ಬಿಬಿಎಂಪಿ ವಿಭಜನೆ ಕುರಿತು ಜೂ.17ಕ್ಕೆ ವಿಶೇಷ ಸಭೆ
ಬೆಂಗಳೂರು, ಜೂ. 12 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜಿಸುವ ಪ್ರಸ್ತಾಪ ಮತ್ತೊಮ್ಮೆ ಕೇಳಿ ಬಂದಿದೆ. ಜೂನ್ 17ರಂದು ಬಿಬಿಎಂಪಿ ವಿಭಜನೆ ಕುರಿತು ಚರ್ಚಿಸಲು ವಿಶೇಷ ಕೌನ್ಸಿಲ್ ಸಭೆಯನ್ನು ಕರೆಯಲಾಗಿದೆ.
ಕಳೆದ ವಾರ ಬಿಬಿಎಂಪಿ ಮೇಯರ್ ಕಟ್ಟೆ ಸತ್ಯನಾರಾಯಣ ಬಿಬಿಎಂಪಿ ವಿಭಜನೆ ಕುರಿತು ಚರ್ಚೆ ನಡೆಸಲು ವಿಶೇಷ ಕೌನ್ಸಿಲ್ ಸಭೆಯನ್ನು ಕರೆಯಲಾಗುತ್ತದೆ ಎಂದು ಮಾಹಿತಿ ನೀಡಿದ್ದರು. ಸದ್ಯ ಜೂನ್ 17ರಂದು ಸಭೆಯನ್ನು ಕರೆಯಲಾಗಿದ್ದು, ವಿಭಜನೆ ಕುರಿತು ಚರ್ಚೆ ನಡೆಯಲಿದೆ. [ಬಿಬಿಎಂಪಿ ವಿಭಜನೆ ಪ್ರಸ್ತಾಪ ಸರ್ಕಾರಕ್ಕೆ]

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಭಜನೆ ಮಾಡುವ ಕುರಿತು ವರದಿ ನೀಡುವಂತೆ ರಚಿಸಿದ್ದ ಸಮಿತಿ ಸರ್ಕಾರಕ್ಕೆ ಬಿಬಿಎಂಪಿಯನ್ನು ಎರಡು ಅಥವ ಮೂರು ವಿಭಾಗಗಳಾಗಿ ವಿಂಗಡಿಸಬಹುದು ಎಂದು ವರದಿ ನೀಡಿದೆ. ಬಿಬಿಎಂಪಿ ಕೌನ್ಸಿಲ್ ಸಭೆಯೂ ವಿಭಜನೆಗೆ ಒಪ್ಪಿಗೆ ನೀಡಿದರೆ, ಮುಂದಿನ ಕಾರ್ಯ ಆರಂಭವಾಗಲಿದೆ. [ಬಿಬಿಎಂಪಿ ವಿಭಜನೆಯ ಸುಳಿವು ಕೊಟ್ಟ ಸಿದ್ದರಾಮಯ್ಯ]
ಹಳೆಯ ಪ್ರಸ್ತಾಪ : ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರವಹಿಸಿಕೊಂಡ ನಂತರ ಬಿಬಿಎಂಪಿ ವಿಭಜನೆ ವಿಚಾರ ಕೇಳಿಬರುತ್ತಿದೆ. ಸಿದ್ದರಾಮಯ್ಯ ಅವರು ಸಹ ಆಡಳಿತದ ಅನುಕೂಲದ ದೃಷ್ಠಿಯಿಂದ 198 ವಾರ್ಡ್ ಗಳನ್ನು ಹೊಂದಿರುವ ಬಿಬಿಎಂಪಿಯನ್ನು ಎರಡು ಅಥವ ಮೂರು ವಿಭಾಗಗಳಾಗಿ ವಿಂಗಡಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದರು.
ಸರ್ಕಾರ ನಗರಾಭಿವೃದ್ಧಿ ಇಲಾಖೆ ಮತ್ತು ಬಿಬಿಎಂಪಿಯ ಮಾಜಿ ಆಯುಕ್ತರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ, ಬಿಬಿಎಂಪಿ ವಿಭಜನೆ ಮಾಡುವ ಕುರಿತು ವರದಿ ನೀಡುವಂತೆ ಸೂಚಿಸಿತ್ತು. ಸಮಿತಿ ಸಹ ಬಿಬಿಎಂಪಿ ವಿಭಜಿಸಿದರೆ, ಆಡಳಿತಕ್ಕೆ ಅನುಕೂಲವಾಗಲಿದೆ ಮತ್ತು ಎಲೆಕ್ಟ್ರಾನಿಕ್ ಸಿಟಿ ಪ್ರದೇಶದಲ್ಲಿ ಹೊಸ ವಾರ್ಡ್ ಗಳನ್ನು ಬಿಬಿಎಂಪಿಗೆ ಸೇರಿಸಿಕೊಳ್ಳಬಹುದು ಎಂದು ಶಿಫಾರಸು ಮಾಡಿತ್ತು.
198 ವಾರ್ಡ್ ಗಳಿರುವ ಬಿಬಿಎಂಪಿಯನ್ನು ಒಬ್ಬರು ಆಯುಕ್ತರು ಮತ್ತು ಮೇಯರ್ ಗಳಿಂದ ನಿರ್ವಹಿಸುವುದು ಕಷ್ಟ. ಎರಡು ಅಥಮ ಮೂರು ಭಾಗಗಳಾಗಿ ವಿಭಜನೆ ಆದರೆ, ಅಷ್ಟು ಮೇಯರ್ ಮತ್ತು ಆಯುಕ್ತರು ನೇಮಕವಾಗುತ್ತಾರೆ. ಆಗ ಉಸ್ತುವಾರಿ ನೋಡಿಕೊಳ್ಳುವುದು ಸುಲಭವಾಗಲಿದೆ ಎಂಬ ಚಿಂತನೆಯೂ ಇದೆ.
ಜೂನ್ 17ರಂದು ನಡೆಯಲಿರುವ ಬಿಬಿಎಂಪಿಯ ವಿಶೇಷ ಕೌನ್ಸಿಲ್ ಸಭೆಯಲ್ಲಿ ಸಮಿತಿಯ ವರದಿ ಸೇರಿದಂತೆ ಹಲವಾರು ವಿಚಾರಗಳ ಕುರಿತಾಗಿ ಚರ್ಚೆ ನಡೆಯಲಿದೆ. ಸಭೆ ಅಂತಿಮವಾಗಿ ಯಾವ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸುತ್ತದೆ ಎಂದು ಕಾದು ನೋಡಬೇಕು.












Click it and Unblock the Notifications