ಧಾರಾಕಾರ ಮಳೆಯಿಂದ ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರ ಪ್ರಕರಣ ಹೆಚ್ಚಳ
ಬೆಂಗಳೂರು, ನವೆಂಬರ್ 18: ರಾಜಧಾನಿ ಬೆಂಗಳೂರು ನಗರದಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಸೊಳ್ಳೆಗಳ ಉತ್ಪತ್ತಿ ಜಾಸ್ತಿಯಾಗಿದ್ದು, ಈ ಹಿನ್ನೆಲೆಯಲ್ಲಿ ಡೆಂಗ್ಯೂ ಹಾಗೂ ಚಿಕೂನ್‌ಗುನ್ಯಾ ಪ್ರಕರಣಗಳ ಸಂಖ್ಯೆ 1 ಸಾವಿರ ಗಡಿ ದಾಟಿದೆ.
ಕಳೆದ ಅಕ್ಟೋಬರ್ ತಿಂಗಳ 15 ದಿನಗಳಲ್ಲಿ 1,048 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಪೂರ್ವ ವಲಯದಲ್ಲಿ ಅತಿಹೆಚ್ಚು 401 ಮಂದಿಯಲ್ಲಿ ಈ ಕಾಯಿಲೆ ಪತ್ತೆಯಾಗಿದೆ.
ಮತ್ತೊಂದೆಡೆ 1,434 ಜನರನ್ನು ಚಿಕೂನ್ ಗುನ್ಯಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ 53 ಮಂದಿಯಲ್ಲಿ ರೋಗ ದೃಢಪಟ್ಟಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡೆಂಗ್ಯೂ ಜ್ವರ ತಡೆಗಾಗಿ ಮಳೆ ಅಥವಾ ಇತರೆ ಸಿಂಪಡಣೆ ಮಾಡಿದ ನೀರು ಎಲ್ಲಿಯೂ ನಿಲ್ಲದಂತೆ ಕ್ರಮವಹಿಸಬೇಕು. ಸೊಳ್ಳೆಗಳು ಉತ್ಪತ್ತಿಯಾಗದಂತೆ ಜಾಗೃತಿ ವಹಿಸಬೇಕು. ರೋಗಲಕ್ಷಣಗಳು ಕಂಡುಬಂದಲ್ಲಿ ಶೀಘ್ರ ತಪಾಸಣೆ ಮಾಡಿಸಿಕೊಳ್ಳಬೇಕು.
ಸೊಳ್ಳೆ ನಾಶಕ್ಕಾಗಿ ಬೆಂಗಳೂರು ಮಹಾನಗರ ಪಾಲಿಕೆಯಿಂದ ಆ್ಯಂಟಿ ಲಾರ್ವಾ ಸಿಂಪಡಣೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ. ತ್ರಿಲೋಕ್‌ಚಂದ್ರ ತಿಳಿಸಿದ್ದಾರೆ.
ವಲಯವಾರು ಡೆಂಗ್ಯೂ ಪ್ರಕರಣಗಳ ವಿವರ
ಬೊಮ್ಮನಹಳ್ಳಿ ವಲಯದಲ್ಲಿ 2,623 ಜನರನ್ನು ತಪಾಸಣೆ ಮಾಡಿಸಿದ್ದು, 64 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ. ದಾಸರಹಳ್ಳಿ ವಲಯದಲ್ಲಿ 129 ಜನರನ್ನು ತಪಾಸಣೆ ಮಾಡಿಸಿದ್ದು, 29 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ.
ಪೂರ್ವವಲಯ ವಲಯದಲ್ಲಿ 13,970 ಜನರನ್ನು ತಪಾಸಣೆ ಮಾಡಿಸಿದ್ದು, 401 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ. ಮಹದೇವಪುರ ವಲಯದಲ್ಲಿ 4,095 ಜನರನ್ನು ತಪಾಸಣೆ ಮಾಡಿಸಿದ್ದು, 142 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ.

ರಾಜರಾಜೇಶ್ವರಿ ನಗರ ವಲಯದಲ್ಲಿ 2,332 ಜನರನ್ನು ತಪಾಸಣೆ ಮಾಡಿಸಿದ್ದು, 92 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ. ದಕ್ಷಿಣ ವಲಯದಲ್ಲಿ 8,267 ಜನರನ್ನು ತಪಾಸಣೆ ಮಾಡಿಸಿದ್ದು, 102 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ.
ಪಶ್ಚಿಮ ವಲಯದಲ್ಲಿ 4,825 ಜನರನ್ನು ತಪಾಸಣೆ ಮಾಡಿಸಿದ್ದು, 80 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ. ಯಲಹಂಕ ವಲಯದಲ್ಲಿ 2,102 ಜನರನ್ನು ತಪಾಸಣೆ ಮಾಡಿಸಿದ್ದು, 138 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರಿನಲ್ಲಿ ಒಟ್ಟು 38,343 ಜನರನ್ನು ತಪಾಸಣೆ ಮಾಡಿಸಿದ್ದು, 1,048 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗ ಮಾಹಿತಿ ನೀಡಿದೆ.
ರಾಷ್ಟ್ರ ರಾಜಧಾನಿಯಲ್ಲೂ ಗರಿಷ್ಠ ಡೆಂಗ್ಯೂ ಪ್ರಕರಣ
ಸದ್ಯ ವಾಯು ಮಾಲಿನ್ಯದಿಂದ ಉಸಿರುಗಟ್ಟಿಸುವ ವಾತಾವರಣವಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದೀಗ ಮತ್ತೊಮ್ಮೆ ಡೆಂಗ್ಯೂ ಜ್ವರ ಆತಂಕ ಎದುರಾಗಿದೆ. ಕಳೆದ ಐದು ವರ್ಷಗಳಲ್ಲೇ ಗರಿಷ್ಠ ಎಂಬಷ್ಟು ಡೆಂಗ್ಯೂ ಪ್ರಕರಣ ವರದಿಯಾಗದಿದ್ದು, ವಾಯುಮಾಲಿನ್ಯದ ಜತೆಗೆ ಜ್ವರ ಕೂಡ ಕಾಡುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.
ಪ್ರಸಕ್ತ ವರ್ಷ ದೆಹಲಿಯಲ್ಲಿ 5,270 ಡೆಂಗ್ಯೂ ಪ್ರಕರಣಗಳು ವರದಿಯಾಗಿರುವುದು ಕಳೆದ ಸೋಮವಾರದ ವರದಿಯಲ್ಲಿ ಕಂಡುಬಂದಿದೆ. ಅದರಲ್ಲೂ ಕಳೆದ ಒಂದು ವಾರದಲ್ಲೇ 2,570 ಪ್ರಕರಣಗಳು ಕಂಡುಬಂದಿವೆ. ಕಳೆದ ಐದು ವರ್ಷಗಳಲ್ಲಿ ದಾಖಲೆಯ ಡೆಂಗ್ಯೂ ಪ್ರಕರಣಗಳು ಕಂಡುಬಂದಿರುವುದು ಸಾರ್ವಜನಿಕರಲ್ಲಿ ಭಯದ ವಾತಾವರಣ ಹುಟ್ಟಿಸಿದೆ.
ದೆಹಲಿಯಲ್ಲಿ 2016ರಲ್ಲಿ 4431, 2017ರಲ್ಲಿ 4726, 2018ರಲ್ಲಿ 2798, 2019ರಲ್ಲಿ 2036 ಮತ್ತು 2020ರಲ್ಲಿ 1072 ಡೆಂಘ ಪ್ರಕರಣಗಳು ವರದಿಯಾಗಿದ್ದವು. ಆದರೆ ಈ ವರ್ಷ ಏಕಾಏಕಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ, ಐದು ಸಾವಿರದ ಗಡಿಯನ್ನು ದಾಟಿರುವುದು ಕೊರೊನಾ ಸೋಂಕಿನ ನಂತರ ಸರ್ಕಾರಕ್ಕೂ ತಲೆನೋವಾಗಿ ಪರಿಣಮಿಸಿದೆ.