ಬೆಂಗಳೂರು ಜನತೆಗೆ ಇಲ್ಲೊಂದು ಸಂತಸದ ಸುದ್ದಿ
ಬೆಂಗಳೂರು, ಮೇ 27: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ ಬಹುಶಃ ಮೊದಲ ಬಾರಿಗೆ ಎಲ್ಲ ಸಮುದಾಯಗಳ ಜನರಿಗೂ ಸಲ್ಲುವಂತಹ ಅತ್ಯಗತ್ಯ ಮತ್ತು ಪರಿಣಾಮಕಾರಿ ಯೋಜನೆಯೊಂದನ್ನು ಜಾರಿಗೆ ತಂದಿದ್ದಾರೆ. ಅದೂ ರಾಜಧಾನಿ ಬೆಂಗಳೂರಿನ ಜನ ಈ ಯೋಜನೆಯ ಫಲಾನುಭವಿಗಳಾಗುತ್ತಿದ್ದಾರೆ. ಸರಕಾರವೇ ಹೇಳಿಕೊಂಡಂತೆ ನಿಜಕ್ಕೂ ಇದೊಂದು ಜನಪರ ದಿಟ್ಟ ಯೋಜನೆ.
ಕರ್ನಾಟಕದ ಕಾಂಗ್ರೆಸ್ ಸರಕಾರ ಕೆಲ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯನ್ನು ಬೆಂಗಳೂರಿನ ಜನತೆಗೆ ಕೊಡುಗೆಯಾಗಿ ನೀಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಯನ್ನು ಇಂದು ಉದ್ಘಾಟಿಸಲಿದ್ದಾರೆ. ಆದರೆ ಇದು ಜಾರಿಗೆ ಬರುತ್ತಿರುವುದು ಜೂನ್ 1ರಿಂದ.
ಇದುವರೆಗೂ ಗ್ರಾಮೀಣ ಪ್ರದೇಶಗಳಿಗಷ್ಟೇ ಸೀಮಿತವಾಗಿದ್ದ ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯನ್ನು ಇದೀಗ ನಗರ ವ್ಯಾಪ್ತಿಗೂ ತರಲಾಗಿದೆ. ಇದರಿಂದ ರಾಜಧಾನಿಯ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ನಿಜಕ್ಕೂ ಬಹಳಷ್ಟು ಪ್ರಯೋಜನವಾಗಲಿದೆ. ಜತೆಗೆ ಬೆಂಗಳೂರಿನ ಪತ್ರಕರ್ತರೂ ಈ ಯೋಜನೆಯ ಲಾಭ ಪಡೆಯಬಹುದು.

ಬೆಂಗಳೂರಿನ ಯಾವುದೇ ಸಹಕಾರ ಸಂಘದಲ್ಲಿ ಷೇರು ಖರೀದಿಸಿ ಸದಸ್ಯತ್ವ ಪಡೆದಿರುವವರು ಈ ಯೋಜನೆಯಡಿ ನಗದಿಪಡಿಸಿದ ಆಸ್ಪತ್ರೆಗಳಲ್ಲಿ ಗರಿಷ್ಠ 2 ಲಕ್ಷ ರೂ ಮಿತಿಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಯಾವುದೇ ಸೊಸೈಟಿಯಲ್ಲಿ ಸದಸ್ಯತ್ವ ಪಡೆದ ವ್ಯಕ್ತಿಯ ಕುಟುಂಬಸ್ಥರೂ ಈ ಯೋಜನೆಯಡಿ ಚಿಕಿತ್ಸೆ ಪಡೆಯಬಹುದು.
ರಾಜ್ಯ ಸರಕಾರವು ಬಜೆಟ್ಟಿನಲ್ಲಿ ಈಗಾಗಲೇ ಯೋಜನೆಗಾಗಿ 15 ಕೋಟಿ ರೂ ಮೀಸಲಿಟ್ಟಿದೆ. ಸುಮಾರು 70 ಲಕ್ಷ ಫಲಾನುಭವಿಗಳು ಇದರ ಪ್ರಯೋಜನ ಪಡೆಯಬಹುದಾಗಿದೆ. ಈ ಯೋಜನೆಯ ಪ್ರಯೋಜನ ಪಡೆಯಲು ಸಹಕಾರಿ ಸದಸ್ಯರು ಪ್ರತಿವರ್ಷ 1010 ರೂ. ವಿಮೆ ಕಂತನ್ನು ಸೊಸೈಟಿಯಲ್ಲಿ ಕಟ್ಟಬೇಕು. ಹೊರ ರೋಗಿಯಾಗಿಯೂ ಸೂಕ್ತ ಚಿಕಿತ್ಸೆ ಪಡೆಯಬಹುದು.
ಅಂದಹಾಗೆ, ಗ್ರಾಮೀಣ ಯಶಸ್ವಿನಿ ಯೋಜನೆಯನ್ನು ಎಸ್ಎಂ ಕೃಷ್ಣ ಅವರ ಸರಕಾರವು 2003ರ ಜೂನ್ 1ರಂದು ಜಾರಿಗೆ ತಂದಿತ್ತು. ಇದುವರೆಗೂ 6 ಲಕ್ಷಕ್ಕೂ ಹೆಚ್ಚು ಸದಸ್ಯರಿಗೆ ಸುಮಾರು 544 ಕೋಟಿ ರೂ. ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗಿದೆ. ಯೋಜನೆಯಡಿ 13,35,289 ಸದಸ್ಯರಿಗೆ ಉಚಿತವಾಗಿ ಹೊರರೋಗಿಗಳಾಗಿ ಚಿಕಿತ್ಸಾ ಸೌಲಭ್ಯ ನೀಡಲಾಗಿದೆ.












Click it and Unblock the Notifications