ಉಮೇಶ್ ಕತ್ತಿ ಫೋನ್ ಮಾಡಿದ್ದು ಈ ವಿಚಾರಕ್ಕೆ...: ಸಿದ್ದರಾಮಯ್ಯ ಹೇಳಿಕೆ
ಬೆಂಗಳೂರು, ಆಗಸ್ಟ್ 23: ತಮಗೆ ಸಚಿವ ಸ್ಥಾನ ಸಿಗದೆ ಇರುವುದಕ್ಕೆ ಅಸಮಾಧಾನಗೊಂಡಿರುವ ಬಿಜೆಪಿ ಶಾಸಕ ಉಮೇಶ್ ಕತ್ತಿ ಅವರು ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದರು. ಬಿಜೆಪಿ ನಾಯಕರ ವಿರುದ್ಧ ಮುನಿಸಿಕೊಂಡಿರುವ ಅವರು ಕಾಂಗ್ರೆಸ್ ಸೇರ್ಪಡೆ ಅಥವಾ ಹೊಸ ಪಕ್ಷ ಸ್ಥಾಪನೆ ಸಂಬಂಧ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅವರ ಭೇಟಿಗೂ ಮುಂದಾಗಿದ್ದಾರೆ ಎನ್ನಲಾಗಿತ್ತು.
ಆದರೆ, ಉಮೇಶ್ ಕತ್ತಿ ಅವರು ತಮಗೆ ಕರೆ ಮಾಡಿರುವುದು ರಾಜಕೀಯ ಚರ್ಚೆಗೆ ಅಲ್ಲ. ತಾವಿಬ್ಬರೂ ಬಿಜೆಪಿ ಸರ್ಕಾರ ರಚನೆ, ಸಚಿವ ಸಂಪುಟ ಮುಂತಾದ ರಾಜಕೀಯ ವಿಚಾರಗಳ ಕುರಿತು ಮಾತನಾಡಿಯೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಉಮೇಶ್ ಕತ್ತಿ ಅವರು ತಮಗೆ ಫೋನ್ ಮಾಡಿರುವುದು ನಿಜ ಎಂದು ಸಿದ್ದಾರಮಯ್ಯ ಒಪ್ಪಿಕೊಂಡಿದ್ದಾರೆ. ಆದರೆ, ತಾವೇ ಸ್ವತಃ ಅವರಿಗೆ ಕರೆ ಮಾಡಿರುವುದಾಗಿ ಉಮೇಶ್ ಕತ್ತಿ ಹೇಳಿದ್ದಾರೆ ಎನ್ನಲಾದ ಸುದ್ದಿಯನ್ನು ಅವರು ನಿರಾಕರಿಸಿದರು.

''ಉಮೇಶ್ ಕತ್ತಿ ನನ್ನ ಹಳೆಯ ಸ್ನೇಹಿತರು. ಅವರು ಫೋನ್ ಮಾಡಿದ್ದು ನಿಜ. ನನ್ನ ಕಣ್ಣಿಗೆ ಆಪರೇಷನ್ ಆಗಿರುವುದರ ಕುರಿತು ವಿಚಾರಿಸಿದರು. ಅವರಾಗಿಯೇ ಕರೆ ಮಾಡಿ, ಕಣ್ಣಿನ ನೋವು ಹೇಗಿದೆ ಎಂದು ವಿಚಾರಿಸಿದರು. ಗುಣವಾಗುತ್ತಿದೆ. ಒಮ್ಮೆ ಸಿಗೋಣ ಎಂದೆ. ಅಷ್ಟೇ ನಾವಿಬ್ಬರು ಮಾತನಾಡಿರುವುದು'' ಎಂದು ಸಿದ್ದರಾಮಯ್ಯ ಹೇಳಿದರು.
''ನಾನು ಯಾರಿಗೂ ಪಕ್ಷಕ್ಕೆ ಬನ್ನಿ ಎಂದು ಕರೆಯುವುದಿಲ್ಲ. ಹಾಗೆಯೇ ಹೋಗಿ ಎಂದೂ ಹೇಳುವುದಿಲ್ಲ. ಇವರೆಲ್ಲ ನನ್ನನ್ನು ಕೇಳಿ ಬಂದವರೇ? ಪಕ್ಷಕ್ಕೆ ನಿಷ್ಠರಾಗಿದ್ದವರು, ಬಳಿಕ ಬೇಸರವಾಗಿ ಬಂದವರು'' ಎಂದು ಪಕ್ಕದಲ್ಲಿದ್ದ ಜಮೀರ್ ಅಹ್ಮದ್ ಅವರನ್ನು ತೋರಿಸಿ ಸಿದ್ದರಾಮಯ್ಯ ಚಟಾಕಿ ಹಾರಿಸಿದರು.












Click it and Unblock the Notifications