ಮೊಬೈಲ್ ಕದ್ದು ಐಎಂಇಐ ಬದಲಾಯಿಸುತ್ತಿದ್ದ ಚೋರರ ಸೆರೆ
ಬೆಂಗಳೂರು, ಜೂ.17: ಮೊಬೈಲ್ ಫೋನ್‍ಗಳನ್ನು ಕದ್ದು ಅವುಗಳ ಐಎಂಇಐ ನಂಬರ್‌ಗಳನ್ನು ಬದಲಾಯಿಸಿ ಮಾರಾಟ ಮಾಡುತ್ತಿದ್ದ ಆರು ಜನರನ್ನು ಉಪ್ಪಾರಪೇಟೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ತನ್ನುಪಾಷ ಬಿನ್ ಸಮೀವುಲ್ಲಾ(32), ಹನೀಫ್ ಸೇಠ್ ಬಿನ್ ಮಹಮದ್ ಉಸ್ಮಾನ್ ಸೇಠ್(28), ಶಾಬಾಜ್ ಬಿನ್ ನವೀದ್ ಪಾಷ, (24), ರವಿ ಪ್ರಸಾದ್ ಪೂಂಜಾ (47), ಮಹಮದ್ ಹಸೀಬ್ ಬಿನ್ ಯೂನಿಸ್‍ಖಾನ್(24) ಬಂಧಿತ ಆರೋಪಿಗಳು.
ಆರೋಪಿಗಳಿಂದ 5 ಲಕ್ಷ ಬೆಲೆ ಬಾಳುವ 66 ಮೊಬೈಲ್ ಫೋನ್‌ಗಳು, 4 ಕಂಪ್ಯೂಟರ್‌ಗಳು, ಹಾಗೂ ಐಎಂಇಐ ನಂಬರ್ ಪರಿವರ್ತನೆ ಮಾಡುವ ಸಾಫ್ಟ್‌ವೇರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರು ಉಪ್ಪಾರಪೇಟೆ ಪೊಲೀಸ್ ಠಾಣೆ ಸರಹದ್ದಿನ ಗಾಂಧಿನಗರದ ನ್ಯಾಷನಲ್ ಮಾರ್ಕೆಟ್, ಬರ್ಮಾ ಬಜಾರ್ ಮತ್ತು ಎಸ್.ಪಿ.ರಸ್ತೆ ಹಾಗೂ ಜೆ.ಸಿ.ರಸ್ತೆಗಳಲ್ಲಿರುವ ಮೊಬೈಲ್ ಅಂಗಡಿಗಳಿಂದ ಮೊಬೈಲ್‌ನ್ನು ಕದ್ದು ಬಳಿಕ ಸಾಫ್ಟ್‌ವೇರ್ ಬಳಸಿ ಮೂಲ ಐಎಂಇಐ ನಂಬರ್ ಬದಲಾಯಿಸಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

2.50 ಲಕ್ಷ ಮೌಲ್ಯದ ರಕ್ತ ಚಂದನ ವಶ:
ಅಕ್ರಮವಾಗಿ ರಕ್ತ ಚಂದನ ಮರಗಳ ತುಂಡುಗಳನ್ನು ಮಾರಾಟ ಮಾಡುತ್ತಿದ್ದ ಮೂವರನ್ನು ಉಪ್ಪಾರಪೇಟೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 2.50 ಲಕ್ಷ ಮೌಲ್ಯದ 250 ಕೆ.ಜಿ. ರಕ್ತ ಚಂದನ ಮರವನ್ನು ವಶಪಡಿಸಿಕೊಂಡಿದ್ದಾರೆ.
ಕಪಾಲಿ ಚಿತ್ರ ಮಂದಿರದ ಎದುರು ಅಕ್ರಮವಾಗಿ ರಕ್ತ ಚಂದನ ಮರಗಳನ್ನು ಮಾರಾಟ ಮಾಡುವ ಬಗ್ಗೆ ದೊರೆತ ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿ ಪಾದರಾಯನಪುರದ ಸೈಯ್ಯದ್ ಖಾಸಿಂ(28) ಮತ್ತು ಬೀಡಿ ಕಾಲೋನಿ, ಕೆಂಗೇರಿ ಉಪನಗರ ನಿವಾಸಿಗಳಾದ ಎಂ.ವಸೀಂ(23), ರಸೂಲ್ ಖಾನ್(28)ರನ್ನು ಬಂಧಿಸಿದ್ದಾರೆ.
ಆರೋಪಿ ಅಲ್ತಾಫ್ ತಂಡದ ನಾಯಕನಾಗಿದ್ದು, ಈತ ಇತರೆ 4 ಜನರೊಂದಿಗೆ ತುಮಕೂರು ಟೋಲ್ ಬಳಿ ಕ್ಯಾಂಟರ್ ವಾಹನವನ್ನು ತಡೆದು ಚಾಲಕನಿಗೆ ಬೆದರಿಕೆ ಹಾಕಿ, ಅದರಲ್ಲಿದ್ದ ರಕ್ತ ಚಂದನ ಮರಗಳನ್ನು ಕಳುವು ಮಾಡಿ, ನಂತರ ಕ್ಯಾಂಟರ್‌ನ್ನು ಚನ್ನಪಟ್ಟಣದ ಬಳಿ ಬಿಟ್ಟು ಬಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಲೆ ಮರೆಸಿಕೊಂಡ ಆರೋಪಿಗಳ ಶೋಧ ಕಾರ್ಯ ಆರಂಭವಾಗಿದೆ.
ಉಪ್ಪಾರಪೇಟೆ ಪೊಲೀಸ್ ಠಾಣೆಯ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಪಿ.ಬಿ.ಕಿರಣ್ ನೇತೃತ್ವದಲ್ಲಿ ಸಿಬ್ಬಂದಿಯವರಾದ ಗವಿಸಿದ್ದಯ್ಯ. ಹೆಚ್‍ಸಿ , ಅಕ್ರಂ, ಆನಂದ್, ಗೋಪಾಲಯ್ಯ, ವಿಜಯ್, ಹರೀಶ್ ಅವರುಗಳು ಈ ಎರಡು ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.












Click it and Unblock the Notifications