ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ವಿಚಾರ: ಸ್ಪೀಕರ್ ಹೇಳಿದ್ದು ಏನು?
ಬೆಂಗಳೂರು, ಜುಲೈ 11: ಹಲವು ನಾಟಕೀಯ ಬೆಳವಣಿಗೆಗಳ ನಂತರ, ಮುಂಬೈನಲ್ಲಿ ತಂಗಿದ್ದ ಅತೃಪ್ತ ಶಾಸಕರು, ಸುಪ್ರಿಂ ಕೋರ್ಟ್ ಆದೇಶದ ಮೇರೆಗೆ ತರಾತುರಿಯಲ್ಲಿ ಬೆಂಗಳೂರಿಗೆ ಬಂದು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿದರು.
ಅತೃಪ್ತರನ್ನು ಭೇಟಿಯಾದ ಬಳಿಕ ಸುದ್ದಿಗೋಷ್ಠಿ ನಡೆಸಿದ ಸ್ಪೀಕರ್ ರಮೇಶ್ ಕುಮಾರ್ ಅವರು, ಶಾಸಕರ ರಾಜೀನಾಮೆ ವಿಚಾರ, ಸುಪ್ರಿಂ ಕೋರ್ಟ್ ಆದೇಶ, ರಾಜ್ಯಪಾಲರ ಸೂಚನೆ ಇನ್ನೂ ಹಲವು ವಿಷಯಗಳ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಕುಮಾರ್, ಮುಂಬೈನಿಂದ ಧಾವಿಸಿ ಬಂದ ಅತೃಪ್ತ ಶಾಸಕರು ಇಂದು ಪುನಃ (ಕ್ರಮಬದ್ಧವಾಗಿಲ್ಲದ ರಾಜೀನಾಮೆ ಸಲ್ಲಿಸಿದವರು) ರಾಜೀನಾಮೆ ಸಲ್ಲಿಸಿದರು, ಆದರೆ ಅವರ ರಾಜೀನಾಮೆಯನ್ನು ಈಗಲೇ ಅಂಗೀಕರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜೀನಾಮೆ ತುರ್ತು ಅಂಗೀಕಾರ ಸಾಧ್ಯವಿಲ್ಲ: ಸ್ಪೀಕರ್
ಮಿಂಚಿನ ವೇಗದಲ್ಲಿ ರಾಜೀನಾಮೆ ಅಂಗೀಕರಿಸಲು ಸಾಧ್ಯವಿಲ್ಲ, ಹಾಗೆ ಮಾಡುವುದು ಸರಿಯಾದ ಕ್ರಮವೂ ಅಲ್ಲ ಎಂದ ರಮೇಶ್ ಕುಮಾರ್, ಕೆಲಸದ ಅವಧಿಯ ದಿನಗಳನ್ನು ಲೆಕ್ಕ ಮಾಡಿದರೆ ಅವರು ರಾಜೀನಾಮೆ ನೀಡಿ ಮೂರು ದಿನ (ಸೋಮವಾರದಿಂದ ಬುಧವಾರ) ಮಾತ್ರವೇ ಆಗಿದೆ, ಇಷ್ಟು ದಿನಗಳಲ್ಲಿ ವಿಧಾನಸಭೆ ಮತ್ತು ಸಂವಿಧಾನದ ನಡಾವಳಿಗೆ ಅನುಸಾರವಾಗಿ ನಾನು ನಡೆದುಕೊಂಡಿದ್ದೇನೆ ಎಂದರು.

'ಹೊಸ ರಾಜೀನಾಮೆಗಳನ್ನು ಪರಿಶೀಲನೆಗೆ ಒಳಪಡಿಸಬೇಕು'
ಈಗ ಹೊಸದಾಗಿ ಕೊಟ್ಟಿರುವ ರಾಜೀನಾಮೆಗಳು ಒತ್ತಡ ರಹಿತವಾಗಿ ಕೊಟ್ಟಿರುವವೇ, ಶುದ್ಧವಾಗಿರುವವೇ, ದುರುದ್ದೇಶದಿಂದ ಕೊಡಿಲ್ಲವೇ ಎಂಬಿತ್ಯಾದಿ ವಿಷಯಗಳನ್ನು ನಾನು ವಿವೇಚಿಸಬೇಕಿದೆ, ಸಂವಿಧಾನದ ನಡಾವಳಿಗಳಿಗೆ ಅನುಸಾರವಾಗಿಯೇ ನಾನು ನಡೆದುಕೊಳ್ಳಬೇಕಿದೆ, ಇದೆಲ್ಲಾ ಮಿಂಚಿನ ವೇಗದಲ್ಲಿ ಆಗುವ ಕೆಲಸವಲ್ಲ, ನಾನು ಮಿಂಚಿನ ವೇಗದಲ್ಲಿ ರಾಜೀನಾಮೆ ಅಂಗೀಕಾರ ಮಾಡುವುದೂ ಸಾಧ್ಯವಿಲ್ಲ ಎಂದು ರಮೇಶ್ ಕುಮಾರ್ ಹೇಳಿದರು.
|
ಶನಿವಾರದಿಂದ ನಡೆದ ಘಟನೆಯ ವಿವರ ನೀಡಿದ ಸ್ಪೀಕರ್
ಶಾಸಕರು ಶನಿವಾರ ನಮ್ಮ ಕಚೇರಿಗೆ ರಾಜೀನಾಮೆ ನೀಡಿದ್ದರು, ಅಂದು ಅವರು ಬರುವ ಮುನ್ನಾ ನನಗೆ ಮಾಹಿತಿ ನೀಡಿರಲಿಲ್ಲ, ಆ ನಂತರ ಅವರ ರಾಜೀನಾಮೆ ಪರಿಶೀಲನೆ ನಡೆಸಿದಾಗ ಎಂಟು ರಾಜೀನಾಮೆಗಳು ಕ್ರಮಬದ್ಧವಾಗಿಲ್ಲದರ ಬಗ್ಗೆ ತಿಳಿಸಿ, ಅವರಿಗೆ ಮತ್ತೆ ರಾಜೀನಾಮೆ ಸಲ್ಲಿಸಲು ಅವಕಾಶ ನೀಡಿದ್ದೆ, ಆದರೆ ಅವರು ಸುಪ್ರಿಂ ಕೋರ್ಟ್‌ಗೆ ಹೋಗಿದ್ದರು ಎಂದರು.

ಅತೃಪ್ತ ಶಾಸಕರ ಬಗ್ಗೆ ರಮೇಶ್ ಕುಮಾರ್ ಅಸಮಾಧಾನ
ಶಾಸಕರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರಮೇಶ್ ಕುಮಾರ್, ಶಾಸಕರು ನನ್ನ ಗಮನಕ್ಕೆ ತರದೇ ರಾಜೀನಾಮೆ ನೀಡಿದರು, ನನ್ನ ಗಮನಕ್ಕೆ ಬಂದಿದ್ದರೆ ಅಂದೇ ರಾಜೀನಾಮೆಯ ಕ್ರಮಬದ್ಧತೆಯ ಬಗ್ಗೆ ತಿಳಿಸಬಹುದಿತ್ತು, ಅದರ ಬದಲಿಗೆ ಅವರು ಮುಂಬೈನಲ್ಲಿ ಹೋಗಿ ಕೂತರು, ಅಲ್ಲಿಂದ ದೆಹಲಿಗೆ ಹೋಗಿ ಸುಪ್ರಿಂ ಮೊರೆ ಹೋದರು, ಇಲ್ಲಿಯೇ ಕೂತು ನನ್ನನ್ನು ಭೇಟಿ ಮಾಡಿದ್ದರೆ ನಾನು ಬೇಡ ಎನ್ನುತ್ತಿರಲಿಲ್ಲ ಎಂದು ರಮೇಶ್ ಕುಮಾರ್ ಹೇಳಿದರು.

ಸುದ್ದಿಗೋಷ್ಠಿ ವೇಳೆ ಭಾವುಕರಾದ ರಮೇಶ್ ಕುಮಾರ್
ಮೈತ್ರಿ ಸರ್ಕಾರಕ್ಕೆ ಸಮಯ ಧಕ್ಕಿಸಿಕೊಡಲು ರಾಜೀನಾಮೆ ಅಂಗೀಕರಿಸಲು ರಮೇಶ್ ಕುಮಾರ್ ಅವರು ವಿಳಂಬ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನನ್ನನ್ನು ಯಾರೂ ನಿಯಂತ್ರಿಸಲು ಸಾಧ್ಯವಿಲ್ಲ, ಯಾರೋ ಹಾಕುವ ತಾಳಕ್ಕೆ ಕುಣಿಯುವವ ನಾನಲ್ಲ ಎಂದ ಅವರು, 'ವೃಥಾ ಆರೋಪಗಳನ್ನು ಮಾಡಿ ನೋಯಿಸಬೇಡಿ, ಸಾಯುವ ವಯಸ್ಸಲ್ಲಿ ನೆಮ್ಮದಿಯಿಂದ ಸಾಯಲು ಬಿಡಿ' ಎಂದು ಭಾವುಕವಾಗಿ ಗೋಗರೆದರು.












Click it and Unblock the Notifications