ಮುಂದಿನ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ
ಬೆಂಗಳೂರು, ಜುಲೈ 6: ಇದೇ ನನ್ನ ಕೊನೆ ಚುನಾವಣೆ ಎಂದು 2018ರ ವಿಧಾನಸಭಾ ಚುನಾವಣೆಯಲ್ಲೇ ಘೋಷಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ಕ್ಷೇತ್ರದಿಂದ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಮಂಗಳವಾರದಂದು ಸಿದ್ದರಾಮಯ್ಯ ನಿವಾಸದಲ್ಲಿ ಭೇಟಿಯಾಗಿ, ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಾದಾಮಿ ಕ್ಷೇತ್ರದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, "ತಮ್ಮ ಕ್ಷೇತ್ರದಿಂದ ಸ್ಪರ್ಧಿಸುವಂತೆ ಹಲವರು ಅಭಿಮಾನದಿಂದ ಕರೆಯುತ್ತಿದ್ದಾರೆ. ಆದರೆ ನಾನು ಬಾದಾಮಿಯಿಂದಲೇ ಕಣಕ್ಕಿಳಿಯುತ್ತೇನೆ. ಯಾವುದೇ ತೀರ್ಮಾನವನ್ನು ನಿಮ್ಮ ಅಭಿಪ್ರಾಯ ಪಡೆದುಕೊಂಡೆ ಕೈಗೊಳ್ಳುತ್ತೇನೆ,'' ಎಂದು ಹೇಳಿದರು.

"ಬಾದಾಮಿ ಕ್ಷೇತ್ರದ ಜನತೆ ಒಳ್ಳೆಯವರಾಗಿದ್ದು, ವಿಧಾನಸಭೆ ಚುನಾವಣೆ ವೇಳೆ ನಾಮಪತ್ರ ಸಲ್ಲಿಸಿ ಒಂದು ದಿನ ಮಾತ್ರ ಪ್ರಚಾರ ಕೈಗೊಂಡಿದ್ದೆ. ಆದರೂ ಕ್ಷೇತ್ರದ ಜನತೆ ಅಭಿಮಾನದಿಂದ ಗೆಲ್ಲಿಸಿದ್ದಾರೆ. ಅವರ ಈ ಋಣವನ್ನು ಮರೆಯಲು ಸಾಧ್ಯವೇ ಇಲ್ಲ. ಬಾದಾಮಿ ಕ್ಷೇತ್ರದ ಶಾಸಕನಾಗಿ ನನ್ನ ಕರ್ತವ್ಯ ನಿಭಾಯಿಸುತ್ತಿದ್ದೇನೆ. ಯಾವುದೇ ಕಾರಣಕ್ಕೂ ಅಭಿವೃದ್ಧಿ ಕೆಲಸದ ವಿಷಯದಲ್ಲಿ ಹಿಂದೆ ಬೀಳುವುದಿಲ್ಲ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಾವಿರಾರು ಕೋಟಿ ರೂ. ವೆಚ್ಚದ ಕಾಮಗಾರಿಗಳು ಕ್ಷೇತ್ರದಲ್ಲಿ ನಡೆಯುತ್ತಿದೆ,'' ಎಂದರು.
"ಶಾಶ್ವತ ಕುಡಿಯುವ ನೀರಿನ ಯೋಜನೆ ಹಾಗೂ ಕೆರೂರು ಏತ ನೀರಾವರಿ ಯೋಜನೆ ಇದರಲ್ಲಿ ಪ್ರಮುಖವಾಗಿವೆ. ಜೊತೆಗೆ ಕಾಲೇಜು, ಆಸ್ಪತ್ರೆ ಸೇರಿದಂತೆ ಹಲವಾರು ಕೆಲಸಗಳೂ ಆಗಿವೆ. ಇನ್ನೂ ಎರಡು ವರ್ಷಗಳ ಅವಧಿ ಇದೆ. ಈ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ಶ್ರಮ ವಹಿಸುತ್ತೇನೆ ಎಂದು ಹೇಳಿದ ಸಿದ್ದರಾಮಯ್ಯ, ಶಾಸಕನಾಗಿ ಇದು ನನ್ನ ಜವಾಬ್ದಾರಿಯೂ ಹೌದು,'' ಎಂದರು.
"ನನ್ನನ್ನು ಭೇಟಿ ಮಾಡುವುದಕ್ಕೆ ಬಾದಾಮಿಯಿಂದ ಜನ ಬಂದಿದ್ದಾರೆ. ಮುಂದಿನ ಚುನಾವಣೆಯಲ್ಲಿಬಾದಾಮಿಯಿಂದ ನಿಲ್ಲುವುದಕ್ಕೆ ಒತ್ತಡ ಹಾಕಿದ್ದಾರೆ. ನಾನೇದಾರೂ ಬಾದಾಮಿಯಿಂದ ನಿಲ್ಲುವುದಿಲ್ಲ ಎಂದಿದ್ದೇನಾ? ಕೆಲವರು ಅಭಿಮಾನದಿಂದ ಕರೆಯುತ್ತಾರೆ, ಕೊಪ್ಪಳದಿಂದಲೂ ಇಲ್ಲೇ ನಿಲ್ಲಿ ಅಂತಾರೆ, ಕೋಲಾರದಿಂದಲೂ ಸ್ಪರ್ಧಿಸಿ ಅಂತಿದ್ದಾರೆ. ಚಾಮರಾಜಪೇಟೆಯಲ್ಲಿ ನಿಲ್ಲುತ್ತೇನೆ ಅಂತ ನಾನು ಹೇಳಿಲ್ಲ,'' ಎಂದರು.
Recommended Video
"ನಾನು ಬಾದಾಮಿ ಕ್ಷೇತ್ರದಲ್ಲೇ ನಿಲ್ಲುತ್ತೇನೆ, ನಾನು ಮೈಸೂರಿನಿಂದ ಬಾದಾಮಿಗೆ ಬಂದವನು. ಬಂದವನನ್ನು ಗೆಲ್ಲಿಸಿ ಕಳಿಸಿದ್ದೀರ. ನಾನು ಎರಡೇ ದಿನ ಆಗ ಬಂದಿದ್ದು, ನಾಮಪತ್ರ ಸಲ್ಲಿಸುವುದಕ್ಕೆ, ಪ್ರಚಾರಕ್ಕೆ ಮಾತ್ರ.''
"ನಾನು ಇದೇ ಭಾನುವಾರ ಅಲ್ಲಿಗೇ ಬರುತ್ತೇನೆ, ಅಲ್ಲೇ ನಿಮ್ಮನ್ನೆಲ್ಲ ಭೇಟಿ ಮಾಡುತ್ತೇನೆ. ನೀವೇನು ಹೆದರಬೇಡಿ,'' ಎಂದು ಬಾದಾಮಿ ಶಾಸಕರೂ ಆಗಿರುವ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.












Click it and Unblock the Notifications