ಬೆಂಗಳೂರು ನಗರದಲ್ಲಿ ರಸ್ತೆಗುಂಡಿಗೆ ಬಲಿಯಾದವರೆಷ್ಟು?
ಬೆಂಗಳೂರು, ನವೆಂಬರ್ 17: ಸಾರ್ವಜನಿಕರ ಆಕ್ರೋಶ, ದೂರು ಸಲ್ಲಿಕೆ, ಪ್ರತಿಭಟನೆ ಹೊರತಾಗಿರುವ ಬೆಂಗಳೂರಿನಲ್ಲಿ ರಸ್ತೆಗುಂಡಿ ಇಲ್ಲವೇ ಹಾಳಾದ ರಸ್ತೆಗಳಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಲೇ ಇದೆ. 2021ರ ಅಕ್ಟೋಬರ್‌ನಿಂದ ಈವರೆಗೆ 9 ಜೀವಗಳು ಬಲಿಯಾಗಿವೆ.
ಇದಕ್ಕೆ ಪೂರಕ ಅನ್ನುವಂತೆ ಮಂಗಳವಾರವಷ್ಟೇ ರಾಜಾಜಿನಗರ ಸಮೀಪ ಸುಬ್ರಹ್ಮಣ್ಯ ನಗರದ 2ನೇ ಮುಖ್ಯರಸ್ತೆಯಲ್ಲಿ 55ವರ್ಷದ ಕುಮಾರ್ ಎಂಬುವವರು ಮೃತಪಟ್ಟರು. ಹಾಳಾದ ರಸ್ತೆಯಲ್ಲಿ ಸ್ಕಿಡ್ ಆಗಿ ಬಿದ್ದಿದ್ದ ಅವರ ಮೇಲೆ ಮಣ್ಣು ತುಂಬಿದ ಟ್ರ್ಯಾಕ್ಟರ್ ಹರಿದು ಸಾವಿಗೀಡಾದರು. ಸಿಸಿಟಿವಿ ಪರಿಶೀಲಿಸಿದ ಬಿಬಿಎಂಪಿ ಟ್ರ್ಯಾಕ್ಟರ್ ಓವರ್‌ಟೇಕ್ ಮಾಡಲು ಹೋಗಿದ್ದು ಕಂಡು ಬಂದಿದ್ದು, ಸಾವಿನ ಹೊಣೆ ಹೊರಲು ಒಪ್ಪಲಿಲ್ಲ.
ಕುಮಾರ್ ಸಾವು ಒಳಗೊಂಡಂತೆ ಕಳೆದ ವರ್ಷ ಅಕ್ಟೋಬರ್ ತಿಂಗಳಿನಿಂದ ಈವರೆಗೆ ಒಟ್ಟು 9 ಮಂದಿ ರಸ್ತೆಗುಂಡಿ, ನಿರ್ವಹಣೆ ಕೊರತೆಯ ರಸ್ತೆ ಅಥವಾ ಕಳಪೆ ಕಾಮಗಾರಿ ರಸ್ತೆಗಳಿಂದ ಸಾವನ್ನಪ್ಪಿದ್ದಾರೆ. ಅದೆಷ್ಟೋ ವಾಹನ ಸವಾರರಿಗೆ ಸಾಕಷ್ಟು ಗಾಯಗಳಾಗಿವೆ. ಈ ಕುರಿತು ಪ್ರತಿಭಟನೆ ಮಾಡಿದರು, ಸಾರ್ವಜನಿಕರು ದೂರು ನೀಡಿದರು ಬಿಬಿಎಂಪಿ ಆಗಲಿ, ಸರ್ಕಾರವಾಗಲಿ ಎಚ್ಚೆತ್ತುಕೊಂಡಿಲ್ಲ.

ಸರ್ಕಾರದ ನಿರ್ಲಕ್ಷ್ಯ, ಸಂಚಾರಸ್ನೇಹಿ ರಸ್ತೆ ಕೊರತೆ; ಬೆಂಗಳೂರಿನ ರಸ್ತೆಗುಂಡಿಗಳು ಇನ್ನೆಷ್ಟು ಜನರ ಪ್ರಾಣ ತೆಗೆಯಲು ಕುಳಿತಿವೆಯೋ ತಿಳಿಯದಾಗಿದೆ. ಇಷ್ಟು ಜೀವಗಳ ಹಾನಿಗೆ ಬಿಬಿಎಂಪಿ ಅಮರ್ಪಕ ನಿರ್ವಹಣೆ ಕಾರಣ ಎನ್ನಲಾಗುತ್ತಿದೆ. ಬಿಬಿಎಂಪಿ ನಿರ್ಲಕ್ಷದಿಂದ ಸಂಚಾರ ಸ್ನೇಹಿ ರಸ್ತೆಗಳ ಕೊರತೆ ಎದುರಾಗಿದೆ. ಹಲವು ರಸ್ತೆಗಳ ಮೇಲೆ ಜಲ್ಲಿಕಲ್ಲು ಹರಡಿಕೊಂಡಿವೆ. ಅನೇಕ ಕಡೆಗಳಲ್ಲಿ ರಸ್ತೆಗಳ ತುಂಬೆಲ್ಲ ಗುಂಡಿ ಬಿದ್ದಿವೆ. ಆದರೆ ಸಮಸ್ಯೆ ಪರಿಹರಿಸಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು ಕಾಮಗಾರಿಯಲ್ಲೂ ಲೂಟಿಗೆ ಮುಂದಾಗಿದ್ದರಿಂದ ಭ್ರಷ್ಟಾಚಾರ ಸಹ ಈ ಸಾವಿಗೆ ಕಾರಣ ಎನ್ನಲಾಗುತ್ತಿದೆ.
ರಸ್ತೆಗುಂಡಿ ಮುಚ್ಚುವುದು ಸೇರಿದಂತೆ ಕಾಮಗಾರಿ ಕುರಿತು ಕರ್ನಾಟಕ ರಾಜ್ಯ ಹೈಕೋರ್ಟ್ ಸಾಕಷ್ಟು ಬಾರಿ ಬಿಬಿಎಂಪಿಯನ್ನು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಪಾಲಿಕೆ ನೀಡಿದ್ದ ಗಡುವನ್ನು ಮೀರುತ್ತಲೇ ಬಂದಿದೆ. ಇತ್ತೀಚೆಗೆ ನವೆಂಬರ್ 2 ರಂದು ಬಿಬಿಎಂಪಿ ಮತ್ತದರ ಅದರ ಗುತ್ತಿಗೆದಾರರು ಕೈಗೊಂಡಿರುವ ಗುಂಡಿ ಮುಚ್ಚುವ ಕಾರ್ಯಗಳ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿ ನಾಲ್ಕು ವಾರದಲ್ಲಿ ವರದಿ ನೀಡುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ಕ್ಕೆ ನಿರ್ದೇಶಿಸಿತ್ತು.
ಈ ಹಿಂದೆ ಬಿಬಿಎಂಪಿಯು ನಗರದಲ್ಲಿ ಕೈಗೊಂಡಿರುವ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ, ರಸ್ತೆಗಳ ಸ್ಥಿತಿಗತಿ ಕುರಿತು ಹೈಕೋರ್ಟ್‌ಗೆ ವರದಿ ಸಲ್ಲಿಸಿತ್ತು. ಒಟ್ಟು ಪಾಲಿಕೆಯು 25,032 ಗುಂಡಿಗಳನ್ನು ಗುರುತಿಸಿದ್ದು, ಅದರಲ್ಲಿ ಈಗಾಗಲೇ 13,843 ಗುಂಡಿ ಮುಚ್ಚಲಾಗಿದೆ ಎಂದು ಹೇಳಿತ್ತು. ಬಿಬಿಎಂಪಿ ವರ್ಷಗಳಿಂದಲೂ ಇದೇ ರೀತಿ ಹೇಳುತ್ತಲೇ ಬರುತ್ತಿದೆ. ಆದರೆ ರಸ್ತೆಗಳ ಗುಣಮಟ್ಟ ಸುಧಾರಿಸುತ್ತಿಲ್ಲ. ಹೀಗಾಗಿ ಸಾವುನೋವುಗಳಿಗೆ ಕೊನೆ ಇಲ್ಲದಾಗಿದೆ.












Click it and Unblock the Notifications