ಬೆಂಗಳೂರು ಉತ್ತರದಿಂದ ಎಸ್.ಎಂ.ಕೃಷ್ಣ ಪುತ್ರಿ ಶಾಂಭವಿ ಕಾಂಗ್ರೆಸ್ ಅಭ್ಯರ್ಥಿ?
ಬೆಂಗಳೂರು, ಆಗಸ್ಟ್ 24 : ಬಿಜೆಪಿಯ ಹಿರಿಯ ನಾಯಕ ಎಸ್.ಎಂ.ಕೃಷ್ಣ ರಾಜಕೀಯದಿಂದ ನಿವೃತ್ತಿ ಹೊಂದುವ ಸುದ್ದಿ ಹೊರ ಬಿದ್ದ ದಿನ ಮತ್ತೊಂದು ಸುದ್ದಿ ಬಂದಿದೆ. ಎಸ್.ಎಂ.ಕೃಷ್ಣ ಪುತ್ರಿ ಶಾಂಭವಿ ಅವರು ಕಾಂಗ್ರೆಸ್ ಪಕ್ಷ ಸೇರಲಿದ್ದು, 2019ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಹೌದು..ಶುಕ್ರವಾರ ಹಬ್ಬಿರುವ ಸುದ್ದಿ ಪ್ರಕಾರ ಎಸ್.ಎಂ.ಕೃಷ್ಣ ಪುತ್ರಿ ಶಾಂಭವಿ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ. ಕ್ಷೇತ್ರದ ಹಾಲಿ ಸಂಸದರು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ.
ಎಸ್.ಎಂ.ಕೃಷ್ಣ ಅವರು ಪುತ್ರಿಯನ್ನು ಕಾಂಗ್ರೆಸ್ ಪಕ್ಷದ ಮೂಲಕವೇ ರಾಜಕೀಯಕ್ಕೆ ಕರೆತರಲು ಹೊರಟಿದ್ದಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ ಎಸ್.ಎಂ.ಕೃಷ್ಣ ಜೀವನ ಚರಿತ್ರೆ ಪುಸ್ತಕ ಬಿಡುಗಡೆಯಾಗಲಿದ್ದು, ಅಂದು ಎಸ್.ಎಂ.ಕೃಷ್ಣ ಅವರು ಪುತ್ರಿ ಶಾಂಭವಿ ರಾಜಕೀಯಕ್ಕೆ ಬರುವ ಕುರಿತು ಘೋಷಣೆ ಮಾಡುವ ನಿರೀಕ್ಷೆ ಇದೆ.

ಎಸ್.ಎಂ.ಕೃಷ್ಣ ಅವರು ಜೀವನ ಚರಿತ್ರೆ ಪುಸ್ತಕ ಪ್ರಕಟವಾದ ಬಳಿಕ ರಾಜಕೀಯ ನಿವೃತ್ತಿ ಪಡೆಯಲಿದ್ದಾರೆ. ಆದ್ದರಿಂದ, ಪುತ್ರಿ ಶಾಂಭವಿ ಅವರು ಕುಟುಂಬದ ರಾಜಕೀಯ ನಂಟನ್ನು ಮುಂದುವರೆಸುವ ನಿರೀಕ್ಷೆ ಇದೆ.
ಬೆಂಗಳೂರು ಉತ್ತರ ಕ್ಷೇತ್ರ : 2019ರ ಲೋಕಸಭೆ ಚುನಾವಣೆಗೆ ಎಸ್.ಎಂ.ಕೃಷ್ಣ ಪುತ್ರಿ ಶಾಂಭವಿ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಎಸ್.ಎಂ.ಕೃಷ್ಣ ಅವರು ಪುತ್ರಿಗೆ ಟಿಕೆಟ್ ಕೊಡಿಸುವ ಸಾಧ್ಯತೆ ಇದೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಸದ್ಯ ಬಿಜೆಪಿ ವಶದಲ್ಲಿದೆ. ಆದರೆ, 2018ರ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5ರಲ್ಲಿ ಕಾಂಗ್ರೆಸ್ ಶಾಸಕರು ಗೆದ್ದಿದ್ದಾರೆ. ಒಂದು ವೇಳೆ ಅಲ್ಲಿಂದ ಸ್ಪರ್ಧೆ ಮಾಡಿದರೆ ಗೆಲುವು ಸುಲಭ ಎಂಬುದು ಲೆಕ್ಕಾಚಾರವಾಗಿದೆ.
ಎಸ್.ಎಂ.ಕೃಷ್ಣ ಅವರ ಪುತ್ರಿ ಶಾಂಭವಿ ಉದ್ಯಮಿಯಾಗಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಅವರು ಮದ್ದೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿ ಚುನಾವಣೆ ಸಮಯದಲ್ಲಿ ಹಬ್ಬಿತ್ತು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬ್ಯಾಟರಾಯನಪುರ, ಕೆ.ಆರ್.ಪುರ, ದಾಸರಹಳ್ಳಿ, ಯಶವಂಮತಪುರ, ಮಲ್ಲೇಶ್ವರ, ಮಹಾಲಕ್ಷ್ಮೀ ಲೇಔಟ್, ಪುಲಿಕೇಶಿ ನಗರ ಮತ್ತು ಹೆಬ್ಬಾಳ ವಿಧಾನಸಭಾ ಕ್ಷೇತ್ರಗಳು ಒಳಪಡಲಿವೆ.












Click it and Unblock the Notifications