ವೈಟ್ ಫೀಲ್ಡ್ ಸೀತಾರಾಮಪಾಳ್ಯ ಕೆರೆಗೆ ಪುನರ್ಜನ್ಮ
ಬೆಂಗಳೂರು, ಜು.5: ವೈಟ್ ಫೀಲ್ಡ್ ನ 23.37 ಎಕರೆ ಪ್ರದೇಶದಲ್ಲಿ ಇರುವ ಸೀತಾರಾಮಪಾಳ್ಯ ಕೆರೆ ತನ್ನ ಸೌಂದರ್ಯದ ಮೂಲಕ ಹಲವಾರು ಪ್ರವಾಸೋದ್ಯಮ ಕಿರುಹೊತ್ತಗೆಗಳ ಪುಟವನ್ನು ಅಲಂಕರಿಸಬಹುದಿತ್ತು. ಆದರೆ, ಇಂದು ಮರಗಳನ್ನು ಕಡಿದು ಹಾಕಿರುವುದು, ಭೂಮಿ ಅಭಿವೃದ್ಧಿ ಆಗಿರುವುದರಿಂದ ನೀರಿನ ಮಟ್ಟ ಕುಸಿದಿರುವುದಲ್ಲದೇ ಚಿಕ್ಕ ಹೊಂಡದಂತಾಗಿರುವ ಕೆರೆ ತನ್ನ ಅಂದವನ್ನೇ ಕಳೆದುಕೊಂಡಿದೆ.
ಒಂದು ಕಾಲಕ್ಕೆ ನೀರಿನಿಂದ ತುಂಬಿ ತುಳುಕುತ್ತಿದ್ದ ಕೆರೆ ಈಗ ತ್ಯಾಜ್ಯ ವಸ್ತುಗಳು ಮತ್ತು ಕಟ್ಟಡಗಳ ಅವಶೇಷಗಳನ್ನು ಹಾಕುವ ತಾಣವಾಗಿ ಮಾರ್ಪಟ್ಟಿದ್ದು, ಕೆರೆಯ ನೀರು ನೀಲಿ ಬಣ್ಣಕ್ಕೆ ತಿರುಗಿದೆ. ಬ್ರಿಗೇಡ್ ಎಂಟರ್ ಪ್ರೈಸಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ಪ್ರಸಾದ್ ಹೇಳುವಂತೆ, ಬ್ರಿಗೇಡ್ ಗ್ರೂಪ್ ಈ ಕೆರೆಯನ್ನು ಪುನರುಜ್ಜೀವನಗೊಳಿಸಿ ಅದರ ಹಿಂದಿನ ಸೌಂದರ್ಯವನ್ನು ಮರುಕಳಿಸುವಂತೆ ಮಾಡಲಿದೆ.
ಈ ಕೆರೆಯಲ್ಲಿ ತುಂಬಿರುವ ಕಟ್ಟಡಗಳ ಅವಶೇಷಗಳನ್ನು ತೆರವುಗೊಳಿಸುವುದು, ಮುಚ್ಚಿ ಹೋಗಿರುವ ಕಾಲುವೆಗಳನ್ನು ಮತ್ತೆ ಆರಂಭಿಸುವುದು, ಮಕ್ಕಳಿಗಾಗಿ ಉದ್ಯಾನ ನಿರ್ಮಾಣದ ಜೊತೆಗೆ ವಾಕಿಂಗ್ ವೇ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ. [ಪ್ರತಿದಿನ ಪರಿಸರ ಉಳಿಸಿ]

ಪಕ್ಷಿಗಳ, ಪಕ್ಷಿ ಪ್ರೇಮಿಗಳ ನೆಚ್ಚಿನ ತಾಣವಾಗಲಿದೆ
ಗಿಡ- ಮರಗಳನ್ನು ನೆಡುವ ಮೂಲಕ ಕೆರೆಯ ಸುತ್ತ ಹಸಿರು ನಳನಳಿಸುವಂತೆ ಮಾಡುವುದು, 5 ಬಗೆಯ ಮೀನುಗಳನ್ನು ಕೆರೆಗೆ ಬಿಟ್ಟು ವೀಕ್ಷಕರ ಮನ ತಣಿಸುವಂತೆ ಮಾಡುವುದು, ಅಲಂಕಾರಿಕ ಹೂವುಗಳನ್ನು ಇಲ್ಲಿ ಬೆಳೆಸುವ ಯೋಜನೆ ಇದೆ. ಈ ಮೂಲಕ ಕೆರೆ ಪಕ್ಷಿಗಳ ಮತ್ತು ಪಕ್ಷಿ ಪ್ರೇಮಿಗಳ ನೆಚ್ಚಿನ ತಾಣವಾಗಲಿದೆ.

ಬ್ರಿಗೇಡ್ ಗ್ರೂಪ್ ನಿಂದ ಕೆರೆಗೆ ಪುನರ್ಜನ್ಮ ಪ್ರಾಪ್ತಿ
ಸ್ಥಳೀಯ ಸಂಸ್ಥೆಗಳು ಕೆರೆಗಳನ್ನು ಪುನರುಜ್ಜೀವನಗೊಳಿಸುವ ಹಲವು ಯೋಜನೆಗಳನ್ನು ರೂಪಿಸುತ್ತಿವೆ. ಈ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಸ್ಥೆಯಾದ ಟ್ರಾಪಿಕಲ್ ರೀಸರ್ಚ್ ಡೆವಲಪ್ ಮೆಂಟ್ ಸೆಂಟರ್ (ಟಿಆರ್ ಡಿಸಿ)ನ ಸಹಯೋಗದಲ್ಲಿ ಬ್ರಿಗೇಡ್ ಗ್ರೂಪ್ ಸೀತಾರಾಮಪಾಳ್ಯದ ಕೆರೆಯನ್ನು ಪುನರುಜ್ಜೀವನಗೊಳಿಸಲು ನಿರ್ಧರಿಸಿದೆ. ಸರ್ಕಾರದ ಕಡಿಮೆ ಬಂಡವಾಳ ಹೂಡಿಕೆ ಮತ್ತು ಅತ್ಯಂತ ಮಾನವ ಸಂಪನ್ಮೂಲ ಬಳಕೆಯೊಂದಿಗೆ ಕೆರೆಯ ಮೂಲ ಸ್ವರೂಪವನ್ನು ಮರುಕಳಿಸುವಂತೆ ಮಾಡುವುದು ಈ ಯೋಜನೆಯ ಪರಿಕಲ್ಪನೆಯಾಗಿದೆ.

ಕೆರೆಯಲ್ಲಿ 13,692 ದಶಲಕ್ಷ ನೀರು ಸಂಗ್ರಹವಾಗಲಿದೆ
ಕೆರೆ ಪುನರುಜ್ಜೀವನ ಯೋಜನೆಗೆ ಲೋಕಾಯುಕ್ತ ಅನುಮತಿ ನೀಡಿದ್ದು, ಯೋಜನೆ 9 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಈ ಯೋಜನೆ ಪೂರ್ಣಗೊಂಡ ನಂತರ 23.37 ಎಕರೆ ವಿಸ್ತೀರ್ಣದಲ್ಲಿ 9,197 ದಶಲಕ್ಷ ಲೀಟರ್ ನೀರಿಗೆ ಬದಲಾಗಿ 13,692 ದಶಲಕ್ಷ ನೀರು ಸಂಗ್ರಹವಾಗಲಿದೆ. ಮಕ್ಕಳ ಆಟಕ್ಕೆ ಜಾಗವನ್ನು ಮೀಸಲಿಡುವುದರ ಜತೆಗೆ 300 ರಿಂದ 400 ಮೀಟರ್ ಉದ್ದದ ವಾಕಿಂಗ್/ಜಾಗಿಂಗ್ ಮಾರ್ಗವೂ ನಿರ್ಮಾಣವಾಗಲಿದೆ.

ಲೋನ್ ಪರ್ಪಲ್, ಗ್ರೇ ಹೆರಾನ್ ಪಕ್ಷಿಗಳು ಬರುತ್ತಿವೆ
ಕೆರೆಯ ಸುತ್ತಮುತ್ತ ಸುಮಾರು 2 ರಿಂದ 3 ಲಕ್ಷ ಜನ ವಾಸಿಸುತ್ತಿದ್ದು, ಅವರಿಗೆ ಈ ಕೆರೆ ಮನೋರಂಜನೆಯ ತಾಣವಾಗಿ ಮಾರ್ಪಾಡಾಗಲಿದೆ. ಅಂತರ್ಜಲ ವೃದ್ಧಿಯಾದರೆ ಇಲ್ಲಿ ಅಲಂಕಾರಿಕ ಪುಷ್ಪಗಳು ಜನರನ್ನು ಕೈಬೀಸಿ ಕರೆಯಲಿವೆ. ಈಗ ಪ್ರಾಥಮಿಕ ಹಂತದ ಕಾಮಗಾರಿ ಆರಂಭವಾಗಿದ್ದು, ಲೋನ್ ಪರ್ಪಲ್ ಮತ್ತು ಗ್ರೇ ಹೆರಾನ್ ಪಕ್ಷಿಗಳು ಕಾಣಿಸಿಕೊಳ್ಳಲಾರಂಭಿಸಿವೆ.

ಮೊದಲ ಹಂತದ ಕಾಮಗಾರಿ ಪ್ರಗತಿಯಲ್ಲಿದೆ
ಪುನರುಜ್ಜೀವನದ ಮೊದಲ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಕೆರೆಯಲ್ಲಿ ತುಂಬಿರುವ ನೂರಾರು ಟನ್ ಅವಶೇಷಗಳನ್ನು ತೆಗೆಯುವ ಕಾರ್ಯ ನಡೆಯುತ್ತಿದೆ. ಇದಾದ ನಂತರ ಕೆರೆ ಏರಿ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಈ ಏರಿ ಕೆರೆಯ ವ್ಯಾಪ್ತಿಯಲ್ಲೇ ಇರುತ್ತದೆ. ಕೆರೆಗೆ ನೀರು ಬರಲು ಆರಂಭವಾದ ತಕ್ಷಣ ಪೈಪ್ ಗಳು ಅಥವಾ ಕಾಲುವೆಗಳಲ್ಲಿ ನೀರು ಪೋಲಾಗುತ್ತಿದ್ದರೆ ಅದನ್ನು ಸರಿಪಡಿಸಲಾಗುತ್ತದೆ.

ಕೆರೆ ಒತ್ತುವರಿ ತೆರವುಗೊಳಿಸುವ ಕಾರ್ಯ
ಕೆರೆ ಪುನರುಜ್ಜೀವನ ಕಾಮಗಾರಿ ಆರಂಭವಾದ ನಂತರ ಕೆರೆ ದಂಡೆಯನ್ನು ಕಲ್ಲಿನಿಂದ ನಿರ್ಮಾಣ ಮಾಡಲಾಗುತ್ತದೆ. ಇದರಲ್ಲಿ ಸಿಮೆಂಟ್ ಬಳಕೆ ಇರುವುದಿಲ್ಲ. ಈ ಕಾಮಗಾರಿ ಪೂರ್ಣದ ನಂತರ ಕೆರೆಗೆ ನೀರು ತರುವ ಎರಡು ಸಂಪರ್ಕ ಕಾಲುವೆಗಳನ್ನು ಸ್ವಚ್ಛಗೊಳಿಸಲಾಗುತ್ತದೆ. ಇದೇ ವೇಳೆ ಮೂರನೇ ಕಾಲುವೆಯ ಕಾಮಗಾರಿಯನ್ನೂ ಆರಂಭಿಸಲಾಗುತ್ತದೆ. ಸುತ್ತಮುತ್ತಲಿನ ಪ್ರದೇಶದಿಂದ ಕೆರೆಗೆ ಕೊಳಚೆ ನೀರು ಬರುತ್ತಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಹಾಗೊಂದು ವೇಳೆ ಬರುತ್ತಿದ್ದರೆ, ಅದನ್ನು ತಕ್ಷಣ ನಿಲ್ಲಿಸುವ ಕೆಲಸ ಮಾಡಲಾಗುತ್ತದೆ. ಕೆರೆ ಒತ್ತುವರಿಯಾಗಿದ್ದರೆ ಅದನ್ನು ತೆರವುಗೊಳಿಸುವ ಕಾರ್ಯವನ್ನು ಕಾನೂನಾತ್ಮಕವಾಗಿ ಮಾಡಲಾಗುತ್ತದೆ.

ಕೆರೆಯಲ್ಲಿ ಕೃತಕ ದ್ವೀಪ ನಿರ್ಮಾಣ ಮಾಡಲಾಗುತ್ತದೆ
ಕೆರೆ ಏರಿಯಲ್ಲಿ 1500 ರಿಂದ 2000 ಮರಗಳನ್ನು ಬೆಳೆಸುವ ಯೋಜನೆ ಇದೆ. ಇದು ಕೆರೆಯ ಪುನರುಜ್ಜೀವನಕ್ಕೆ ಸಹಕಾರಿಯಾಗಲಿದೆ. ಪಕ್ಷಿಗಳು ಮತ್ತು ಸಾರ್ವಜನಿಕರನ್ನು ಆಕರ್ಷಿಸಲೆಂದು ಕೆರೆಯಲ್ಲಿ ಕೃತಕ ದ್ವೀಪ ನಿರ್ಮಾಣ ಮಾಡುವ ಉದ್ದೇಶವೂ ಇದೆ. ಇದು ಪಕ್ಷಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಸ್ಥಳವಾಗಲಿದೆ.

ಉತ್ತಮ ಮಳೆ ಬಂದರೆ ಕೆರೆ ತುಂಬಿ ತುಳುಕಲಿದೆ
ಮೀನುಗಾರಿಕೆ ಇಲಾಖೆಯ ಅಧಿಕಾರಿ ಡಾ. ಸೀನಪ್ಪ ಅವರ ಸಹಕಾರದಲ್ಲಿ ಸುಮಾರು 25,000 ಮೀನುಗಳನು ಸಾಕುವ ಯೋಜನೆ ಇದೆ. ಅಲ್ಲದೇ ಕಾಟ್ಲಾ, ತಿಲಾಪಿಯಾ ಸೇರಿದಂತೆ 5 ವಿಧದ ಸುಮಾರು 5,000 ಮೀನುಗಳನ್ನು ಮೊದಲ ಹಂತದಲ್ಲಿ ಕೆರೆಯಲ್ಲಿ ಸಾಕಲಾಗುತ್ತದೆ. ಈ ಎಲ್ಲಾ ಯೋಜನೆಗಳ ಬಗ್ಗೆ ನೀಲನಕ್ಷೆ ಸಿದ್ಧವಾಗಿದ್ದು, ಕೆರೆ ತುಂಬಲು ಕನಿಷ್ಟ ಮೂರು ಬಾರಿ ಮಳೆ ಬರಬೇಕಾಗಿದೆ.












Click it and Unblock the Notifications