ಸಿರಿಧಾನ್ಯ ಮೇಳದಲ್ಲಿ ಅದಮ್ಯ ಚೇತನದಿಂದ ಶೂನ್ಯ ತ್ಯಾಜ್ಯ ಭೋಜನ ವ್ಯವಸ್ಥೆ
ಬೆಂಗಳೂರು ಜನವರಿ 20: ಲಕ್ಷಾಂತರ ಮಕ್ಕಳ ಹಸಿವನ್ನು ತಣಿಸುತ್ತಿರುವ ಜೊತೆಯಲ್ಲಿಯೇ 'ಝೀರೋ ಗಾರ್ಬೆಜ್' ಮೂಲಕ ಮನೆಮಾತಾಗಿರುವ ಅದಮ್ಯ ಚೇತನ, ಈ ಬಾರಿಯ ಸಾವಯವ ಮತ್ತು ಸಿರಿಧಾನ್ಯಗಳ ಅಂತರಾಷ್ಟ್ರೀಯ ವಾಣಿಜ್ಯ ಮೇಳ 2019 ರ ಭೋಜನ ವ್ಯವಸ್ಥೆಯನ್ನು ಶೂನ್ಯ ತ್ಯಾಜ್ಯ ಮಾಡುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ.
10 ಸಾವಿರ ಪ್ರತಿನಿಧಿಗಳು ಮತ್ತು 50 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸುವ ಮೂರು ದಿನಗಳ ಈ ಸಾವಯವ ಮತ್ತು ಸಿರಿಧಾನ್ಯಗಳ ಮೇಳದಲ್ಲಿ ಅದಮ್ಯ ಚೇತನ ಶೂನ್ಯ ತ್ಯಾಜ್ಯ ಭೋಜನ ವ್ಯವಸ್ಥೆಯನ್ನು ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿದ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ಡಾ ತೇಜಸ್ವಿನೀ ಅನಂತಕುಮಾರ್, ಸಿರಿಧಾನ್ಯಗಳ ಬಳಕೆ ನಮ್ಮ ಭೋಜನ ಶಾಲೆಯಲ್ಲಿ ಸಾಮಾನ್ಯ. ಇಂತಹ ಸಿರಿಧಾನ್ಯಗಳ ಅಂತರಾಷ್ಟ್ರೀಯ ಮೇಳದಲ್ಲಿ ಪ್ಯಾಸ್ಟಿಕ್, ಅಡಕೆ ತಟ್ಟೆ, ಪೇಪರ್ ತಟ್ಟೆ, ಪೇಪರ್ ಚಮಚ ಹಾಗೂ ಲೋಟಗಳನ್ನು ಸಂಪೂರ್ಣವಾಗಿ ನಿರ್ಭಂಧಿಸಲಾಗಿದೆ.

ಅದಮ್ಯ ಚೇತನ ಸಂಸ್ಥೆಯ ವತಿಯಿಂದ ಬಹುದಿನಗಳ ಯೋಜನೆಯಾದ ಸ್ಟೀಲ್ ತಟ್ಟೆ ಹಾಗೂ ಲೋಟಗಳ ಬ್ಯಾಂಕಿನ ಅಡಿಯಲ್ಲಿ 20 ಸಾವಿರ ಸ್ಟೀಲ್ ತಟ್ಟೆಗಳು, 20 ಸಾವಿರ ಸ್ಟೀಲ್ ಬಟ್ಟಲುಗಳು, 50 ಸಾವಿರ ಸ್ಟೀಲ್ ಚಮಚಗಳು ಮತ್ತು ಇನ್ನಿತರ ಸ್ಟೀಲ್ ವಸ್ತುಗಳನ್ನು ಪೂರೈಸಲಾಗಿದೆ. ಈ ಮೂಲಕ ತ್ಯಾಜ್ಯ ಉತ್ಪತ್ತಿಯನ್ನು ಸಂಪೂರ್ಣವಾಗಿ ಕಡಿಮೆಗೊಳಿಸಿರುವುದು ಸಂತಸದ ವಿಷಯವಾಗಿದೆ ಎಂದರು.

ಅಲ್ಲದೆ, ಊಟದ ನಂತರದಲ್ಲಿ ಮಿಕ್ಕುಳಿದ ಆಹಾರವನ್ನು ಗೊಬ್ಬರ ತಯಾರಿಸಲು ಗೊಬ್ಬರದ ಗುಂಡಿಗೆ ಹಾಕುವ ವ್ಯವಸ್ಥೆಯನ್ನು ಮಾಡಲಾಗಿದೆ. ಹಾಗೆಯೇ, ಉಟೋಪಚಾರಕ್ಕೆ ಬಳಸಲಾದ ಈ ಸ್ಟೀಲ್ ವಸ್ತುಗಳನ್ನು ಸ್ವಚ್ಚಗೊಳಿಸಲು ಸಾವಯವ ಸಾಬೂನ ಬಳಸಲಾಗುತ್ತದೆ. ಯಾವುದೇ ಕಾರಣಕ್ಕೂ ಪರಿಸರಕ್ಕೆ ಹಾನಿಯನ್ನುಂಟು ಮಾಡುವ ರಾಸಾಯನಿಕಗಳು ಮತ್ತು ಪ್ಯಾಸ್ಟಿಕ್ ವಸ್ತುಗಳನ್ನು ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಾವಯವ ಸಿರಿಧಾನ್ಯಗಳ ಮೇಳದ ಉದ್ಘಾಟನಾ ದಿನದಂದು ಸಾವಿರಾರು ಜನರು ಈ ಸ್ಟೀಲ್ ತಟ್ಟೆಗಳು ಹಾಗೂ ಲೋಟಗಳನ್ನು ಬಳಸಿಕೊಂಡಿದ್ದಾರೆ. ಈ ಮೂಲಕ ಪರಿಸರಕ್ಕೆ ಅಲ್ಪ ಕಾಣಿಕೆಯನ್ನೂ ನೀಡಿರುವ ಖುಷಿ ಅದಮ್ಯ ಚೇತನ ಸಂಸ್ಥೆಯದ್ದಾಗಿದೆ.












Click it and Unblock the Notifications