ಬೆಂಗಳೂರು ಕ್ರೈಮ್: 6 ವರ್ಷದ ಕಂದಮ್ಮನ ಕೊಲೆ, ಚರಂಡಿಯಲ್ಲಿ ದೇಹ ಪತ್ತೆ
ಬೆಂಗಳೂರು: ಸಿಲಿಕಾನ್ ಸಿಟಿಗೆ ವಲಸೆ ಹೆಚ್ಚಾದಂತೆಲ್ಲಾ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ ಎಂಬ ಆರೋಪದ ನಡುವೆ, ಇಂದು ಮತ್ತೆ ಇಡೀ ಬೆಂಗಳೂರು ಬೆಚ್ಚಿ ಬೀಳುವ ಘಟನೆ ವರದಿ ಆಗಿದೆ. ಬೆಂಗಳೂರು ಪೂರ್ವ ಭಾಗ ವೈಟ್‌ಫೀಲ್ಡ್ ಬಳಿಯ ಪಟ್ಟಂದೂರು ಅಗ್ರಹಾರದ ವಲಸೆ ಕಾಲೋನಿಯ ನಿವಾಸಿಯಾಗಿದ್ದ 6 ವರ್ಷದ ಬಾಲಕಿಯನ್ನ ಅಪಹರಿಸಿ ಕೊಲೆ ಮಾಡಲಾಗಿದೆ. ಕಂದಮ್ಮನ ದೇಹ ಚರಂಡಿಯಲ್ಲಿ ಪತ್ತೆಯಾಗಿದ್ದು, ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕ ಕುಟುಂಬದ ಬಾಲಕಿಯನ್ನ ಹತ್ಯೆ ಮಾಡಿದ್ದಾನೆ ವಿಕೃತ ಕ್ರಿಮಿ.
ಜನವರಿ 5 ಸೋಮವಾರ ಮಧ್ಯಾಹ್ನವೇ ಮಗು ಕಾಣೆಯಾಗಿದ್ದು, ಬಾಲಕಿಯ ತಂದೆ ಇಂಜಾಮುಲ್ ಶೇಖ್ ತಮ್ಮ ಮಗಳು ನಾಪತ್ತೆಯಾಗಿರುವ ಬಗ್ಗೆ ಜನವರಿ 6ಕ್ಕೆ ದೂರು ದಾಖಲಿಸಿದ್ದರು. ಪೊಲೀಸರ ಪ್ರಕಾರ ಮೃತ ಬಾಲಕಿಯ ಮನೆ ಪಕ್ಕದಲ್ಲಿ ವಾಸ ಇದ್ದ ಮತ್ತೊಬ್ಬ ವಲಸೆ ಕಾರ್ಮಿಕ ಯೂಸುಫ್ ಮೀರ್ ಈ ಕೃತ್ಯ ಎಸಗಿದ್ದಾನೆ ಎಂದು ಶಂಕಿಸಲಾಗಿದೆ. ದಿನಗೂಲಿ ಮತ್ತು ಚಿಂದಿ ಆಯುವ ಕೆಲಸ ಮಾಡುತ್ತಿದ್ದ ಮೃತ ಬಾಲಕಿಯ ಕುಟುಂಬದವರು, ಎಂದಿನಂತೆ ತಮ್ಮ ಕೆಲಸದಲ್ಲಿ ನಿರತರಾಗಿದ್ದ ಸಮಯದಲ್ಲಿ ವಿಕೃತ ಕ್ರಿಮಿ ಈ ಕೃತ್ಯ ಎಸಗಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಆರೋಪಿ ಕೂಡ ಚಿಂದಿ ಆಯುವ ಕೆಲಸ ಮಾಡುತ್ತಿದ್ದ.

ಬಾಲಕಿ ಕತ್ತು ಹಿಸುಕಿ ಕೊಲೆ ಆರೋಪ
ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದು, ತಲೆಮರೆಸಿಕೊಂಡ ಆರೋಪಿಗೆ ಶೋಧಕಾರ್ಯ ಇದೀಗ ಸಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಲೈಂಗಿಕ ದೌರ್ಜನ್ಯದ ಬಗ್ಗೆ ಸುಳಿವು ಪತ್ತೆಯಾಗಿಲ್ಲ, ಹೀಗಾಗಿ ಮರಣೋತ್ತರ ಪರೀಕ್ಷೆಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಿಂದ ಇಡೀ ಬೆಂಗಳೂರು ಮತ್ತೊಮ್ಮೆ ಬೆಚ್ಚಿ ಬಿದ್ದಿದ್ದು, ಕಂದಮ್ಮನ ಸಾವಿನ ಸುದ್ದಿ ಬೆಂಗಳೂರಿಗರನ್ನ ಇದೀಗ ಮರುಗುವಂತೆ ಮಾಡಿದೆ.
ಒಟ್ನಲ್ಲಿ ಕಂದಮ್ಮನ ದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಓಡಿ ಹೋಗಿರುವ ವಿಕೃತನಿಗಾಗಿ ಬಲೆ ಬೀಸಲಾಗಿದೆ. ಹಾಗೇ ಮಗಳನ್ನ ಕಳೆದುಕೊಂಡ ಪೋಷಕರು ಕಣ್ಣೀರು ಹಾಕುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿ ಕೈಸೇರಿದ ನಂತರ ಸಂಪೂರ್ಣ ಮಾಹಿತಿ ತಿಳಿಯಲಿದೆ. ಇದೆಲ್ಲಾ ಏನೇ ಇರಲಿ ಮಗು ಹತ್ಯೆ ಮಾಡಿದ ಪಾಪಿಗಳಿಗೆ ಘೋರವಾದ ಶಿಕ್ಷೆ ಆಗಲಿ ಅಂತಾ ಜನ ಆಗ್ರಹಿಸುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ತೀವ್ರ ಸಂಚಲನಕ್ಕೂ ಕಾರಣವಾಗಿದೆ.












Click it and Unblock the Notifications