ಅಬಕಾರಿ ಹಗರಣ: ಮನೀಶ್ ಸಿಸೋಡಿಯ ₹54 ಕೋಟಿ ಆಸ್ತಿ ಬಗ್ಗೆ ದೇಶಾದ್ಯಂತ ಅಪಪ್ರಚಾರ ಖಂಡನೀಯ
ಬೆಂಗಳೂರು, ಜುಲೈ 10: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜಾರಿ ನಿರ್ದೇಶನಾಲಯ ಸುಳ್ಳು ಕೇಸಿನಲ್ಲಿ ಬಂದಿಸಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಜಪ್ತಿ ಮಾಡಿರುವಂತಹ ರೂ.54 ಕೋಟಿ ಆಸ್ತಿಗಳು ಕೇವಲ ಮನೀಶ್ ಸಿಸೋಡಿಯ ರವರಿಗೆ ಮಾತ್ರ ಸಂಬಂಧಪಟ್ಟದ್ದು ಎಂದು ಎಎಪಿ ರಾಜ್ಯ ಕಾರ್ಯಾಧ್ಯಕ್ಷ ಬಿ.ಟಿ.ನಾಗಣ್ಣ ಹೇಳಿದರು.
ಬೆಂಗಳೂರಿನ ಆಮ್ ಆದ್ಮಿ ಪಕ್ಷದ (AAP) ಮಾಧ್ಯಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ವಿದೇಶಗಳೇ ನಾಚುವಂತಹ ಶಿಕ್ಷಣ ಕ್ರಾಂತಿಯನ್ನು ದೆಹಲಿ ರಾಜ್ಯದಲ್ಲಿ ಮಾಡಿರುವಂತಹ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯ ಅವರ ಆಸ್ತಿ ಜಪ್ತಿ ಮಾಡಲಾಗಿದೆ. ಅಬಕಾರಿ ನೀತಿ ಹಗರಣ ಪ್ರಕರಣ ಸಂಬಂಧ ಜಪ್ತಿ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಮಂತ್ರಿ ಮೋದಿ ಅವರ ಜಾರಿ ನಿರ್ದೇಶನಾಲಯವು ಸುಳ್ಳು ಕೇಸಿನಲ್ಲಿ ಸಿಸೋಡಿಯಾರನ್ನು ಬಂಧಿಸಿದೆ, ಇದು ಖಂಡನೀಯ. ಪ್ರಕರಣ ಸಂಬಂಧ ಆಸ್ತಿ ಜಪ್ತಿ ಮಾಡಿರುವ 54 ಕೋಟಿ ಆಸ್ತಿಗಳು ಕೇವಲ ಮನೀಶ್ ಸಿಸೋಡಿಯ ರವರಿಗೆ ಸೇರಿದ್ದು. ಆದರೆ ದೇಶಾದ್ಯಂತೆ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡಿಸುತ್ತಿರುವುದು ಬಿಜೆಪಿಯವರ ಹತಾಶೆಯ ಸಂಕೇತ ಎಂದು ಅವರು ಆರೋಪಿಸಿದರು.
ಕುತಂತ್ರಗಳಿಗೆ ಎಎಪಿ ಜಗ್ಗಲ್ಲ
ಈಗಾಗಲೇ ಎರಡು ರಾಜ್ಯಗಳಲ್ಲಿ ಅಧಿಕಾರವನ್ನು ಕಳೆದು ಕೊಂಡ ಬಿಜೆಪಿ ಗೋವಾ, ಪಂಜಾಬ್, ಉತ್ತರಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಜನಪ್ರತಿನಿಧಿಗಳನ್ನು ಹೊಂದಿರುವಂತಹ ಆಮ್ ಆದ್ಮಿ ಪಕ್ಷದ ಉನ್ನತ ನಾಯಕರುಗಳನ್ನು ಸದೆ ಬಡಿಯುವ ಉದ್ದೇಶ ಹೊಂದಿದೆ. ಉತ್ತಮ ನಾಯಕರನ್ನು ಮಟ್ಟ ಹಾಕಬೇಕೆಂಬುದೇ ಕೇಂದ್ರದ ನಿಲುವಾಗಿದೆ. ಆದರೆ ಇಂತಹ ಕುತಂತ್ರಗಳಿಂದ ಆಮ್ ಆದ್ಮಿ ಪಕ್ಷ ಯಾವುದೇ ಕಾರಣಕ್ಕೂ ಜಗ್ಗುವುದಿಲ್ಲ ಎಂದು ಅವರು ಎಚ್ಚರಿಸಿದರು.
ಮನೀಶ್ ಸಿಸೋಡಿಯಾ ಅವರು ಈ ಹಿಂದೆ ಪತ್ರಕರ್ತರಾಗಿದ್ದಾಗ 2005 ರಲ್ಲಿ ಗಾಜಿಯಾಬಾದ್ ನಲ್ಲಿ 5 ಲಕ್ಷಕ್ಕೆ ಮನೆಯನ್ನು ಖರೀದಿಸಿದ್ದರು. 2018 ರಲ್ಲಿ ತಮ್ಮ ಹೆಂಡತಿಯ ಹೆಸರಿನಲ್ಲಿ ದೆಹಲಿಯಲ್ಲಿ 65 ಲಕ್ಷದ ಒಂದು ಫ್ಲಾಟ್ ಅನ್ನು ಖರೀದಿಸಿದ್ದರು. ಬ್ಯಾಂಕ್ ಆಫ್ ಬರೋಡದ ಖಾತೆಯಲ್ಲಿ 11,49,738 ರೂಗಳು ಮಾತ್ರ ಇದೆ.

ಆದರೆ ಮನೀಶ್ ಸಿಸೋಡಿಯಾ ರವರ ಮೇಲಿನ ಮೊಕದ್ದಮೆ 2021 ರಲ್ಲಿ ಆಗಿದೆ. ಈ ಸುಳ್ಳು ಮೊಕದ್ದಮೆಗೂ ಅವರು ಖರೀದಿಸಿರುವ ಎರಡು ಆಸ್ತಿಗಳಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಇದರಿಂದ ಸಾಬೀತಾಗುತ್ತಿದೆ. ಮಾಜಿ ಪತ್ರಕರ್ತನಾಗಿ ಎರಡು ಬಾರಿ ದೆಹಲಿಯ ಉಪಮುಖ್ಯಮಂತ್ರಿಯಾಗಿ, 18 ಖಾತೆಗಳನ್ನು ನಿರ್ವಹಣೆ ಮಾಡುತ್ತಿದ್ದ ಇವರು ತಮ್ಮ ವಾಸಕ್ಕಾಗಿ ಇಷ್ಟು ಸಣ್ಣ ಮಟ್ಟದ ಆಸ್ತಿಯನ್ನು ಸಹ ಹೊಂದಬಾರದೆ ? ಎಂದು ನಾಗಣ್ಣ ಪ್ರಶ್ನಿಸಿದರು.
ಆಸ್ತಿ ದಾಖಲೆ ಪ್ರದರ್ಶಿಸಿದ ಎಎಪಿ
ಜಾರಿ ನಿರ್ದೇಶನಾಲಯ ಜಪ್ತಿ ಮಾಡಿರುವ 54 ಕೋಟಿ ಆಸ್ತಿ ಗಳು ಚಾರಿಯೇಟ್ ಮೀಡಿಯಾ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್, ಬ್ರಿಂಡ್ ಕೋ ಸೇಲ್ಸ್ ಪ್ರೈವೇಟ್ ಲಿಮಿಟೆಡ್, ಗೌತಮ್ ಮಲ್ಹೋತ್ರ, ನೋವಾ ಗಾರ್ಮೆಂಟ್ಸ್, ಗೌತಮ್ ಮಲ್ಹೋತ್ರ ಅವರುಗಳಿಗೆ ಸಂಬಂಧಿಸಿದ ಆಸ್ತಿಗಳು ಎಂದು ನಾಗಣ್ಣ ದಾಖಲೆ ಸಮೇತ ಪ್ರದರ್ಶಿಸಿದರು.
ರಾಷ್ಟ್ರೀಯ ಮಾಧ್ಯಮಗಳು ಹಾಗೂ ಸ್ಥಳೀಯ ಮಾಧ್ಯಮಗಳು ಸರಿಯಾಗಿ ಅರ್ಥೈಸಿಕೊಂಡು ಪ್ರಸಾರ ಮಾಡಬೇಕೆ ಹೊರತು ಮನೀಶ್ ಸಿಸೋಡಿಯಾ ರವರ ಬಗ್ಗೆ ಅಪಪ್ರಚಾರ ಮಾಡಬಾರದೆಂದು ಅವರು ಮನವಿ ಮಾಡಿಕೊಂಡರು.
ಬಿಜೆಪಿಯವರು ಜಾರಿ ನಿರ್ದೇಶನಾಲಯದ ಇತ್ತೀಚಿನ ತಿದ್ದುಪಡಿ ಕಾನೂನನ್ನು ಕೇವಲ ಆಮ್ ಆದ್ಮಿ ಪಕ್ಷದ ನಾಯಕರುಗಳನ್ನು ಮಾತ್ರ ಹಣಿಯಲು ಹಾಗೂ ಬೇರೆ ಬೇರೆ ರಾಜ್ಯಗಳಲ್ಲಿ ತಮ್ಮ ಸರ್ಕಾರಗಳನ್ನು ಅಕ್ರಮ ಮಾರ್ಗಗಳಲ್ಲಿ ಸ್ಥಾಪಿಸಲು ಬಳಸಿಕೊಳ್ಳುತ್ತಿದ್ದಾರೆ. ಇದರ ಹೊರತು ರಾಷ್ಟ್ರದಲ್ಲಿ ಭ್ರಷ್ಟಾಚಾರವನ್ನು ಕಿತ್ತೆಸೆಯುವ ಯಾವುದೇ ಮಹಾ ಉದ್ದೇಶವಿಲ್ಲ ಎಂದರು.












Click it and Unblock the Notifications