ಸಂಜೆ 6 ರಿಂದ 7ರವರೆಗೂ ಶ್ರೀ ಎಂ ಅವರಿಂದ "ಸಾಮಾನ್ಯ ಮನಸಿನಾಚೆಗೆ - ಉಪನಿಷತ್ತಿನ ದೃಷ್ಟಿಕೋನ" ಎಂಬ ವಿಷಯದ ಕುರಿತು ಇಂಗ್ಲೀಷಿನಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಆಸಕ್ತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಈ ಸುಸಂದರ್ಭದಲ್ಲೇ ಶ್ರೀ ಎಂರವರ Yoga Also for the Godless ಪುಸ್ತಕದ ಕನ್ನಡ ಅನುವಾದ
"ಯೋಗ - ನಾಸ್ತಿಕರಿಗೂ ಸಹ" ಬಿಡುಗಡೆಯಾಗಲಿದೆ.












Click it and Unblock the Notifications